ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೌಕ್ತೆ ಚಂಡಮಾರುತ | ಸಂತ್ರಸ್ತರಿಗೆ ನೆರವಾಗಿ: ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಕರೆ

Last Updated 15 ಮೇ 2021, 5:19 IST
ಅಕ್ಷರ ಗಾತ್ರ

ನವದೆಹಲಿ: ತೌಕ್ತೆ ಚಂಡಮಾರುತದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಾಧ್ಯವಿರುವ ಎಲ್ಲ ರೀತಿಯ ಅಗತ್ಯ ನೆರವು ನೀಡುವಂತೆ ತಮ್ಮ ಪಕ್ಷ ಕಾರ್ಯಕರ್ತರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ರಾಹುಲ್‌ ಅವರು, ʼಕೇರಳ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಗುಜರಾತ್‌ ಮತ್ತು ಕರ್ನಾಟಕದಲ್ಲಿ ಚಂಡಮಾರುತದ ಎಚ್ಚರಿಕೆ ನೀಡಲಾಗಿದೆ. ತೌಕ್ತೆ ಚಂಡಮಾರುತ ಹಲವು ಭಾಗಗಳಲ್ಲಿ ಈಗಾಗಲೇ ಭಾರಿ ಮಳೆಗೆ ಕಾರಣವಾಗಿದೆ. ಅಗತ್ಯ ಇರುವ ಜನರಿಗೆ ಸಾಧ್ಯವಿರುವ ಎಲ್ಲ ನೆರವು ಒದಗಿಸುವಂತೆ ನಾನು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಸುರಕ್ಷಿತವಾಗಿರಿʼ ಎಂದು ಕೇಳಿಕೊಂಡಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯು (ಐಎಂಡಿ), ಅರಬ್ಬಿ ಸಮುದ್ರ ಪ್ರದೇಶದಲ್ಲಿ ವಾಯುಭಾರ ಕುಸಿತದಿಂದಾಗಿ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ಸೃಷ್ಟಿಯಾಗಲಿದೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಗುಜರಾತ್‌ ಕರಾವಳಿಯಲ್ಲಿ ಇದರ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದೆ.

40-50 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಯು, ಮೇ 15ರ ಹೊತ್ತಿಗೆ ಪ್ರತಿ ಗಂಟೆಗೆ 70 ಕಿ.ಮೀ.ನಷ್ಟು ವೇಗ ಪಡೆಯಲಿದೆ. ಇದು ಮೇ 15ರ ವೇಳೆಗೆ 80 ಕಿ.ಮೀ.ಗೆ ತಲುಪಲಿದೆ ಎಂದು ಐಎಂಡಿ ಈಗಾಗಲೇ ತಿಳಿಸಿದೆ.‌

ತುಕ್ತೆ ಉಂಟುಮಾಡುವ ಪರಿಣಾಮವನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್‌) ಸಜ್ಜಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ನೆರವು ನೀಡುವುದಾಗಿ ನೌಕಾ ದಳ ಭರವಸೆ ನೀಡಿದೆ.

ಉಳ್ಳಾಲದಲ್ಲಿ ಭಾರಿ ಅಲೆಗಳಿಂದಾಗಿ ಕಡಲ್ಕೊರೆತ ತೀವ್ರವಾಗಿದೆ. ಉಚ್ಚಿಲ ಬಟ್ಟಪ್ಪಾಡಿ ಭಾಗದಲ್ಲಿ 67 ಮನೆಗಳು ಅಪಾಯಕ್ಕೆ ಸಿಲುಕಿವೆ. ಸೋಮೇಶ್ವರ ಹಿಂದೂ ಸ್ಮಶಾನದ ತಡೆಗೋಡೆ ಸಮುದ್ರ ಪಾಲಾಗಿದೆ. ಗಾಳಿ, ಮಳೆ ಹಾಗೂ ಕಡಲ್ಕೊರೆತ ಅಧಿಕವಾದಲ್ಲಿ ಸ್ಥಳೀಯರಿಗೆ ತುರ್ತಾಗಿ ತಂಗಲು ಉಳ್ಳಾಲದಲ್ಲಿ ಮೂರು ಹಾಗೂ ಸೋಮೇಶ್ವರದಲ್ಲಿ ಒಂದು ಕಾಳಜಿ ಕೇಂದ್ರ ತೆರೆಯಲಾಗಿದೆ.

‘ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಈಗಾಗಲೇ ಸಹಾಯವಾಣಿ ಆರಂಭಿಸಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಶುಕ್ರವಾರ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಮರವಂತೆಯಲ್ಲೂ ಕಡಲ್ಕೊರೆತದಿಂದ ಮೂರು ದಿನಗಳಿಂದ ತೊಂದರೆಯಾಗಿದೆ. ಅಲೆಗಳ ಅಬ್ಬರದಿಂದ 100ಕ್ಕೂ ಅಧಿಕ ತೆಂಗಿನ ಮರಗಳು ಉರುಳಿವೆ. ರ‌ಸ್ತೆ ಕೊಚ್ಚಿ ಹೋದರೆ ಮೀನುಗಾರರ 25 ಮನೆಗಳಿಗೆ ಅಪಾಯವಾಗುವ ಸಾಧ್ಯತೆ ಇದೆ. ಕಾಪು ತಾಲ್ಲೂಕಿನ ಪಡುಬಿದ್ರಿ, ಹೆಜಮಾಡಿ, ಬಡಾ, ಮೂಳೂರು, ತೆಂಕದಲ್ಲಿ ಅಲೆಗಳ ಅಬ್ಬರ ಜೋರಾಗಿದೆ.

ಚಂಡಮಾರುತ ಭೀತಿಯಿಂದಾಗಿ ಕೇರಳದಲ್ಲಿ 78 ಕುಟುಂಬಗಳ 308 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ತಗ್ಗು ಪ್ರದೇಶವಾದ ಕಾಲಡಿ ಮತ್ತು ತೀರ ಪ್ರದೇಶದಲ್ಲಿರುವ ಪೂಂತುರಾದಲ್ಲಿ ರಾತ್ರಿ ಇಡೀ ಮಳೆ ಸುರಿದಿರುವುದರಿಂದ ಮನೆಗಳಿಗೆ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT