ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕೋವಿಡ್-19 ಲಸಿಕೆ ಕನಸು ನನಸು; ಇಲ್ಲಿದೆ ಮುಖ್ಯಾಂಶಗಳು

Last Updated 3 ಜನವರಿ 2021, 8:25 IST
ಅಕ್ಷರ ಗಾತ್ರ

ನವದೆಹಲಿ: ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ ಸಂಸ್ಥೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಷರತ್ತುಬದ್ಧ ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಭಾನುವಾರ ಅನುಮೋದನೆ ನೀಡುವುದರೊಂದಿಗೆ ದೇಶದಲ್ಲಿ ಕೋವಿಡ್-19 ಲಸಿಕೆ ಕನಸು ನನಸಾಗಿದೆ.

ಇದು ಭಾರತೀಯ ವೈದ್ಯಕೀಯ ವಲಯದಲ್ಲಿ ಅತಿ ದೊಡ್ಡ ಮೈಲುಗಲ್ಲಾಗಿ ಪರಿಗಣಿಸಲಾಗಿದ್ದು, ಕೋವಿಡ್-19 ಲಸಿಕೆಗೆ ಅನುಮೋದನೆ ನೀಡಿರುವ ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಈ ಸಂಬಂಧ ಮುಖ್ಯಾಂಶಗಳು ಇಲ್ಲಿ ಕೊಡಲಾಗಿದೆ.

ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ:
ಹೊಸ ವರ್ಷ ಜನವರಿ 3 ಭಾನುವಾರದಂದು ಸುದ್ದಿಗೋಷ್ಠಿಯಲ್ಲಿ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ ಸಂಸ್ಥೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಷರತ್ತುಬದ್ಧ ಲಸಿಕೆ ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿದೆ.

ಇದನ್ನೂ ಓದಿ:

ಎರಡು ಡೋಸ್:
ಈ ಲಸಿಕೆಗಳನ್ನು ಎರಡು ಡೋಸ್ ಪ್ರಮಾಣದಲ್ಲಿ ನೀಡಬೇಕಾಗುತ್ತದೆ.

ಶೇಕಡಾ 110ರಷ್ಟು ಸುರಕ್ಷಿತ:
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಸಿಜಿಐನ ವಿ.ಜಿ. ಸೋಮಾನಿ, ಸುರಕ್ಷತೆಯ ಬಗ್ಗೆ ಅಲ್ಪಸ್ವಲ್ಪ ಅನುಮಾನ ಇದ್ದಿದ್ದರೆ ನಾವಿದನ್ನು ಅನುಮೋದಿಸುವುದಿಲ್ಲ. ಲಸಿಕೆಗಳು ಶೇಕಡಾ 110ರಷ್ಟು ಸುರಕ್ಷಿತವಾಗಿದೆ. ಜ್ವರ ಹಾಗೂ ಅಲರ್ಜಿಯಂತಹ ಕೆಲವು ಅಡ್ಡ ಪರಿಣಾಮಗಳು ಪ್ರತಿ ಲಸಿಕೆಯಲ್ಲೂ ಸಾಮಾನ್ಯವಾಗಿದೆ. ಜನರು ಶಕ್ತಿಹೀನರಾಗುತ್ತಾರೆ ಎಂಬುದು ಅಸಂಬದ್ಧ ಎಂದು ಹೇಳಿದರು.

2ರಿಂದ 8 ಡಿಗ್ರಿ ತಾಪಮಾನದಲ್ಲಿ ಶೇಖರಣೆ:
ಈ ಎಲ್ಲ ಲಸಿಕೆಗಳನ್ನು ಎರಡರಿಂದ ಎಂಟು ಡಿಗ್ರಿ ತಾಪಾಮಾನದಲ್ಲಿ ಶೇಖರಿಸಿಡಬೇಕು.

ಭಾರತ್ ಬಯೋಟೆಕ್ 3ನೇ ಹಂತ ಡೇಟಾ ಹೊರಬಂದಿಲ್ಲ:
ಭಾರತ್ ಬಯೋಟೆಕ್ ಲಸಿಕೆಯ ಮೂರನೇ ಹಂತದ ಪರಿಣಾಮಕಾರಿತ್ವದ ಅಂಕಿಅಂಶವು ಇನ್ನಷ್ಟೇ ಹೊರಬರಬೇಕಿದೆ. ಅಲ್ಲದೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಪ್ರೊಟೊಕಾಲ್ ನಡೆಸಲು ಡಿಸಿಜಿಐ ಅನುಮತಿ ನೀಡಿದೆ.

ಕ್ಯಾಡಿಲಾ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್:
ತಜ್ಞರ ಸಮಿತಿ ಶಿಫಾರಸಿನಂತೆ 26,000 ಭಾರತೀಯರಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಕ್ಯಾಡಿಲಾ ಹೆಲ್ತ್‌ಕೇರ್‌ ಅನುಮತಿ ಕೋರಿದೆ. ಒಂದನೇ ಹಾಗೂ ಎರಡನೇ ಹಂತದ ಪ್ರಯೋಗದಲ್ಲಿ ಈ ಲಸಿಕೆಯು ಸುರಕ್ಷಿತವಾಗಿದೆ ಎಂದು ಮಧ್ಯಂತರ ಅಂಕಿಅಂಶವು ಸೂಚಿಸುತ್ತಿದೆ ಎಂದು ಡಿಸಿಜಿಐ ತಿಳಿಸಿದೆ.

ಭಾರತೀಯರಿಗೆ ಹೆಮ್ಮೆಯ ವಿಷಯ: ಪ್ರಧಾನಿ ಮೋದಿ
ತುರ್ತು ಬಳಕೆಗೆ ಅನುಮೋದನೆ ನೀಡಲಾಗಿರುವ ಎರಡು ಲಸಿಕೆಗಳನ್ನು ದೇಶದಲ್ಲೇ ಅಭಿವೃದ್ಧಿಗೊಳಿಸಲಾಗಿದೆ. ಇದು ಎಲ್ಲ ಭಾರತೀಯರಿಗೂ ಹೆಮ್ಮೆಯ ವಿಷಯ. ಆತ್ಮ ನಿರ್ಭರ ಭಾರತದ ಕನಸನ್ನು ಈಡೇರಿಸಲು ನಮ್ಮ ವೈಜ್ಞಾನಿಕ ವಲಯದ ಉತ್ಸಾಹವನ್ನು ಇದು ತೋರಿಸುತ್ತದೆ ಎಂದು ಭಾರತ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ವಿವರ:
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಇನ್ನೊಂದೆಡೆ ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಪರಿಷತ್ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT