ಶುಕ್ರವಾರ, ಏಪ್ರಿಲ್ 23, 2021
30 °C
ಬೃಹತ್‌ ಅಭಿಯಾನ

60 ದಾಟಿದವರು, ಅನಾರೋಗ್ಯವಿರುವ 45ರ ಮೇಲಿನ 27 ಕೋಟಿ ಮಂದಿಗೆ ಲಸಿಕೆ: ಇಂದು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ಅಭಿಯಾನಕ್ಕೆ ಭಾರತವು ಸೋಮವಾರ ಚಾಲನೆ ನೀಡಲಿದೆ. ಕೋವಿಡ್‌–19 ತಡೆಯ ಎರಡನೇ ಹಂತದ ಲಸಿಕೆ ಕಾರ್ಯಕ್ರಮ ಸೋಮವಾರದಿಂದ (ಮಾರ್ಚ್‌ 1) ಆರಂಭವಾಗಲಿದೆ. ಲಸಿಕೆ ನೋಂದಣಿಯ ಕೋ–ವಿನ್‌ 2.0 ಆ್ಯಪ್‌ ಅಥವಾ ಪೋರ್ಟಲ್‌ ಸೋಮವಾರ ಬೆಳಿಗ್ಗೆ 9 ಗಂಟೆಗೆ ಸಕ್ರಿಯವಾಗಲಿದೆ.

ಅರ್ಹ ವ್ಯಕ್ತಿಗಳು ಲಸಿಕೆ ಪಡೆಯುವುದಕ್ಕಾಗಿ ಕೋ–ವಿನ್ ಆ್ಯಪ್‌ ಅಥವಾ ಆರೋಗ್ಯ ಸೇತು ಆ್ಯಪ್‌ ಮೂಲಕ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ಸಮಯ ಕಾಯ್ದಿರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ. 

60 ವರ್ಷ ದಾಟಿದವರು ಮತ್ತು 2022ರ ಜನವರಿ 1ಕ್ಕೆ 60 ವರ್ಷ ತುಂಬುವವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಲು ಅರ್ಹರು. ಬೇರೆ ರೋಗಗಳನ್ನು ಹೊಂದಿರುವ, 2022ರ ಜನವರಿ 1ಕ್ಕೆ 45 ವರ್ಷ ತುಂಬುವವರು ಮತ್ತು ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರು. 20 ಅನಾರೋಗ್ಯಗಳನ್ನು ಆರೋಗ್ಯ ಸಚಿವಾಲಯವು ಪಟ್ಟಿ ಮಾಡಿದೆ.  

ಒಂದು ಮೊಬೈಲ್‌ ಸಂಖ್ಯೆ ನೀಡಿ ಗರಿಷ್ಠ ನಾಲ್ಕು ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬಹುದು. ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌, ಚಾಲನಾ ಪರವಾನಗಿ, ಪ್ಯಾನ್‌ ಕಾರ್ಡ್‌, ಎನ್‌ಪಿಆರ್‌ ಸ್ಮಾರ್ಟ್‌ ಕಾರ್ಡ್‌, ಭಾವಚಿತ್ರ ಇರುವ ಪೆನ್ಶನ್‌ ಪತ್ರದಲ್ಲಿ ಯಾವುದಾದರೂ ಒಂದನ್ನು ಬಳಸಿ ನೋಂದಣಿ ಮಾಡಬಹುದು. 

ಕೇಂದ್ರ ಸರ್ಕಾರವು ಗುರುತಿಸಿರುವ 8,600ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಿಕೆ ನಡೆಯಲಿದೆ. ಪ್ರತಿ ದಿನ ಸಂಜೆ 3 ಗಂಟೆಯವರೆಗೆ ಈ ಆಸ್ಪತ್ರೆಗೆ ಭೇಟಿ ನೀಡಿಯೂ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದು. 

ರಾಜ್ಯದ 250ಕ್ಕೂ ಹೆಚ್ಚು ಆಸ್ಪತ್ರೆಗಳು: ಬೆಂಗಳೂರು: ಲಸಿಕೆ ನೀಡಿಕೆಗಾಗಿ ರಾಜ್ಯದ 250ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಗುರುತಿಸಲಾಗಿದೆ.

ರಾಜ್ಯದಲ್ಲಿ ಜ.16 ರಿಂದ ಪ್ರಾರಂಭವಾಗಿದ್ದ ಮೊದಲ ಹಂತದ ಅಭಿಯಾನದಲ್ಲಿ ಆರೋಗ್ಯ ಕಾರ್ಯಕ‌ರ್ತರಿಗೆ ಲಸಿಕೆ ನೀಡಲಾಗಿದೆ. ಈವರೆಗೆ 4,47,267 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 1,58,575 ಮಂದಿ ಮುಂಚೂಣಿ ಯೋಧರು ಲಸಿಕೆ ಪಡೆದುಕೊಂಡಿದ್ದಾರೆ. 

ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಆಯ್ದ ವೈದ್ಯಕೀಯ ಕಾಲೇಜುಗಳು ಹಾಗೂ ಕೆಲ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಲಸಿಕೆ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ₹ 250 ಪಾವತಿಸಬೇಕು. ಈಗಾಲೇ ಮೊದಲ ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ನೀಡಿಕೆ ಮುಂದುವರಿಯಲಿದೆ. ಅದೇ ರೀತಿ, ಮೊದಲ ಹಂತದಲ್ಲಿ ಬಿಟ್ಟು ಹೋದ ಮತ್ತು ಗೈರಾದ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಯೋಧರಿಗೆ ಸಹ ಲಸಿಕೆ ನೀಡಲಾಗುತ್ತದೆ.

ಲಸಿಕೆ ವೆಚ್ಚ: ಮಜುಂದಾರ್‌ ಶಾ ಆಕ್ರೋಶ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್–19 ಲಸಿಕೆಗೆ ₹ 250ರ ಮಿತಿ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್‌ ಷಾ ವಿರೋಧಿಸಿದ್ದಾರೆ. ‘ಲಸಿಕೆಗೆ ನಿಗದಿ ಮಾಡಿರುವ ಬೆಲೆಯು ತೀರಾ ಕಡಿಮೆ. ಲಸಿಕೆ ಕಂಪನಿಗಳಿಗೆ ಮೋಸಹೋದಂತಹ ಅನುಭವ ಆಗುತ್ತಿದೆ’ ಎಂದು ಕೂಡ ಅವರು ಹೇಳಿದ್ದಾರೆ.

ಸರ್ಕಾರ ನಿಗದಿ ಮಾಡಿರುವ ₹ 250ರಲ್ಲಿ, ಒಂದು ಡೋಸ್ ಲಸಿಕೆಯ ವೆಚ್ಚ ₹ 150 ಹಾಗೂ ಸೇವಾ ಶುಲ್ಕ ₹ 100 ಸೇರಿದೆ ಎನ್ನಲಾಗಿದೆ.

ಆಯ್ಕೆಗೆ ಅವಕಾಶ ಇಲ್ಲ: ದೇಶದಲ್ಲಿ ಈಗ ಎರಡು ಲಸಿಕೆಗಳು ಲಭ್ಯ ಇವೆ. ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ತಯಾರಿಸಿರುವ ಕೋವಿಶೀಲ್ಡ್‌ ಮತ್ತು ಹೈದರಾಬಾದ್‌ನ ಭಾರತ್‌ ಬಯೊಟೆಕ್‌ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ಗಳನ್ನು ಜನರು ಪಡೆದುಕೊಳ್ಳಬಹುದು. ಆದರೆ, ಇದರಲ್ಲಿ ಯಾವುದನ್ನು ಪಡೆದುಕೊಳ್ಳಬೇಕು ಎಂಬ ಆಯ್ಕೆಯು ಜನರಿಗೆ ಇಲ್ಲ. ಆಸ್ಪತ್ರೆಯವರು ಯಾವ ಲಸಿಕೆ ನೀಡುತ್ತಾರೆಯೋ ಅದನ್ನೇ ಪಡೆದುಕೊಳ್ಳಬೇಕು. ಹೆಚ್ಚಿನವರಿಗೆ ಕೋವಿಶೀಲ್ಡ್‌ ಲಸಿಕೆಯನ್ನೇ ನೀಡಲಾಗುವುದು. ಆದರೆ, ಪರಿಣಾಮಕಾರಿತ್ವದ ದತ್ತಾಂಶ ಲಭ್ಯ ಇಲ್ಲದೆಯೂ ಭಾರತೀಯ ಔಷಧ ನಿಯಂತ್ರಕರು ಅನುಮೋದನೆ ನೀಡಿರುವ ಕೋವ್ಯಾಕ್ಸಿನ್‌ ಲಸಿಕೆಯನ್ನು ಕೆಲವು ಜನರಿಗೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು