ಭಾನುವಾರ, ಮೇ 16, 2021
24 °C
ಜೆಎನ್‌ಯು ಹಳೆ ವಿದ್ಯಾರ್ಥಿ

ದೆಹಲಿ ಗಲಭೆ: ಉಮರ್‌ ಖಾಲಿದ್‌ಗೆ ಅಕ್ಟೋಬರ್‌ 22ರವರೆಗೂ ನ್ಯಾಯಾಂಗ ಬಂಧನ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಜವಾಹರ್‌ಲಾಲ್‌ ನೆಹರೂ ಯೂನಿವರ್ಸಿಟಿಯ ಮಾಜಿ ವಿದ್ಯಾರ್ಥಿ  ಉಮರ್‌ ಖಾಲಿದ್‌ನನ್ನು ಅಕ್ಟೋಬರ್‌ 22ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗಲಭೆಯಲ್ಲಿ ಪಾತ್ರವಿರುವ ಆರೋಪಗಳ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ಉಮರ್‌ರನ್ನು ಕಳೆದ ಸೆ.13ರಂದು ಬಂಧಿಸಲಾಗಿತ್ತು.

ಗುರುವಾರ ಪೊಲೀಸರು ಉಮರ್‌ನನ್ನು ವಿಡಿಯೊ ಕಾನ್ಫ್‌ರೆನ್ಸ್‌ ಮೂಲಕ ದೆಹಲಿ ಕೋರ್ಟ್‌ನ ನ್ಯಾಯಾಧೀಶ ಅಮಿತಾಬ್‌ ರಾವತ್ ಎದುರು ಹಾಜರುಪಡಿಸಿದರು. ಆಕ್ಟೋಬರ್‌ 22ರವರೆಗೂ ಉಮರ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಈ ಹಿಂದೆ ಉಮರ್‌ ಮೇಲೆ ಯುಎಪಿಎ ಅಡಿಯಲ್ಲಿ ಮತ್ತೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ರಸ್ತೆ ತಡೆ ನಡೆಸಿ ಪೆಟ್ರೊಲ್‌ ಬಾಂಬ್‌ ಎಸೆದು ಸಾಮಾನ್ಯ ಜನಜೀವನಕ್ಕೆ ಅಡ್ಡಿಪಡಿಸಿರುವುದು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿರುವುದರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಗರು ಮತ್ತು ವಿರೋಧಿಸುವವರ ನಡುವೆ ಫೆಬ್ರುವರಿ 24ರಂದು ನಡೆದ ಘರ್ಷಣೆ ಹಿಂಸಾರೂಪ ಪಡೆಯಿತು. ಸುಮಾರು 72 ಗಂಟೆಗಳು ನಡೆದ ಗಲಭೆಯಿಂದಾಗಿ ಕನಿಷ್ಠ 53 ಮಂದಿ ಸಾವಿಗೀಡಾದರು ಹಾಗೂ ಸುಮಾರು 200 ಮಂದಿ ಗಾಯಗೊಂಡರು. ಗಲಭೆ ತಡೆಯುವ ಕಾರ್ಯಾಚರಣೆಯಲ್ಲಿದ್ದ ಪೊಲೀಸರ ಪೈಕಿ 108 ಮಂದಿ ಗಾಯಗೊಂಡರೆ, ಇಬ್ಬರು ಪೊಲೀಸರು ಸಾವಿಗೀಡಾದರು.

ಗಲಭೆಯಲ್ಲಿ ಭಾಗಿಯಾಗಿದ್ದ ಎಲ್ಲ ವ್ಯಕ್ತಿಗಳ ವೈಯಕ್ತಿ ಪಾತ್ರಗಳ ಕುರಿತು ತನಿಖೆ ಕೈಗೊಂಡಿರುವುದಾಗಿ ದೆಹಲಿ ಪೊಲೀಸರು ಭಾನುವಾರ ಹೇಳಿದ್ದಾರೆ. ಇದೇ ವರ್ಷ ಫೆಬ್ರುವರಿಯಲ್ಲಿ ನಡೆದಿರುವ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಪೊಲೀಸರು 751 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

‘ಗಲಭೆಯಿಂದ ಖಾಸಗಿ ಮತ್ತು ಸರ್ಕಾರದ ಬಹಳಷ್ಟು ಆಸ್ತಿ–ಪಾಸ್ತಿಗೆ ಹಾನಿಯಾಗಿದೆ. ಪ್ರಕರಣದಲ್ಲಿ ಎಲ್ಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಆರೋಪಪಟ್ಟಿ ಸಿದ್ಧಪಡಿಸಿ ಕೋರ್ಟ್‌ಗೆ ಹಾಜರು ಪಡಿಸಿರುವುದಾಗಿ’ ಪೊಲೀಸರು ಹೇಳಿದ್ದಾರೆ.

751 ಪ್ರಕರಣಗಳ ಪೈಕಿ ಪೊಲೀಸರು ಈವರೆಗೂ 1,575 ಜನರನ್ನು ಬಂಧಿಸಿದ್ದಾರೆ. ಅವರಲ್ಲಿ 1,153 ಮಂದಿ ವಿರುದ್ಧ 250 ಆರೋಪ ಪಟ್ಟಿಗಳು ಸಲ್ಲಿಕೆಯಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು