ಗುರುವಾರ , ಮೇ 13, 2021
39 °C

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ| ಕೋವಿಡ್‌ ಸಾಂಕ್ರಾಮಿಕ ಚುನಾವಣೆಗೂ ಬಳಕೆ

ಶೋಮು ದಾಸ್‌ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಮಧ್ಯೆಯೇ ಅಪ್ಪಳಿಸಿದ ಕೋವಿಡ್‌–19ರ ಎರಡನೇ ಅಲೆಯು ರಾಜಕೀಯ ಅಸ್ತ್ರವಾಗಿಯೂ ಪರಿವರ್ತಿತವಾಗಿದೆ. ರಾಜ್ಯದಲ್ಲಿ ತೀವ್ರ ಹಣಾಹಣಿ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಬಿಜೆಪಿ ಎರಡೂ ಕೋವಿಡ್‌ ಅವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿವೆ.

ಪಶ್ಚಿಮ ಬಂಗಾಳದಲ್ಲಿ ಕೋವಿಡ್‌ ಪ್ರಕರಣಗಳು ತೀವ್ರವಾಗಿ ಏರಿಕೆ ಆಗುತ್ತಿವೆ. ದಿನದ ಏರಿಕೆಯು 10 ಸಾವಿರವನ್ನು ದಾಟಿದೆ. ಕೋವಿಡ್‌ ವಿಚಾರವನ್ನು ರಾಜಕೀಯಕ್ಕೆ ಮೊದಲು ಬಳಸಿಕೊಂಡಿದ್ದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ. ಹೊರ ರಾಜ್ಯದ ಜನರನ್ನು ಪ್ರಚಾರಕ್ಕೆ ಕರೆ ತಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಜ್ಯದಲ್ಲಿ ಕೋವಿಡ್‌ ಹರಡಲು ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪಶ್ಚಿಮ ಬಂ‌ಗಾಳ ಮತ್ತು ಇತರ ರಾಜ್ಯಗಳಲ್ಲಿ ತಲೆದೋರಿರುವ ಕೋವಿಡ್‌ ತಡೆ ಲಸಿಕೆಯ ಕೊರತೆಯನ್ನೂ ಮಮತಾ ಅವರು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಲಸಿಕೆ ಖರೀದಿಗೆ ರಾಜ್ಯಗಳಿಗೆ ಅವಕಾಶ ಕೊಡಬೇಕು ಎಂದು ಪದೇ ಪದೇ ಕೇಳಿಕೊಂಡರೂ ಪ್ರಧಾನಿ ಮೋದಿ ಅವರು ಅದಕ್ಕೆ ಅವಕಾಶ ಕೊಟ್ಟಿಲ್ಲ ಎಂದೂ ಮಮತಾ ಹೇಳಿದ್ದಾರೆ.

ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಲಸಿಕೆ ಪೂರೈಕೆಯು ಅವ್ಯವಸ್ಥಿತವಾಗಿದೆ. ಲಸಿಕೆಯ ಕೊರತೆಯೂ ಇದೆ ಎಂದು ಮೋದಿ ಅವರಿಗೆ ಬರೆದ ಪತ್ರದಲ್ಲಿ ಮಮತಾ ಆರೋಪಿಸಿದ್ದಾರೆ. ಕೇಂದ್ರವು ರಾಜ್ಯ ಸರ್ಕಾರದ ಜತೆಗೆ ಸಹಕರಿಸುತ್ತಿಲ್ಲ ಎಂದೂ ಅವರು ಆರೋಪಿಸಿದ್ದಾರೆ. 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಕಲ್ಪಿಸಿರುವ ಕೇಂದ್ರದ ನಿರ್ಧಾರವನ್ನು ‘ಹುಸಿ ಮಾತು’ ಎಂದು ಮಮತಾ ತಳ್ಳಿ ಹಾಕಿದ್ದಾರೆ. ಮಾರುಕಟ್ಟೆಯಲ್ಲಿ ಲಸಿಕೆ ಲಭ್ಯವಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯಿಂದ ನುಣುಚಿಕೊಂಡು ಇಂತಹ ನಿರ್ಧಾರ ಕೈಗೊಂಡರೆ ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮೋದಿ ಅವರು ನಡೆಸಿದ ರ್‍ಯಾಲಿಗಳಲ್ಲಿ ಅಂತರ ಕಾಯ್ದುಕೊಂಡಿಲ್ಲ. ರಾಜಕೀಯ ಲಾಭಕ್ಕಾಗಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

‘ಬಿಜೆಪಿ ಹೊರಗಿನವರ ಪಕ್ಷ’ ಎಂಬ ಆರೋಪವನ್ನು ಮಮತಾ ಅವರು ಮೊದಲಿನಿಂದಲೂ ಮಾಡುತ್ತಾ ಬಂದಿದ್ದಾರೆ. ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ಅದಕ್ಕೆ ಬೇರೊಂದು ತಿರುವನ್ನೂ ಅವರು ಕೊಟ್ಟಿದ್ದಾರೆ. ಹೊರಗಿನಿಂದ ಸಾವಿರಾರು ಜನರನ್ನು ಪಶ್ಚಿಮ ಬಂಗಾಳಕ್ಕೆ ಬಿಜೆಪಿ ಕರೆತಂದಿದೆ. ಆದರೆ ಅವರಲ್ಲಿ ಯಾರನ್ನೂ ಸರಿಯಾದ ಪ‍ರೀಕ್ಷೆಗೆ ಒಳಪಡಿಸಿಲ್ಲ. ಈ ಹೊರಗಿನವರು ರಾಜ್ಯದಾದ್ಯಂತ ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಸ್ಥಳೀಯರ ಜತೆಗೆ ಬೆರೆಯುತ್ತಿದ್ದಾರೆ. ಈ ಮೂಲಕ ಸೋಂಕು ಹರಡುತ್ತಿದ್ದಾರೆ ಎಂದು ಮಮತಾ ಆಪಾದಿಸಿದ್ದಾರೆ. 

ಚುನಾವಣಾ ಆಯೋಗವನ್ನೂ ಅವರು ಬಿಟ್ಟಿಲ್ಲ. ಉಳಿದ ಮೂರು ಹಂತಗಳ ಮತದಾನವನ್ನು ಒಂದೇ ಹಂತದಲ್ಲಿ ಮುಗಿಸಿ ಬಿಡಿ ಎಂದು ಅವರು ಆಯೋಗವನ್ನು ಪದೇ ಪದೇ ಕೋರಿದ್ದಾರೆ. ಆದರೆ, ಮೋದಿ ಅವರ ರ್‍ಯಾಲಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಆಯೋಗವು ಒಂದೇ ಹಂತದಲ್ಲಿ ಮತದಾನ ನಡೆಸಲು ಮುಂದಾಗುತ್ತಿಲ್ಲ ಎಂದು ಮಮತಾ ಹೇಳಿದ್ದಾರೆ.

‘ಟಿಎಂಸಿಗೆ ಬೇರೆ ವಿಷಯಗಳಿಲ್ಲ’

ಮಮತಾ ಮತ್ತು ಟಿಎಂಸಿಯ ಆರೋಪಗಳಿಗೆ ಬಿಜೆಪಿ ತಿರುಗೇಟು ನೀಡಿದೆ. ಟಿಎಂಸಿಗೆ ಈಗ ಜನರ ಮುಂದೆ ಹೇಳಲು ಯಾವುದೇ ವಿಷಯ ಇಲ್ಲ. ಚಾಲ್ತಿಯಲ್ಲಿ ಇರಬೇಕು ಎಂಬ ಕಾರಣಕ್ಕೆ ಕೋವಿಡ್‌ ಸಾಂಕ್ರಾಮಿಕಕ್ಕೆ ಆ ಪಕ್ಷವು ಜೋತು ಬಿದ್ದಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕದ ವಕ್ತಾರ ಸಮಿಕ್‌ ಭಟ್ಟಾಚಾರ್ಯ ಹೇಳಿದ್ದಾರೆ. 

ಸಾಂಕ್ರಾಮಿಕ ನಿಯಂತ್ರಣದ ವಿಚಾರದಲ್ಲಿ ಮಮತಾ ಅವರು ನಿಜಕ್ಕೂ ಗಂಭೀರವಾಗಿ ಇದ್ದಿದ್ದರೆ, ಪ್ರಧಾನಿ ನಡೆಸಿದ ಮುಖ್ಯಮಂತ್ರಿಗಳ ಸಭೆಯನ್ನು ಅವರು ತಪ್ಪಿಸಿಕೊಳ್ಳುತ್ತಿರಲಿಲ್ಲ ಎಂದೂ ಬಿಜೆಪಿ ಮುಖಂಡರು ಆಪಾದಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು