ಶುಕ್ರವಾರ, ಮೇ 14, 2021
32 °C

ಒಡಿಶಾದಿಂದ ದೆಹಲಿಗೆ ಏರ್‌ಲಿಫ್ಟ್‌ ಆಗಲಿದೆ ಆಮ್ಲಜನಕ ಸಂಗ್ರಹ: ಕೇಜ್ರಿವಾಲ್‌

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿಯಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಕೊರತೆ ಉಂಟಾಗಿದೆ. ಒಡಿಶಾದಿಂದ ಆಮ್ಲಜನಕ ಸಂಗ್ರಹವನ್ನು ವಾಯು ಮಾರ್ಗದಲ್ಲಿ (ಏರ್‌ಲಿಫ್ಟ್‌ ) ತರುವ ಪ್ರಯತ್ನ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಗುರುವಾರ ಹೇಳಿದ್ದಾರೆ.

ದೆಹಲಿಗೆ ಹೆಚ್ಚಿನ ಪ್ರಮಾಣದಲ್ಲಿ ಒಡಿಶಾದಿಂದ ಆಮ್ಲಜನಕ ಪೂರೈಕೆಯಾಗಲಿದ್ದು, ರಾಜ್ಯಗಳ ನಡುವೆ ನೂರಾರು ಕಿಲೋ ಮೀಟರ್‌ ಅಂತರವಿದೆ. ಕೊರೊನಾ ವೈರಸ್‌ ವಿರುದ್ಧದ ಹೋರಾಟದ ತುರ್ತು ಪರಿಸ್ಥಿತಿಯಲ್ಲಿ ಸಮಯದ ಉಳಿತಾಯಕ್ಕಾಗಿ ಆಮ್ಲಜನಕ ಸಂಗ್ರಹವನ್ನು ಏರ್‌ಲಿಫ್ಟ್‌ ಮಾಡಲು ನಿರ್ಧರಿಸಿರುವುದಾಗಿ ಕೇಜ್ರಿವಾಲ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಏರ್‌ಲಿಫ್ಟ್ ಮಾಡುವ ಪ್ರಕ್ರಿಯೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಭರವಸೆ ನೀಡಿದ್ದಾರೆ. ಅದಕ್ಕಾಗಿ ಒಡಿಶಾ ಸರ್ಕಾರ ವಿಶೇಷ ಅಧಿಕಾರಿಯನ್ನು ನೇಮಿಸಿರುವುದಾಗಿ ಕೇಜ್ರಿವಾಲ್‌ ಟ್ವೀಟಿಸಿದ್ದಾರೆ.

ಕೋವಿಡ್‌–19 ರೋಗಿಗಳ ಚಿಕಿತ್ಸೆಗಾಗಿ ದೆಹಲಿಗೆ ಮೀಸಲಿಟ್ಟಿರುವ ಆಮ್ಲಜನಕ ಪೂರೈಕೆ ಪ್ರಮಾಣವನ್ನು ಹೆಚ್ಚಿಸುವಲ್ಲಿ ಸಹಕಾರ ನೀಡಿದ ಕೇಂದ್ರ ಸರ್ಕಾರ ಮತ್ತು ಹೈಕೋರ್ಟ್‌ಗೆ ಕೇಜ್ರಿವಾಲ್‌ ಧನ್ಯವಾದ ಅರ್ಪಿಸಿದ್ದಾರೆ. ಆಮ್ಲಜನಕ ಸಂಗ್ರಹ ರಾಷ್ಟ್ರರಾಜಧಾನಿಯನ್ನು ತಲುಪುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ– ಹರಿಯಾಣ: ಸರ್ಕಾರಿ ಆಸ್ಪತ್ರೆಯಿಂದ 1,700 ಡೋಸ್‌ ಕೋವಿಡ್‌ ಲಸಿಕೆ ಕಳವು

ವೈದ್ಯಕೀಯ ಬಳಕೆಗಾಗಿ ಆಮ್ಲಜನಕ ಹೊತ್ತು ಬರುತ್ತಿರುವ ವಾಹನಗಳ ಅಡಚಣೆ ರಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಹರಿಯಾಣ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ದೆಹಲಿಗೆ ನಿಗದಿಗೊಳಿಸಲಾಗಿದ್ದ 378 ಮೆಟ್ರಿಕ್‌ ಟನ್‌ ವೈದ್ಯಕೀಯ ಆಮ್ಲಜನಕ ಪ್ರಮಾಣವನ್ನು 480 ಮೆಟ್ರಿಕ್‌ ಟನ್‌ಗಳಿಗೆ ಹೆಚ್ಚಿಸಲಾಗಿದೆ. ಆದರೆ, ದೆಹಲಿಗೆ ನಿತ್ಯ ಅಂದಾಜು 700 ಮೆಟ್ರಿಕ್‌ ಟನ್‌ಗಳಷ್ಟು ಆಮ್ಲಜನಕ ಅಗತ್ಯವಿದೆ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು