ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಟ್ರಲ್ ವಿಸ್ತಾ: ಟೀಕಾಕಾರರಿಗೆ ತಿರುಗೇಟು

ಹೊಸ ರಕ್ಷಣಾ ಕಚೇರಿ ಸಂಕೀರ್ಣ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ
Last Updated 16 ಸೆಪ್ಟೆಂಬರ್ 2021, 18:03 IST
ಅಕ್ಷರ ಗಾತ್ರ

ನವದೆಹಲಿ:ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಟೀಕಿಸುವವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಿರುಗೇಟು ನೀಡಿದ್ದಾರೆ. ತಮ್ಮ ಸುಳ್ಳುಗಳು ಮತ್ತು ಅಪಪ್ರಚಾರಗಳು ಬಹಿರಂಗವಾಗುತ್ತವೆ ಎಂಬ ಕಾರಣಕ್ಕೆ ಟೀಕಾಕಾರರು ರಕ್ಷಣಾ ಕಚೇರಿ ಸಂಕೀರ್ಣದ ವಿಚಾರದಲ್ಲಿ ಉದ್ದೇಶಪೂರ್ವಕ ಮೌನ ವಹಿಸಿದ್ದರು ಎಂದು ಆರೋಪಿಸಿದ್ದಾರೆ.

ಕಸ್ತೂರ್‌ಬಾ ಗಾಂಧಿ ಮಾರ್ಗ ಮತ್ತು ಆಫ್ರಿಕಾ ಅವೆನ್ಯೂದಲ್ಲಿ ರಕ್ಷಣಾ ಸಚಿವಾಲಯ ಮತ್ತು ಸಶಸ್ತ್ರ ಪಡೆಗಳ 7,000ಕ್ಕೂ ಅಧಿಕ ಉದ್ಯೋಗಿಗಳಿಗಾಗಿ ಎರಡು ಹೊಸ ಬಹುಮಹಡಿ ಕಚೇರಿ ಸಂಕೀರ್ಣಗಳನ್ನು ಉದ್ಘಾಟಿಸಿದ ನಂತರ ಮೋದಿ ಮಾತನಾಡಿದರು. ಹೊಸ ಸಂಸತ್ ಭವನ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸೆಂಟ್ರಲ್ ವಿಸ್ತಾ ಯೋಜನೆಗೆ ಹಣ ಸುರಿಯುತ್ತಿರುವ ಕೇಂದ್ರದ ನಡೆಯನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದ್ದವು. ಈ ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸುವಂತೆ ಸಲಹೆ ನೀಡಿದ್ದವು.

‘ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಹೊಸ ಭಾರತದ ಅಗತ್ಯ ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ನಮ್ಮ ದೇಶದ ರಾಜಧಾನಿಯನ್ನು ಅಭಿವೃದ್ಧಿಪಡಿಸುವತ್ತ ನಾವು ಇನ್ನೊಂದು ಹೆಜ್ಜೆ ಇಡುತ್ತಿದ್ದೇವೆ’ ಎಂದು ಪ್ರಧಾನಿ ಸಮರ್ಥಿಸಿಕೊಂಡರು. ‘ಹೊಸ ರಕ್ಷಣಾ ಕಚೇರಿ ಸಂಕೀರ್ಣಗಳು ಸೇನಾಪಡೆಗಳ ಕೆಲಸವನ್ನು ಹೆಚ್ಚು ಅನುಕೂಲಕರ ಮತ್ತು ಪರಿಣಾಮಕಾರಿಯಾಗಿಸುವ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲಿವೆ’ ಎಂದರು.

ಸೆಂಟ್ರಲ್ ವಿಸ್ತಾ ಯೋಜನೆಯನ್ನು ವಿರೋಧಿಸುವವರು, ರಕ್ಷಣಾ ಸಿಬ್ಬಂದಿ ಗುಡಿಸಲಿನಂತಹ ಜಾಗದಲ್ಲಿ ಹೇಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಯೋಚಿಸಲೂ ಹೋಗುವುದಿಲ್ಲ ಎಂದು ಮೋದಿ ಕುಟುಕಿದರು.

ರೈಸಿನಾ ಹಿಲ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ ಕಟ್ಟಡಗಳಲ್ಲಿರುವ ರಕ್ಷಣಾ ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿ ಹೊಸ ಕಚೇರಿಗಳಿಗೆ ಸ್ಥಳಾಂತರವಾಗಲಿದ್ದಾರೆ.

‘ದೆಹಲಿಯು ದೇಶದ ರಾಜಧಾನಿಯಾಗಿ 100 ವರ್ಷಗಳನ್ನು ದಾಟಿದ್ದು,ಈ ಅವಧಿಯಲ್ಲಿ ಅದರ ಜನಸಂಖ್ಯೆ ಮತ್ತು ಸನ್ನಿವೇಶಗಳು ಸಾಕಷ್ಟು ಬದಲಾಗಿವೆ. ನಾವು ರಾಜಧಾನಿಯ ಬಗ್ಗೆ ಮಾತನಾಡುವಾಗ ಅದು ಕೇವಲ ನಗರವಾಗಿರುವುದಿಲ್ಲ. ಯಾವುದೇ ದೇಶದ ರಾಜಧಾನಿಯು ಆ ರಾಷ್ಟ್ರದ ಚಿಂತನೆ, ಸಂಕಲ್ಪ, ಶಕ್ತಿ ಮತ್ತು ಸಂಸ್ಕೃತಿಯ ಸಂಕೇತವಾಗಿರುತ್ತದೆ’ ಎಂದು ಪ್ರಧಾನಿ ಹೇಳಿದರು.

ಹೊಸ ಸಂಕೀರ್ಣ

lಎರಡು ಕಟ್ಟಡಗಳನ್ನು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ರಕ್ಷಣಾ ಸಚಿವಾಲಯದಿಂದ ಮಂಜೂರಾದ ನೆರವಿನೊಂದಿಗೆ ನಿರ್ಮಿಸಿದೆ

lಎರಡೂ ಕಟ್ಟಡಗಳಲ್ಲಿರುವ ಕಚೇರಿ ಸ್ಥಳಾವಕಾಶ 9.60 ಲಕ್ಷ ಚದರ ಅಡಿ

lಕೆ.ಜಿ. ಮಾರ್ಗ ಸಂಕೀರ್ಣದ 4.52 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ14 ಕಚೇರಿಗಳಿವೆ

lಆಫ್ರಿಕಾ ಅವೆನ್ಯೂ ಕಟ್ಟಡದ 5.08 ಲಕ್ಷ ಚದರ ಅಡಿ ವಿಸ್ತೀರ್ಣದ ಜಾಗಕ್ಕೆ13 ಕಚೇರಿ ಸ್ಥಳಾಂತರವಾಗಲಿವೆ

l24 ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ರಕ್ಷಣಾ ಕಚೇರಿ ಸಂಕೀರ್ಣಗಳ ಕೆಲಸವನ್ನು 12 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ

lಈ ರಕ್ಷಣಾ ಕಚೇರಿ ಸಂಕೀರ್ಣಗಳನ್ನು 13 ಎಕರೆ ಭೂಪ್ರದೇಶದಲ್ಲಿ ನಿರ್ಮಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT