ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ವಿಮಾನ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಸೂಚನೆ

ವಿಮಾನ ನಿಲ್ದಾಣ, ಪ್ರಯಾಣದ ವೇಳೆ ಮಾಸ್ಕ್‌ ಧಾರಣೆ, ಅಂತರ ಪಾಲನೆ ಕಡ್ಡಾಯ
Last Updated 13 ಮಾರ್ಚ್ 2021, 20:20 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೆ, ವಿಮಾನ ಪ್ರಯಾಣಿಕರು ಮುಂಜಾಗ್ರತೆಯಾಗಿ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಕೆಲ ಪ್ರಯಾಣಿಕರು ಮಾಸ್ಕ್ ಧರಿಸುತ್ತಿಲ್ಲ. ಕೆಲವರು ಮೂಗು, ಬಾಯಿ ಮುಚ್ಚುವಂತೆ ಧರಿಸುವುದಿಲ್ಲ. ಕೆಲವರು ವಿಮಾನನಿಲ್ದಾಣ ಪ್ರವೇಶಿಸಿದಂತೆ ಮಾಸ್ಕ್ ತೆಗೆದುಬಿಡುತ್ತಾರೆ. ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.

ವಿಮಾನ ನಿಲ್ದಾಣವನ್ನು ಪ್ರವೇಶಿಸುವುದರಿಂದ ನಿರ್ಗಮನದವರೆಗೂ ಮಾಸ್ಕ್‌ ಧರಿಸುವುದು ಸೇರಿದಂತೆ ಕಟ್ಟುನಿಟ್ಟಾಗಿ ಸೂಚನೆಗಳನ್ನು ಪಾಲಿಸಬೇಕು. ಪ್ರಯಾಣದುದ್ದಕ್ಕೂ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಕೆಲ ನಿರ್ದಿಷ್ಟ ಸಂದರ್ಭಗಳನ್ನು ಹೊರತುಪಡಿಸಿ ಮೂಗು, ಬಾಯಿ ಮುಚ್ಚುವಂತೆಯೇ ಮಾಸ್ಕ್ ಧರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಪ್ರಯಾಣಿಕರು ನಿಲ್ದಾಣ ಪ್ರವೇಶಿಸುವಾಗಲೇ ಮಾಸ್ಕ್‌ ಧರಿಸಿದ್ದಾರೆ ಎಂಬುದನ್ನು ಭದ್ರತಾ ಸಿಬ್ಬಂದಿ ಗಮನಿಸಿ, ಕ್ರಮವಹಿಸಬೇಕು. ಸರಿಯಾದ ಕ್ರಮದಲ್ಲಿಯೇ ಮಾಸ್ಕ್‌ ಧರಿಸಲಾಗಿದೆ ಎಂಬುದನ್ನು ನಿಲ್ದಾಣದ ಅಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು. ಯಾವುದೇ ಪ್ರಯಾಣಿಕ ಮಾರ್ಗಸೂಚಿಯನ್ನು ಪಾಲಿಸದೇ ಇದ್ದಲ್ಲಿ ಕಟ್ಟೆಚ್ಚರ ನೀಡಬೇಕು ಎಂದು ಕೇಂದ್ರ ವೈಮಾನಿಕ ನಿರ್ದೇಶನಾಲಯದ ಪ್ರಧಾನ ನಿರ್ದೇಶಕರು ಈ ಕುರಿತ ಹೇಳಿಕೆಯಲ್ಲಿ ಸೂಚಿಸಿದ್ದಾರೆ.

ಪುನರಾವರ್ತಿತ ಎಚ್ಚರಿಕೆಯ ನಡುವೆಯೂ ಯಾವುದೇ ಪ್ರಯಾಣಿಕ ಅಂತಹ ಸೂಚನೆಗಳಿಗೆ ಬದ್ಧರಾಗದೇ ಇದ್ದರೆ ಅವರನ್ನು ‘ಅನುಚಿತ ವರ್ತನೆ ಪ್ರಯಾಣಿಕ’ ಎಂದು ಪರಿಗಣಿಸಿ ಕ್ರಮವಹಿಸಬೇಕು ಎಂದು ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

‘75ಕ್ಕೂ ಹೆಚ್ಚು ದೇಶಗಳಿಗೆಭಾರತದಿಂದ ಕೋವಿಡ್ ಲಸಿಕೆ’
ತಿರುಪತಿ (ಎ.ಪಿ):
ಕೋವಿಡ್‌ ಬಿಕ್ಕಟ್ಟಿನ ಅವಧಿಯಲ್ಲಿ ಭಾರತವು ಸುಮಾರು 150ಕ್ಕೂ ಹೆಚ್ಚು ದೇಶಗಳಿಗೆ ಔಷಧ ನೆರವು ಒದಗಿಸಿದೆ ಎಂದು ರೈಲ್ವೆ ಸಚಿವ ಪೀಯೂಶ್ ಗೋಯಲ್‌ ಅವರು ಶನಿವಾರ ತಿಳಿಸಿದರು.

ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಮೂಲಕ 130 ಕೋಟಿಗೂ ಅಧಿಕ ಜನಸಂಖ್ಯೆಯ ಈ ದೇಶ ಮೌನವಾಗಿಯೇ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತಿಳಿಸಿದೆ ಎಂದರು.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಯಾವುದೇ ದೇಶದ ಮೇಲೂ ಅ‌ವಲಂಬಿತವಾಗಲಿಲ್ಲ. ಬದಲಿಗೆ ನೆರವು ನೀಡಿತು. ‘ವಸುಧೈವ ಕುಟುಂಬಕಂ’ ಚಿಂತನೆಗೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 150ಕ್ಕೂ ಹೆಚ್ಚು ದೇಶಗಳಿಗೆ ಔಷಧವನ್ನು, 75ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆಯನ್ನು ಪೂರೈಸಿತು ಎಂದು ತಿಳಿಸಿದರು.

ಕೋವಿಡ್‌ 2ನೇ ಅಲೆ‌ ಸ್ಪಷ್ಟತೆ ಇಲ್ಲ: ವಿಜ್ಞಾನಿಗಳು
ನವದೆಹಲಿ:
‘ದೇಶದಲ್ಲಿ ಪ್ರಸ್ತುತ ಕೋವಿಡ್‌ನ ಎರಡನೇ ಅಲೆ ಆರಂಭವಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಏನೋ ಆಗುತ್ತಿದೆ ಎಂಬುದು ನಿಜ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಲು ಮಾರ್ಗಸೂಚಿ ನಿಯಮ ಪಾಲಿಸುವಲ್ಲಿ ಜನರ ನಿರ್ಲಕ್ಷ್ಯವೇ ಕಾರಣ’ ಎಂದು ಸಿಎಸ್‌ಐಆರ್‌ನ ಜೀವವಿಜ್ಞಾನ ವಿಭಾಗದ ನಿರ್ದೇಶಕ ಅನುರಾಗ್ ಅಗರವಾಲ್ ಹೇಳಿದರು.

ಕೋವಿಡ್‌ ತಡೆಯಲು ಅಗತ್ಯ ಮುಂಜಾಗ್ರತೆಯನ್ನು ವಹಿಸುವುದು ಮತ್ತು ಲಸಿಕೆ ನೀಡುವುದೇ ಈಗಿರುವ ಮಾರ್ಗ. ಸದ್ಯ, ಕೋವಿಡ್‌ ನಿಯಂತ್ರಣ ಮತ್ತು ಎರಡನೇ ಅಲೆ ಆತಂಕದ ನಡುವೆ ತೆಳುವಾದ ಗೆರೆಯಂತೂ ಇದೆ ಎಂದು ಹೇಳಿದರು.

ಲವ್ಲಿ ಪ್ರೊಫೆಷನಲ್‌ ಯೂನಿವರ್ಸಿಟಿಯ ಅನ್ವಯಿಕ ವೈದ್ಯವಿಜ್ಞಾನ ವಿಭಾಗದ ಮುಖ್ಯಸ್ಥೆ, ಡೀನ್‌ ಮೋನಿಕಾ ಗುಲಾಟಿ ಅವರ ಪ್ರಕಾರ, ಕೋವಿಡ್‌ನ ಹೊಸ ರೂಪದ ಸೋಂಕು ಕಾಣಿಸಿರುವ ಇತರೆ ದೇಶಗಳ ಪರಿಸ್ಥಿತಿ ಭಾರತದಲ್ಲಿ ಇಲ್ಲ. ಹಾಲಿ ಕಾಣಿಸಿಕೊಂಡಿರುವ ಮಾದರಿಯ ಸೋಂಕು ಕೂಡಾ ಸಾಂಕ್ರಾಮಿಕವಲ್ಲ ಎಂದು ಹೇಳಿದರು.

ಮಾರ್ಗಸೂಚಿ ಪಾಲನೆ ಕುರಿತ ಜನರ ವರ್ತನೆ ಹಾಗೂ ಹೊಸ ಮಾದರಿ ಸೋಂಕು ಪ್ರಕರಣಗಳು ಹೆಚ್ಚಾಗಲು ಕಾರಣ ಇರಬಹುದು. ಹಿಂದಿನ ಸ್ಥಿತಿಗೆ ಹೋಲಿಸಿದರೆ ಈಗ ಏರಿಕೆ ಪ್ರಮಾಣವು ಮಂದಗತಿಯಲ್ಲಿದೆ ಎಂದು ಅಭಿಪ್ರಾಯಪಟ್ಟರು.

ಈ ಮಧ್ಯೆ, ಶನಿವಾರ ದೇಶದಾದ್ಯಂತ ಒಟ್ಟು 24,882 ಪ್ರಕರಣಗಳು ವರದಿಯಾಗಿದ್ದು, ‌ಇದು ಕಳೆದ 83 ದಿನಗಳಲ್ಲಿಯೇ ಅತ್ಯಧಿಕವಾಗಿದೆ. ಈ ಹಿಂದೆ ಅತ್ಯಧಿಕ ಪ್ರಕರಣಗಳು 26,624 ಆಗಿದ್ದು, ಡಿಸೆಂಬರ್‌ 20,2020ರಂದು ವರದಿ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT