ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ವಿಪಕ್ಷ ನಡುವೆ ಕೋವಿಡ್ ಲಸಿಕೆ ಸಮರ

Last Updated 3 ಜನವರಿ 2021, 18:49 IST
ಅಕ್ಷರ ಗಾತ್ರ

ನವದೆಹಲಿ: ಭಾರತ್‌ ಬಯೊಟೆಕ್‌ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ನ ತುರ್ತು ಬಳಕೆಗೆ ಅನುಮೋದನೆ ನೀಡಿದ ವಿಷಯವು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಕೋವ್ಯಾಕ್ಸಿನ್‌ಗೆ ಅನುಮೋದನೆ ನೀಡುವ ವಿಚಾರದಲ್ಲಿ ಆತುರ ತೋರಲಾಗಿದೆ. ಸಮಗ್ರ ಪ್ರಯೋಗ ಪೂರ್ಣಗೊಳ್ಳುವವರೆಗೆ ಈ ಲಸಿಕೆಯನ್ನು ಜನರಿಗೆ ನೀಡುವುದು ಅಪಾಯಕಾರಿ ಎಂದು ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್‌ ಎಚ್ಚರಿಸಿದ್ದಾರೆ.

ವಿರೋಧ ಪಕ್ಷಗಳ ಮುಖಂಡರನ್ನು ‘ಲಸಿಕೆ ಶಂಕಿತರು’ ಎಂದು ಬಿಜೆಪಿ ಅಧ್ಯಕ್ಷ ಜೆ.‍ಪಿ.ನಡ್ಡಾ ಜರೆದಿದ್ದಾರೆ. ಇವರೆಲ್ಲರೂ ‘ಸ್ಥಾಪಿತ ಹಿತಾಸಕ್ತಿ’ಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

‘ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಭಾರತೀಯವಾದ ಯಾವುದರ ಬಗ್ಗೆಯೂ ಹೆಮ್ಮೆ ಹೊಂದಿಲ್ಲ. ವಿರೋಧ ಪಕ್ಷಗಳು ಲಸಿಕೆಯ ಬಗ್ಗೆ ಹೇಳಿರುವ ಸುಳ್ಳುಗಳನ್ನು ಸ್ಥಾಪಿತ ಹಿತಾಸಕ್ತಿಗಳು ತಮ್ಮ ಕಾರ್ಯಸೂಚಿಯನ್ನು ಜಾರಿಗೆ ತರಲು ಬಳಸಿಕೊಳ್ಳಬಹುದು. ಈ ಬಗ್ಗೆ ಈ ಪ‍ಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಭಾರತದ ಜನರು ಇಂತಹ ರಾಜಕೀಯವನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ. ಮುಂದೆಯೂ ಹಾಗೆಯೇ ಮಾಡುತ್ತಾರೆ’ ಎಂದು ನಡ್ಡಾ ಹೇಳಿದ್ದಾರೆ.

ಈ ಲಸಿಕೆಗಳ ಬಳಕೆಯಿಂದ ನಪುಂಸಕತ್ವ ಉಂಟಾಗಬಹುದು ಎಂದು ಸೆರಂ ಇನ್ಸ್‌ಟಿಟ್ಯೂಟ್‌ ಮತ್ತು ಭಾರತ್‌ ಬಯೊಟೆಕ್‌ ಅಭಿವೃದ್ಧಿಪಡಿಸಿದ ಲಸಿಕೆಗಳಿಗೆ ಭಾರತದ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡುವುದಕ್ಕೂ ಮುಂಚೆ ಸಮಾಜವಾದಿ ಪಕ್ಷದ ಮುಖಂಡ ಅಶುತೋಷ್‌ ಸಿನ್ಹಾ ಹೇಳಿದ್ದರು.

ಆದರೆ, ಲಸಿಕೆಯಿಂದ ನಪುಂಸಕತ್ವ ಬರಬಹುದು ಎಂಬ ಹೇಳಿಕೆಯು ‘ಸಂಪೂರ್ಣ ಅಸಂಬದ್ಧ’ ಎಂದು ಡಿಸಿಜಿಐ ವಿ.ಜಿ. ಸೋಮಾನಿ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿತವಾದ ಮೂರನೇ ಹಂತದ ಪ್ರಯೋಗಗಳ ಮಾನದಂಡಗಳನ್ನು ಕೋವ್ಯಾಕ್ಸಿನ್‌ಗಾಗಿ ಸಡಿಲಿಸಲಾಗಿದೆ ಎಂಬುದೇ ದೊಡ್ಡ ಒಗಟು ಎಂದು ಜೈರಾಮ್‌ ಹೇಳಿದ್ದಾರೆ. ‘ಕೋವ್ಯಾಕ್ಸಿನ್‌ನ ಮೂರನೇ ಹಂತದ ಪ್ರಯೋಗ ನಡೆದಿಲ್ಲ. ಈಗ ನೀಡಿರುವ ಅನುಮೋದನೆಯು ಆತುರದ ಕ್ರಮ ಮತ್ತು ಅಪಾಯಕಾರಿ. ಪ್ರಯೋಗಗಳು ಪೂರ್ಣಗೊಳ್ಳುವವರೆಗೆ ಈ ಲಸಿಕೆಯ ಬಳಕೆಗೆ ತಡೆ ಒಡ್ಡಬೇಕು. ಅಲ್ಲಿಯವರೆಗೆ ಕೋವಿಶೀಲ್ಡ್‌ ಬಳಸಬಹುದು’ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅಭಿಪ್ರಾಯಪಟ್ಟಿದ್ದಾರೆ.

ಲಸಿಕೆಗೆ ಸಂಬಂಧಿಸಿದ ಎಲ್ಲ ಪ್ರಯೋಗಗಳು ಮತ್ತು ಫಲಿತಾಂಶದ ದತ್ತಾಂಶಗಳನ್ನು ಬಹಿರಂಗಪಡಿಸಿ, ಜನರಲ್ಲಿ ವಿಶ್ವಾಸ ಮೂಡಿಸಬೇಕು. ಜಾಗತಿಕ ಮಟ್ಟದಲ್ಲಿ ಇಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.

ಆದರೆ, ಲಸಿಕೆಗಳ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ ಮುಖಂಡರ ವಿರುದ್ಧ ಕೇಂದ್ರ ಸಚಿವ ಹರದೀಪ್‌ ಸಿಂಗ್‌ ಪುರಿ ಅವರು ಹರಿಹಾಯ್ದಿದ್ದಾರೆ.

ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಎಚ್ಚರಿಕೆಯ ಹೆಜ್ಜೆ ಇರಿಸಿದ್ದಾರೆ. ಭಾರತ್‌ ಬಯೊಟೆಕ್ ಮತ್ತು ಸೆರಂ ಇನ್ಸ್‌ಟಿಟ್ಯೂಟ್‌ನ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಉತ್ತರವಿಲ್ಲದ ಪ್ರಶ್ನೆಗಳು

ಕೋವಿಡ್‌ ಲಸಿಕೆಗಳ ತುರ್ತು ಸಂದರ್ಭದ ಬಳಕೆಗೆ ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಒಪ್ಪಿಗೆ ಕೊಟ್ಟಾಗಿದೆ. ಆದರೆ, ಈ ಒಪ್ಪಿಗೆ ನೀಡಲು ಅನುಸರಿಸಿದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳು ಉದ್ಭವಿಸಿವೆ.

* ಸೆರಂ ಇನ್‌ಸ್ಟಿಟ್ಯೂಟ್‌‌ ತಯಾರಿಸಿರುವ ಲಸಿಕೆಯ ಪ್ರಮಾಣದ (ಡೋಸೇಜ್‌) ಬಗ್ಗೆ ಗೊಂದಲ ಇದೆ. ಎರಡು ಪೂರ್ತಿ ಡೋಸ್‌ಗಳನ್ನು ನೀಡಬೇಕೇ ಅಥವಾ ಮೊದಲು ಅರ್ಧ ಡೋಸ್‌ ನೀಡಿ, ಎರಡನೇ ಬಾರಿ ಪೂರ್ತಿ ಡೋಸ್‌ ನೀಡಬೇಕೇ ಎಂಬ ವಿಚಾರ ಸ್ಪಷ್ಟವಾಗಿಲ್ಲ. ವಿದೇಶಗಳಲ್ಲಿ ನಡೆಸಿರುವ ಪ್ರಯೋಗದಲ್ಲಿ ಎರಡನೆಯ ವಿಧಾನವು ಹೆಚ್ಚು ಪರಿಣಾಮಕಾರಿ ಎಂಬುದು ಕಂಡುಬಂದಿದೆ

* ಕೋವಿಶೀಲ್ಡ್‌ ಲಸಿಕೆಯು ಶೇ 70.4ರಷ್ಟು ಪರಿಣಾಮಕಾರಿಯಾಗಿದೆ ಎಂಬುದು ವಿದೇಶಗಳಲ್ಲಿ ನಡೆಸಿದ ಪ್ರಯೋಗಗಳಲ್ಲಿ ಸಾಬೀತಾಗಿದೆ ಎಂದು ಡಿಸಿಜಿಐ ಹೇಳಿದೆ. ಇದು ಬ್ರೆಜಿಲ್‌, ದಕ್ಷಿಣ ಆಫ್ರಿಕಾ ಹಾಗೂ ಬ್ರಿಟನ್‌ನಲ್ಲಿ ಆಸ್ಟ್ರಾಜೆನೆಕಾ–ಆಕ್ಸ್‌ಫರ್ಡ್‌ ಯುನಿವರ್ಸಿಟಿಯವರು ಲಸಿಕೆಯ ಮೂರನೇ ಹಂತದ ಪ್ರಯೋಗದಲ್ಲಿ ಕಂಡುಕೊಂಡ ಪರಿಣಾಮ ಎಂಬುದು ವೈದ್ಯಕೀಯ ನಿಯತಕಾಲಿಕ ‘ಲ್ಯಾನ್ಸೆಟ್‌’ನಲ್ಲಿ ಪ್ರಕಟವಾಗಿದೆ. ಆದರೆ, ಸಂಶೋಧಕರು ಎರಡು ಪ್ರಯೋಗಗಳ ವರದಿಗಳನ್ನು ಮಿಶ್ರಣ ಮಾಡಿ ಈ ಫಲಿತಾಂಶ ನೀಡಿದ್ದಾರೆ ಎಂಬ ಆರೋಪಗಳೂ ಇವೆ

* ಎರಡು ಪೂರ್ಣ ಪ್ರಮಾಣದ ಡೋಸ್‌ಗಳನ್ನು ಪಡೆದ ಸ್ವಯಂಸೇವಕರಲ್ಲಿ ಲಸಿಕೆಯು ಶೇ 62ರಷ್ಟು ಪರಿಣಾಮಕಾರಿಯಾಗಿತ್ತು. ಮೊದಲು ಅರ್ಧ ಡೋಸ್‌ ಹಾಗೂ ಎರಡನೆಯ ಹಂತದಲ್ಲಿ ಪೂರ್ತಿ ಡೋಸ್‌ ಪಡೆದ ಸ್ವಯಂಸೇವಕರಲ್ಲಿ ಅದು ಶೇ 90ರಷ್ಟು ಪರಿಣಾಮಕಾರಿಯಾಗಿತ್ತು. ಸ್ವಯಂಸೇವಕರ
ಎರಡೂ ಗುಂಪುಗಳ ಮೇಲೆ ನಡೆಸಿದ ಪ್ರಯೋಗದ ಸರಾಸರಿಯನ್ನು ತೆಗೆದರೆ, ‘ಶೇ 70ರಷ್ಟು ಪರಿಣಾಮಕಾರಿ’ ಎಂಬ ನಿರ್ಣಯಕ್ಕೆ ಬರಲಾಗಿದೆ

* ‘ಕೆಲವು ಷರತ್ತುಗಳ ಮೇಲೆ ಕೋವಿಶೀಲ್ಡ್‌ ಲಸಿಕೆಗೆ ಅನುಮತಿ ನೀಡಲಾಗಿದೆ’ ಎಂದು ಡಿಸಿಜಿಐ ಹೇಳಿದೆ. ಆದರೆ ಆ ಷರತ್ತುಗಳೇನು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ

* ಭಾರತ್‌ ಬಯೊಟೆಕ್‌ನ ‘ಕೋವ್ಯಾಕ್ಸಿನ್‌’ ಲಸಿಕೆಗೆ ಅನುಮತಿ ನೀಡುವುದಕ್ಕೂ ಮುನ್ನ, ಅದರ ವೈದ್ಯಕೀಯ ಪರೀಕ್ಷೆಗೆ ಅನುಸರಿಸಿದ ವಿಧಾನ ಯಾವುದು? ಮಾನದಂಡಗಳು ಯಾವುವು ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ

* ಭಾರತ್‌ ಬಯೊಟೆಕ್‌ ಸಂಸ್ಥೆಯು ತನ್ನ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಮಹಾನಿಯಂತ್ರಕರಿಗೆ ದತ್ತಾಂಶಗಳನ್ನು ನೀಡಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಂಸ್ಥೆಯು ನವೆಂಬರ್‌ 16ರಂದು ಕೋವ್ಯಾಕ್ಸಿನ್‌ನ ಮೂರನೇ ಹಂತದ ಪರೀಕ್ಷೆಗಳನ್ನು ಆರಂಭಿಸಿತ್ತು. ಆದ್ದರಿಂದ ಇಷ್ಟರೊಳಗೆ ಲಸಿಕೆಯ ಪರಿಣಾಮಗಳ ಬಗ್ಗೆ ಕೆಲವು ಅಂಕಿಅಂಶಗಳಾದರೂ ಲಭ್ಯವಾಗಿರಬೇಕು

* ಭಾರತ್ ಬಯೊಟೆಕ್‌ನ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಲಭ್ಯವಿಲ್ಲದಿರುವಾಗ, ನಿಯಂತ್ರಕ ಸಂಸ್ಥೆಯೊಂದು ಇಂಥ ಲಸಿಕೆಗೆ ಅನುಮತಿ ನೀಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದೆ

* ಕೊರೊನಾ ರೂಪಾಂತರಿತ ವೈರಸ್‌ನಿಂದ ಉಂಟಾಗಬಹುದಾದ ತುರ್ತು ಸಂದರ್ಭ ಎದುರಿಸಲು ಹೆಚ್ಚುವರಿಯಾಗಿ ಕೋವ್ಯಾಕ್ಸಿನ್‌ ಲಸಿಕೆಗೆ ಅನುಮತಿ ನೀಡಲಾಗಿದೆ ಎಂಬ ವಾದವನ್ನು ವಿಜ್ಞಾನಿಗಳು ಪ್ರಶ್ನಿಸಿದ್ದಾರೆ. ದೇಶದಲ್ಲಿ ಸೋಂಕಿತರ ಸಂಖ್ಯೆಯು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕೈಗೊಂಡ ಇಂಥ ನಿರ್ಧಾರ ಸರಿಯಲ್ಲ ಎಂದು ಅವರು ವಾದಿಸಿದ್ದಾರೆ. ಒಂದುವೇಳೆ ಅಂಥ ಸಂದರ್ಭ ಎದುರಾದರೆ, ಸರ್ಕಾರವು ತುರ್ತು ಸಭೆ ಕರೆದು, ಮೂರನೇ ಹಂತದ ಪರೀಕ್ಷೆಗಳನ್ನು ಕುರಿತು ಲಭ್ಯವಾಗಿರುವ ದತ್ತಾಂಶಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಬಹುದು ಎಂದು ವಿಜ್ಞಾನಿಗಳು ವಾದಿಸಿದ್ದಾರೆ

* ಲಸಿಕೆಗೆ ಅನುಮತಿ ನೀಡುವ ಈ ಪಾರದರ್ಶಕವಲ್ಲದ ಪ್ರಕ್ರಿಯೆಯಿಂದಾಗಿ, ಲಸಿಕೆಯನ್ನು ವ್ಯಾಪಕವಾಗಿ ಸ್ವೀಕರಿಸಲು ಜನರು ಹಿಂಜರಿಯುವ ಸಾಧ್ಯತೆಯೂ ಇದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT