ಶನಿವಾರ, ಸೆಪ್ಟೆಂಬರ್ 26, 2020
21 °C

ತರಗತಿ ಪುನರಾರಂಭಕ್ಕೆ ಪೋಷಕರಲ್ಲಿ ಹೆಚ್ಚಿನವರ ವಿರೋಧ: ಸಮೀಕ್ಷೆ

ಶೆಮಿಜ್‌ ಜಾಯ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಸೆಪ್ಟೆಂಬರ್‌ನಲ್ಲಿ ಶಾಲೆಗಳ ಪುನರಾರಂಭ ಬೇಡ ಎಂಬುದೇ ಪೋಷಕರಲ್ಲಿ ಹೆಚ್ಚಿನವರ ಅಭಿಪ್ರಾಯ ಎಂದು ‘ಲೋಕಲ್‌ ಸರ್ಕಲ್ಸ್‌’ ಸಂಸ್ಥೆಯು ನಡೆಸಿದ ಸಮೀಕ್ಷೆ ಹೇಳಿದೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಅಪಾಯವನ್ನು ಎದುರು ಹಾಕಿಕೊಳ್ಳಲು ಆಗದು ಮತ್ತು ಶಾಲೆ ಆರಂಭವಾದರೆ ಅಂತರ ಕಾಯ್ದುಕೊಳ್ಳುವಿಕೆ ಸಾಧ್ಯವಿಲ್ಲ ಎಂದು ಪೋಷಕರು ಅಭಿಪ್ರಾಯ ಪಟ್ಟಿದ್ದಾರೆ.

ಕೋವಿಡ್‌ ಕಾರಣದಿಂದಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಮಾರ್ಚ್‌ ಮಧ್ಯ ಭಾಗದಿಂದಲೇ ಮುಚ್ಚಲಾಗಿದೆ. 10–12ನೇ ತರಗತಿಯನ್ನು ಸೆಪ್ಟೆಂಬರ್‌ 1ರಿಂದ ಮತ್ತು 6–9ರ ವರೆಗಿನ ತರಗತಿಗಳನ್ನು ಮತ್ತೆರಡು ವಾರ ಬಳಿಕ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಹಾಗಾಗಿ, ಪೋಷಕರ ಅಭಿಪ್ರಾಯ ಪಡೆಯುವ ಸಮೀಕ್ಷೆಯನ್ನು ‘ಲೋಕಲ್‌ ಸರ್ಕಲ್ಸ್‌’ ನಡೆಸಿದೆ. 

ಸೋಂಕು ತಗಲುವ ಭೀತಿ, ಕೋವಿಡ್‌–19ರ ಅಗೋಚರ ಅಪಾಯಗಳು, ಶಾಲೆಯಲ್ಲಿ ಅಂತರ ಕಾಯ್ದುಕೊಳ್ಳುವಿಕೆ ಸಾಧ್ಯವಿಲ್ಲ ಎಂಬ ನಿಲುವು, ಮಕ್ಕಳಿಗೆ ಸೋಂಕು ತಗಲಿದರೆ ಮನೆಯಲ್ಲಿರುವ ಹಿರಿಯರಿಗೆ ತೊಂದರೆಯಾಗಬಹುದು ಎಂಬ ಕಾಳಜಿಯಿಂದಾಗಿ ಸೆಪ್ಟೆಂಬರ್‌ 1ರಿಂದ ಶಾಲೆ ತೆರೆಯುವುದಕ್ಕೆ ಪೋಷಕರು ಸಿದ್ಧರಿಲ್ಲ ಎಂದು ಸಮೀಕ್ಷೆಯು ಹೇಳಿದೆ. 

ಆನ್‌ಲೈನ್‌ ತರಗತಿಗಳು ಮಕ್ಕಳಿಗೆ ಲಭ್ಯವಾಗುತ್ತಿಲ್ಲ, ಡಿಜಿಟಲ್‌ ತರಗತಿಯಲ್ಲಿ ಭಾಗಿಯಾಗಲು ಬೇಕಾದ ಸಾಧನಗಳು ಇಲ್ಲ ಎಂಬ ಕಳವಳವನ್ನೂ ಪೋಷಕರಲ್ಲಿ ಹಲವರು ವ್ಯಕ್ತಪಡಿಸಿದ್ದಾರೆ. 

ಹಲವು ದೇಶಗಳಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಅಲ್ಲಿ ಕೋವಿಡ್‌–19 ಹರಡುವಿಕೆ ಪ್ರಮಾಣ ಹೆಚ್ಚಳವಾಗಿದೆ. ನೂರಾರು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಸಕ್ಕೆ ಕಳುಹಿಸಲಾಗಿದೆ. ಕೋವಿಡ್‌ ಪಿಡುಗಿನಿಂದಾಗಿ ಮುಚ್ಚಿದ ಶಾಲೆಗಳನ್ನು ತೆರೆದ ಮೊದಲ ದೇಶ ಇಸ್ರೇಲ್‌. ಮೇ ತಿಂಗಳಲ್ಲಿ ಶಾಲೆ ಆರಂಭವಾದ ಕೆಲವೇ ದಿನಗಳಲ್ಲಿ ಹಲವು ವಿದ್ಯಾರ್ಥಿಗಳು ಸೋಂಕಿಗೆ ಒಳಗಾದರು. ಕೀನ್ಯಾ ದೇಶದಲ್ಲಿ ಈ ಶೈಕ್ಷಣಿಕ ವರ್ಷವನ್ನೇ ರದ್ದು ಮಾಡಲಾಗಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು