ಗುರುವಾರ , ಮಾರ್ಚ್ 23, 2023
22 °C

ದೆಹಲಿ ಸಿ.ಎಂ–ಲೆಫ್ಟಿನೆಂಟ್‌ ಗವರ್ನರ್‌ ಮಧ್ಯೆ ಮತ್ತೆ ವಾಕ್ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ಲೆಫ್ಟಿನೆಂಟ್‌ ಗವರ್ನರ್ ವಿ.ಕೆ. ಸಕ್ಸೇನಾ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಡುವೆ ಶುಕ್ರವಾರ ಮತ್ತೊಂದು ಸುತ್ತಿನ ವಾಕ್ಸಮರ ನಡೆದಿದೆ. 

‘ಕೇಜ್ರಿವಾಲ್‌ ತಮ್ಮ ವಿರುದ್ಧ ಹಾದಿ ತಪ್ಪಿಸುವ ಮತ್ತು ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಾರೆ’ ಎಂದು ಲೆಫ್ಟಿನೆಂಟ್‌ ಗವರ್ನರ್ ಆರೋಪಿಸಿದ್ದರೆ, ದೇಶದ ರಾಜಧಾನಿಯಲ್ಲಿ ‘ಕಾಂಝಾವಾಲಾ’ದಂತಹ ಮತ್ತೊಂದು ಘಟನೆ ನಡೆಯದಿರಲು ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸುವತ್ತ ರಾಜ್ಯಪಾಲರು ಗಮನ ಕೊಡಲಿ ಎಂದು ಕೇಜ್ರಿವಾಲ್‌ ಮಾತಿನಲ್ಲೇ ಕುಟುಕಿದ್ದಾರೆ.

ಸೂರ್ಯ ಮತ್ತು ಚಂದ್ರರು ತಮ್ಮ ಸ್ಥಾನದಲ್ಲಿರುವುದರಿಂದ ಬ್ರಹ್ಮಾಂಡವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚ್ಯವಾಗಿ ಹೇಳಿದ ಕೇಜ್ರಿವಾಲ್‌, ಸಕ್ಸೇನಾ ಅವರು ಕೆಲಸ ಮಾಡಲು ಅವಕಾಶ ನೀಡಬೇಕು. ಇದರಿಂದಾಗಿ ದೆಹಲಿಯ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಜ.16ರಂದು ಕೇಜ್ರಿವಾಲ್‌ ಅವರು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಮತ್ತು ಪಕ್ಷದ ಶಾಸಕರೊಡಗೂಡಿ ರಾಜಭವನಕ್ಕೆ ಮೆರವಣಿಗೆ ಹೊರಟಾಗ ತಮ್ಮ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಸಕ್ಸೇನಾ ಅವರು ಆಕ್ಷೇಪಿಸಿ ಕೇಜ್ರಿವಾಲ್‌ ಅವರಿಗೆ ಪತ್ರ ಬರೆದಿದ್ದು, ಇದರ ನಂತರ ಇಬ್ಬರ ನಡುವೆ ಮತ್ತೆ ವಾಕ್ಸಮರ ಶುರುವಾಗಿದೆ. 

‘ಕಳೆದ ಕೆಲವು ದಿನಗಳಿಂದ ರಾಜ್ಯದ ವಿಧಾನಸಭೆಯಲ್ಲಿ ಮತ್ತು ಹೊರಗೆ ನನ್ನ ವಿರುದ್ಧ ಅನೇಕ ಹೇಳಿಕೆಗಳನ್ನು ನೀಡಿರುವುದು ಮಾಧ್ಯಮ ವರದಿಗಳ ಮೂಲಕ ನನ್ನ ಗಮನಕ್ಕೆ ಬಂದಿದೆ’ ಎಂದು ಸಕ್ಸೇನಾ ಪತ್ರದಲ್ಲಿ ಕೇಜ್ರಿವಾಲ್‌ಗೆ ತಿಳಿಸಿದ್ದಾರೆ. 

ಇದೇ ವೇಳೆ ಸಕ್ಸೇನಾ ಅವರು ರಾಜಭವನದಲ್ಲಿ ಶನಿವಾರ ನಡೆಸಲಿರುವ ಸಭೆಗೆ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರಿಗೆ ಆಹ್ವಾನ ನೀಡಿದ್ದಾರೆ. ಇದನ್ನು ಸ್ವಾಗತಿಸಿರುವ ಕೇಜ್ರಿವಾಲ್‌, ತಮ್ಮ ಸಚಿವರು ಮತ್ತು ಶಾಸಕರೊಂದಿಗೆ ಹಾಜರಾಗುವುದಾಗಿ ಪ್ರತಿಕ್ರಿಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು