ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರ–ವಿಶ್ವಸಂಸ್ಥೆಯಲ್ಲಿ ಭಾರತದಿಂದ ಕಳವಳ

Last Updated 5 ಅಕ್ಟೋಬರ್ 2021, 5:58 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣ ಮತ್ತು ಅವುಗಳ ವಿತರಣಾ ವ್ಯವಸ್ಥೆಯು ಜಾಗತಿಕ ಶಾಂತಿ ಮತ್ತು ಭದ್ರತೆಗೆ ಅಪಾಯ ಉಂಟು ಮಾಡುತ್ತವೆ ಎಂದು ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.

ಭಯೋತ್ಪಾದಕರಿಗೆ ಅಂತಹ ಶಸ್ತ್ರಾಸ್ತ್ರಗಳು ದೊರೆಯುವ ಸಾಧ್ಯತೆ ಇರುವುದರಿಂದ ಗಂಭೀರ ಅಪಾಯಗಳು ಎದುರಾಗಬಹುದು. ಹೀಗಾಗಿ ಜಾಗತಿಕ ಸಮುದಾಯ ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಭಾರತ ಪ್ರತಿಪಾದಿಸಿದೆ.

ಈ ಬೆದರಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದಲ್ಲಿ ನಿಶ್ಯಸ್ತ್ರೀಕರಣ ಮತ್ತು ಅಂತರರಾಷ್ಟ್ರೀಯ ಭದ್ರತಾ ಸಮಸ್ಯೆಗಳನ್ನು ಎದುರಿಸುವ ಸಮಿತಿಯ ಸಭೆಯಲ್ಲಿ ಭಾರತದ ರಾಯಭಾರಿ ಪಂಕಜ್‌ ಶರ್ಮಾ ಹೇಳಿದರು.

ಭಯೋತ್ಪಾದಕರ ಬಳಿ ಅಕ್ರಮವಾಗಿ ಇರುವ ಸಣ್ಣ ಮತ್ತು ಲಘು ಶಸ್ತ್ರಾಸ್ತ್ರಗಳು ಅತ್ಯಂತ ಅಪಾಯಕಾರಿಯಾದದ್ದು ಎಂದು ಅವರು ತಿಳಿಸಿದರು.

ಸಣ್ಣ ಮತ್ತು ಲಘು ಶಸ್ತ್ರಾಸ್ತ್ರಗಳ ಅಕ್ರಮ ವ್ಯಾಪಾರವನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಕ್ರಿಯಾ ಯೋಜನೆಯ ಸಂಪೂರ್ಣ ಮತ್ತು ಪರಿಣಾಮಕಾರಿ ಅನುಷ್ಠಾನ ಆಗಬೇಕು ಎಂಬುದನ್ನು ಭಾರತ ಬಯಸುತ್ತದೆ ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ ಎಲ್ಲ ದೇಶಗಳು ಕಾನೂನುಗಳನ್ನು ರಚಿಸಬೇಕು. ಸಣ್ಣ, ಲಘು ಶಸ್ತ್ರಾಸ್ತ್ರಗಳ ಆಮದು ಮತ್ತು ರಫ್ತುಗಳ ಮೇಲೆ ನಿಯಂತ್ರಣ ಹೊಂದಿರಬೇಕು ಮತ್ತು ದಾಸ್ತಾನು ನಿರ್ವಹಣೆಯನ್ನು ಸುಧಾರಿಸಿಕೊಳ್ಳಬೇಕು. ಈ ಸಂಬಂಧ ಎಲ್ಲ ದೇಶಗಳು ಪರಸ್ಪರ ಸಹಕಾರ ಮತ್ತು ನೆರವು ನೀಡಬೇಕು ಎಂದು ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ವ್ಯವಹಾರಗಳ ಕಚೇರಿ ತಿಳಿಸಿದೆ.

ಶಸ್ತ್ರಾಸ್ತ್ರಗಳ ಪತ್ತೆಹಚ್ಚುವಿಕೆ ವ್ಯವಸ್ಥೆಯನ್ನು ಸುಧಾರಿಸುವುದು 2030ರ ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿಯ ಭಾಗವಾಗಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT