ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕಾ ಕಾರ್ಯಕ್ರಮ: ಮುಂದಿನ ದಿನಗಳಲ್ಲಿ ವಿಸ್ತರಣೆ–ಹರ್ಷವರ್ಧನ್

ಎರಡು ಭಾರತೀಯ ಲಸಿಕೆಗಳ ಬಗ್ಗೆ ಯಾವುದೇ ತಪ್ಪು ಕಲ್ಪನೆ ಬೇಡ: ಲೋಕಸಭೆಯಲ್ಲಿ ಸಚಿವರ ಉತ್ತರ
Last Updated 19 ಮಾರ್ಚ್ 2021, 21:06 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ದಿನಗಳಲ್ಲಿ ಕೋವಿಡ್‌–19ರ ಲಸಿಕಾ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ಹೇಳಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ದೇಶದಲ್ಲಿ ನೀಡಲಾಗುತ್ತಿರುವ ಎರಡು ಭಾರತೀಯ ಲಸಿಕೆಗಳ ಬಗ್ಗೆ ಯಾವುದೇ ತಪ್ಪು ಕಲ್ಪನೆ ಬೇಡ ಎಂದಿದ್ದಾರೆ.

ಲೋಕಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಇಲ್ಲಿಯವರೆಗೆ 3.5 ರಿಂದ 4 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಲಸಿಕೆಗಳ ಅಡ್ಡ ಪರಿಣಾಮಗಳು ಶೇ 0.000432 ರಷ್ಟು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಲಸಿಕಾ ಕಾರ್ಯಕ್ರಮವು ತಜ್ಞರ ಅಭಿಪ್ರಾಯ ಆಧರಿಸಿ ನಡೆಯುತ್ತಿದ್ದು, ಆರಂಭಿಕ ಹಂತದಲ್ಲಿ ಆರೋಗ್ಯ ಸಿಬ್ಬಂದಿ ಸೇರಿದಂತೆ ಎಲ್ಲ ಆದ್ಯತಾ ಗುಂಪುಗಳಿಗೆ ಲಸಿಕೆ ನೀಡಲಾಗುತ್ತಿದೆ. ಜತೆಗೆ ಹಿರಿಯ ನಾಗರಿಕರು ಮತ್ತು 45ರಿಂದ 59ರ ವಯೋಮಾನದವರಿಗೂ ಲಸಿಕೆ ನೀಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ವಿಸ್ತರಣೆಯಾಗಲಿದೆ ಎಂದು ಉತ್ತರಿಸಿದರು.

ಭಾರತೀಯ ತಜ್ಞರ ಅಭಿಪ್ರಾಯಗಳ ಜತೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನೂ ಸರ್ಕಾರ ಪಾಲಿಸುತ್ತಿದೆ ಎಂದು ತಿಳಿಸಿದರು.

ಕೋವಿಡ್‌ ಲಸಿಕೆಯನ್ನು ಸರ್ಕಾರ ಸಾರ್ವತ್ರಿಕವಾಗಿ ನೀಡುವ ಗುರಿ ಹೊಂದಿದೆಯೇ ಎಂದು ಎನ್‌ಸಿಪಿ ಸಂಸದರಾದ ಸುಪ್ರಿಯಾ ಸುಲೆ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ನೀಡುವುದು, ವೈಜ್ಞಾನಿಕವಾಗಿ ಅಗತ್ಯವಿಲ್ಲ ಎಂದರು.

ಮಕ್ಕಳ ಮೇಲೆ ಕಡಿಮೆ ಪರಿಣಾಮ:ಕೊರೊನಾ ಸೋಂಕು 0–14 ವಯಸ್ಸಿನ ಮಕ್ಕಳ ಮೇಲೆ ಬೀರುವ ಪರಿಣಾಮ ಕಡಿಮೆ ಎಂಬುದು ವಿಶ್ಲೇಷಣೆಗಳಿಂದ ಗೊತ್ತಾಗಿದೆ ಎಂದು ಸಚಿವ ಹರ್ಷವರ್ಧನ್‌ ಲೋಕಸಭೆಯಲ್ಲಿ ತಿಳಿಸಿದರು.

ಮಕ್ಕಳಲ್ಲಿ ಸೋಂಕು ಸೌಮ್ಯವಾಗಿರುತ್ತದೆ ಮತ್ತು ಹೆಚ್ಚಿನವು ಲಕ್ಷಣ ರಹಿತವಾಗಿರುತ್ತವೆ. ಹಾಗಾಗಿ ಮಕ್ಕಳ ಮೇಲೆ ಕೋವಿಡ್‌–19ರ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಸದ್ಯ ಯಾವುದೇ ನಿರ್ದಿಷ್ಟ ಕ್ರಿಯಾ ಯೋಜನೆ ರೂಪಿಸಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ.

ಮಕ್ಕಳಲ್ಲಿ ಕೋವಿಡ್‌–19ರ ಸೋಂಕಿನ ದೀರ್ಘಕಾಲೀನ ಪರಿಣಾಮದ ಕುರಿತು ‘ಏಮ್ಸ್’ನ ಮಕ್ಕಳ ವೈದ್ಯರ ವಿಭಾಗ ದಾಖಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ರೂಪಾಂತರಿತ ವೈರಾಣುವಿಗೂ ಲಸಿಕ ಪರಿಣಾಮಕಾರಿ: ರೂಪಾಂತರಿತ ವೈರಾಣುಗಳ ವಿರುದ್ಧ ಕೋವ್ಯಾಕ್ಸಿನ್‌ ಲಸಿಕೆ ಪರಿಣಾಮಕಾರಿ. ಹಾಗಾಗಿ ಇದರ ಸಂಯೋಜನೆಯನ್ನು ಬದಲಾಯಿಸುವ ಅಗತ್ಯ ಎದುರಾಗಿಲ್ಲ ಎಂದು ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ.

ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು, ಭಾರತದಲ್ಲಿ ಪ್ರಸ್ತುತ ಕೋವಿಡ್‌–19ರ ನಾಲ್ಕು ರೂಪಾಂತರಿತ ವೈರಾಣುಗಳು ಪತ್ತೆಯಾಗಿವೆ. ಅವುಗಳಲ್ಲಿ ಎರಡು ಬ್ರಿಟನ್‌ ರೂಪಾಂತರಿತವಾಗಿದ್ದರೆ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲಿನ್‌ ತಲಾ ಒಂದು ರೂಪಾಂತರಿತ ವೈರಾಣುಗಳಾಗಿವೆ ಎಂದು ತಿಳಿಸಿದರು.

ಬ್ರಿಟನ್‌ ಮತ್ತು ಬ್ರೆಜಿಲ್ ರೂಪಾಂತರಿತ ವೈರಾಣುಗಳ ವಿರುದ್ಧವೂ ಕೋವ್ಯಾಕ್ಸಿನ್ ಪರಿಣಾಮಕಾರಿಯಾಗಿದೆ. ದಕ್ಷಿಣ ಆಫ್ರಿಕಾದ ರೂಪಾಂತರಿಕ ವೈರಾಣುವಿನ ವಿರುದ್ಧ ಕೋವ್ಯಾಕ್ಸಿನ್‌ ಪರಿಣಾಮಕಾರಿತ್ವದ ಕುರಿತು ವಿಶ್ಲೇಷಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಬ್ರಿಟನ್‌ನ ರೂಪಾಂತರಿತ ವೈರಾಣು ವಿರುದ್ಧ ಆಕ್ಸ್‌ಫರ್ಡ್‌– ಆಸ್ಟ್ರಾಜೆನೆಕಾದ ಕೋವಿಶೀಲ್ಡ್‌ ಲಸಿಕೆ ಶೇ 74.6ರಷ್ಟು ಪರಿಣಾಮಕಾರಿ. ಅಂತೆಯೇ ಬ್ರೆಜಿಲ್‌ನ ರೂಪಾಂತರಿತ ವೈರಾಣುವಿನ ಮೇಲೂ ಇದು ಪರಿಣಾಮಕಾರಿಯಾಗಿದೆ. ಆದರೆ ದಕ್ಷಿಣ ಆಫ್ರಿಕಾ ರೂಪಾಂತರಿತ ವೈರಾಣು ವಿರುದ್ಧ ಇದು ಕೇವಲ ಶೇ 10ರಷ್ಟು ಪರಿಣಾಮಕಾರಿ ಆಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಒಂದೇ ದಿನ 40 ಸಾವಿರದ ಸನಿಹಕ್ಕೆ ಕೋವಿಡ್ ಪ್ರಕರಣ ದಾಖಲು

ನವದೆಹಲಿ (ಪಿಟಿಐ): ಭಾರತದಲ್ಲಿ ಶುಕ್ರವಾರ ಒಂದೇ ದಿನ 39,726 ಕೋವಿಡ್‌–19 ಪ್ರಕರಣಗಳು ವರದಿಯಾಗಿದ್ದು, ಈ ವರ್ಷ ಇದುವರೆಗೆ ಒಂದೇ ದಿನದಲ್ಲಿ ದಾಖಲಾದ ಅತಿಹೆಚ್ಚು ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೆ ಒಟ್ಟು 1,15,14,331 ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

2020ರ ನ. 29ರಂದು 24 ಗಂಟೆಗಳ ಅವಧಿಯಲ್ಲಿ 41,810 ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಸೋಂಕುಗಳ ದೈನಂದಿನ ಏರಿಕೆ ಪ್ರಮಾಣದಲ್ಲಿ 110 ದಿನಗಳಲ್ಲಿ ಶುಕ್ರವಾರ ಅತಿಹೆಚ್ಚು ಪ್ರಕರಣಗಳು ವರದಿಯಾಗಿವೆ. ಅಂತೆಯೇ ಶುಕ್ರವಾರ 154 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ ಒಟ್ಟಾರೆ 1,59,370ಕ್ಕೆ ಏರಿದೆ ಎಂದೂ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಸತತ 9ನೇ ದಿನವೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,71,282ಕ್ಕೆ ತಲುಪಿದೆ. ಚೇತರಿಕೆಯ ಪ್ರಮಾಣ ಶೇ 96.26ಕ್ಕೆ ಕುಸಿದಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 1,10,83,679ಕ್ಕೆ ಏರಿದರೆ, ಸಾವಿನ ಪ್ರಮಾಣವು ಶೇಕಡಾ 1.38ಕ್ಕೆ ಏರಿದೆ.

ಮಾರ್ಚ್ 18ರವರೆಗೆ ಒಟ್ಟಾರೆ 23,13,70,546 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಗುರುವಾರ 10,57,383 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಮಹಾರಾಷ್ಟ್ರ: ರಂಗಮಂದಿರಕ್ಕೆ ನಿರ್ಬಂಧ

ಮುಂಬೈ (ಪಿಟಿಐ): ಮಹಾರಾಷ್ಟ್ರ ಸರ್ಕಾರವು ರಂಗಮಂದಿರ ಮತ್ತು ಸಭಾಂಗಣಗಳ ಮೇಲೆ ನಿರ್ಬಂಧ ವಿಧಿಸಿ ಆದೇಶಿಸಿದೆ. ಅದರಂತೆ ಮಾರ್ಚ್‌ 31ರವರೆಗೆ ಸಾಮರ್ಥ್ಯದ ಶೇ 50ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಅಂತೆಯೇ, ಆರೋಗ್ಯ ಮತ್ತು ಇತರೆ ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಖಾಸಗಿ ಕಚೇರಿಗಳನ್ನು ಹೊರತುಪಡಿಸಿ, ಉಳಿದ ಕಚೇರಿಗಳು ಸಾಮರ್ಥ್ಯದ ಶೇ 50ರಷ್ಟು ಸಿಬ್ಬಂದಿಯಿಂದ ಕಾರ್ಯ ನಿರ್ವಹಿಸುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ರಾಜ್ಯದಲ್ಲಿ ಗುರುವಾರ ಒಂದೇ ದಿನ 25,833 ಕೋವಿಡ್‌–19 ಪ್ರಕರಣ ದೃಢವಾದ ಬಳಿಕ ಸರ್ಕಾರ ಈ ಆದೇಶ ಹೊರಡಿಸಿದೆ.

‘ಭವಿಷ್ಯದಲ್ಲಿ ಲಾಕ್‌ಡೌನ್‌ ಆಯ್ಕೆಯಿದೆ’: ಮಹಾರಾಷ್ಟ್ರದಲ್ಲಿ ಮತ್ತೆ ಕೋವಿಡ್‌–19ರ ಪ್ರಕರಣಗಳು ಏರುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಾತನಾಡಿರುವ ಅಲ್ಲಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ‘ಭವಿಷ್ಯದಲ್ಲಿ ಲಾಕ್‌ಡೌನ್‌ ಆಯ್ಕೆ ನಮ್ಮ ಮುಂದಿದೆ. ಆದರೆ ಜನರು ಕೋವಿಡ್‌–19ರ ಮಾರ್ಗಸೂಚಿಗಳನ್ನು ಪಾಲಿಸುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಹೇಳಿದ್ದಾರೆ.

ನಂದೂರ್‌ಬಾರ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನರು ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪಂಜಾಬ್‌: ಶಾಲಾ–ಕಾಲೇಜು ಬಂದ್

ನವದೆಹಲಿ: ಕೋವಿಡ್–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಮಾರ್ಚ್ 31ರವರೆಗೆ ಶಾಲಾ–ಕಾಲೇಜು ಬಂದ್ ಮಾಡುವಂತೆ ಸೂಚಿಸಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಶುಕ್ರವಾರ ಆದೇಶಿಸಿದ್ದಾರೆ.

ಸಿನಿಮಾ ಮಂದಿರ, ಮಾಲ್‌ಗಳಲ್ಲಿ ನಿಗದಿತ ಸಾಮರ್ಥ್ಯದ ಅರ್ಧದಷ್ಟು ಜನರ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಶುಕ್ರವಾರ ಕೋವಿಡ್ ಕಾರ್ಯಪಡೆಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳನ್ನು ಹೊರತುಪಡಿಸಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮಾರ್ಚ್ 20ರಿಂದ 31ರವರೆಗೆ ಮುಚ್ಚಲಾಗುವುದು. ಕೋವಿಡ್ ಪ್ರಸರಣ ಸರಪಳಿಯನ್ನು ಮುರಿಯಲು ಜನರು ತಮ್ಮ ಮನೆಗಳಲ್ಲಿ ಮುಂದಿನ ಎರಡು ವಾರಗಳ ಕಾಲ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT