ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಎಪಿ ಮುಖಂಡ ಸತ್ಯೇಂದ್ರ ಜೈನ್‌ಗೆ ಜೈಲಿನಲ್ಲಿ ಮಸಾಜ್?

ವಿಡಿಯೊ ಸೋರಿಕೆ l ಎಎಪಿ ವಿರುದ್ದ ಬಿಜೆಪಿ, ಕಾಂಗ್ರೆಸ್ ವಾಗ್ದಾಳಿ
Last Updated 19 ನವೆಂಬರ್ 2022, 20:33 IST
ಅಕ್ಷರ ಗಾತ್ರ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನಲ್ಲಿ ತಮ್ಮ ಪಾದಗಳಿಗೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನಲಾದ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅವರ ಪಾದಗಳಿಗೆ ಅಪರಿಚಿತ ವ್ಯಕ್ತಿಯೊಬ್ಬರು ಮಸಾಜ್ ಮಾಡುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ.

ಕಾರಾಗೃಹ ಇಲಾಖೆಯು ದೆಹಲಿ ಎಎಪಿ ಸರ್ಕಾರದ ಸುಪರ್ದಿಯಲ್ಲಿದೆ. ಜೈನ್ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಕೋರ್ಟ್‌ನಲ್ಲಿ ಆರೋಪಿಸಿತ್ತು. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಈ ಆರೋಪಕ್ಕೆ ಸಂಬಂಧಿಸಿದ ವಿಡಿಯೊವೊಂದನ್ನು ಕೋರ್ಟ್‌ಗೆ ಸಲ್ಲಿಸಿದ್ದರು. ಜೈಲು ಅಧೀಕ್ಷಕರನ್ನು ಕಳೆದ ವಾರ ಅಮಾನತು ಮಾಡಲಾಗಿತ್ತು.ವಿಡಿಯೊ ಸೋರಿಕೆ ಮಾಡಿದ ಆರೋಪದಲ್ಲಿ ಇ.ಡಿ. ವಿರುದ್ಧ ಕೋರ್ಟ್ ಮೊರೆ ಹೋಗಲು ಜೈನ್ ಮುಂದಾಗಿದ್ದಾರೆ.

ಎಎಪಿಯನ್ನು ‘ಸ್ಪಾ ಮಸಾಜ್ ಪಾರ್ಟಿ’ ಎಂದು ಕರೆದ ಬಿಜೆಪಿ
ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿ ಪಾದದ ಮಸಾಜ್ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನಲಾದ ವಿಡಿಯೊ ಬಗ್ಗೆ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಮೌನ ವಹಿಸಿರುವುದನ್ನು ಪ್ರತಿಪಕ್ಷ ಬಿಜೆಪಿ ಪ್ರಶ್ನಿಸಿದೆ. ಜೈಲಿನಲ್ಲಿ ಜೈನ್ ಅವರ ವರ್ತನೆಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಜ್ರಿವಾಲ್ ಅವರಿಗೆ ಸವಾಲು ಹಾಕಿದೆ.

‘ಆಮ್ ಆದ್ಮಿ ಪಕ್ಷವು ಸ್ಪಾ ಅಂಡ್ ಮಸಾಜ್ ಪಾರ್ಟಿಯಾಗಿ ಬದಲಾಗಿದೆ’ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದಾರೆ. ‘ಕೇಜ್ರಿವಾಲ್ ಎಲ್ಲಿ ಅವಿತುಕೊಂಡಿದ್ದಾರೆ. ಜೈನ್ ಅವರಿಗೆ ಜೈಲಿನಲ್ಲಿ ಸಂದರ್ಶಕರಿಗೆ ಭೇಟಿಗೆ ಅವಕಾಶ ನೀಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಎಎಪಿಯು ಗಣ್ಯರನ್ನು(ವಿವಿಐಪಿ) ನಡೆಸಿಕೊಳ್ಳುತ್ತಿರುವ ಈ ಸಂಸ್ಕೃತಿಯು ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ಭಾಟಿಯಾ ಆರೋಪಿಸಿದ್ದಾರೆ.

ಜೈಲಿನಲ್ಲಿ ಫಿಸಿಯೊಥೆರಪಿ: ಸಿಸೋಡಿಯಾ ಸಮರ್ಥನೆ
ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿರುವ ವಿಡಿಯೊವನ್ನು ಬಿಜೆಪಿ ಸೋರಿಕೆ ಮಾಡಿದೆ ಎಂದು ಆರೋಪಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಜೈನ್ ಅವರು ಬೆನ್ನುಹುರಿ ಗಾಯಕ್ಕೆ ಫಿಸಿಯೊಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿ ಪಾಲಿಕೆ ಚುನಾವಣೆ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆಯ ಸೋಲಿನ ಭೀತಿಯಲ್ಲಿರುವ ಬಿಜೆಪಿ, ಜೈನ್ ಅವರ ವಿಡಿಯೊ ಸೋರಿಕೆ ಮಾಡುವ ಮೂಲಕ ಕೀಳುಮಟ್ಟದ ತಂತ್ರಗಾರಿಕೆ ಪ್ರಯೋಗಿಸುತ್ತಿದೆ ಎಂದು ಸಿಸೋಡಿಯಾ ಕಿಡಿಕಾರಿದ್ದಾರೆ. ‘ಜೈನ್ ಅವರಿಗೆ ಬೆನ್ನುಹುರಿಯಲ್ಲಿ ಗಾಯವಾಗಿದ್ದು, ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಫಿಸಿಯೊಥೆರಪಿ ಚಿಕಿತ್ಸೆಗೆ ವೈದ್ಯರು ಶಿಫಾರಸು ಮಾಡಿದ್ದಾರೆ. ಸೋರಿಕೆಯಾಗಿರುವ ವಿಡಿಯೊ ದಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯವಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಎಎಪಿ ವಿರುದ್ಧ ಕಾಂಗ್ರೆಸ್ ಕಿಡಿ
ಸ‌ತ್ಯೇಂದ್ರ ಜೈನ್ ಅವರ ಮಸಾಜ್ ವಿಡಿಯೊ ಬಗ್ಗೆ ಎಎಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರೆ ಅಲಕಾ ಲಂಬಾ, ಕೇಜ್ರಿವಾಲ್ ಅವರು ಜೈನ್ ಅವರನ್ನು ಏಕೆ ಸಂಪುಟದಿಂದ ಇನ್ನೂ ಕಿತ್ತುಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ವಿಡಿಯೊದಲ್ಲಿರುವ ದೃಶ್ಯವನ್ನು ಗಮನಿಸಿದರೆ, ಅದು ಜೈಲು ಕೊಠಡಿಯ ಬದಲಾಗಿ ಹೋಟೆಲ್ ಕೊಠಡಿಯಂತೆ ಭಾಸವಾಗುತ್ತಿದೆ ಎಂದು ಲಂಬಾ ಹೇಳಿದ್ದಾರೆ. ಈಗ ಮುಂಬೈ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್‌ನಂತಹ ಆರೋಪಿಗಳು ಮಾಡಿರುವ ಆರೋಪಗಳು ನಿಜವೆಂದು ತೋರು ತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದಿದ್ದಾರೆ.

‘ನನಗೆ ಜೈಲಿನಲ್ಲಿ ಸುರಕ್ಷತೆ ಕಲ್ಪಿಸುವ ಭರವಸೆ ನೀಡಿ, ಸತ್ಯೇಂದ್ರ ಜೈನ್ ಅವರು 2019ರಲ್ಲಿ ನನ್ನಿಂದ ₹10 ಕೋಟಿ ಹಣ ವಸೂಲಿ ಮಾಡಿದ್ದರು’ ಎಂದು ಆರೋಪಿಸಿ ಸುಕೇಶ್‌ ಚಂದ್ರಶೇಖರ್ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ಪತ್ರ ಬರೆದಿದ್ದರು. ಸುಕೇಶ್ ಬರೆದಿದ್ದ ಪತ್ರವನ್ನು ಇದೇ ಅ.8ರಂದು ಸಕ್ಸೇನಾ ಅವರಿಗೆ ತಲುಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT