ಬುಧವಾರ, ಮೇ 25, 2022
31 °C
ಬುಲ್ಲಿ ಬಾಯಿ ಆ್ಯಪ್‌ ನಂತರ ಮಹಿಳೆಯರ ತೇಜೋವಧೆಗೆ ಬಳಕೆಯಾದ ಮತ್ತೊಂದು ವೇದಿಕೆ

ಕ್ಲಬ್‌ಹೌಸ್‌ | ಮುಸ್ಲಿಂ ಮಹಿಳೆಯರ ಅವಹೇಳನ: ಸಂಘಟಕರ ವಿವರ ಕೇಳಿದ ದೆಹಲಿ ಪೊಲೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ನವದೆಹಲಿ: ಬುಲ್ಲಿ ಬಾಯಿ ಆ್ಯಪ್‌ನ ನಂತರ ಮುಸ್ಲಿಂ ಮಹಿಳೆಯರ ತೇಜೋವಧೆಗೆ ಮಾತಿನ ಕೂಟ ಎಂದು ಜನಪ್ರಿಯವಾದ ಕ್ಲಬ್‌ಹೌಸ್‌ ಅನ್ನು ವೇದಿಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಚರ್ಚಾಕೂಟವೊಂದು ನಡೆದಿದೆ. ಈ ಸಂಬಂಧ ಚರ್ಚಾಕೂಟವನ್ನು ಆಯೋಜಿಸಿದ ಸಂಘಟಕರ ವಿವರ ಕೋರಿ ದೆಹಲಿ ಪೊಲೀಸರು ಕ್ಲಬ್‌ಹೌಸ್‌ಗೆ ಬುಧವಾರ ಪತ್ರ ಬರೆದಿದ್ದಾರೆ.

ದೆಹಲಿ ಪೊಲೀಸ್‌ ವಿಭಾಗದ ಗುಪ್ತಚರ ಮತ್ತು ಕಾರ್ಯತಂತ್ರ ಕಾರ್ಯಾಚರಣೆ ಘಟಕವು ಚರ್ಚಾಕೂಟ ನಡೆಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. 

ಕ್ಲಬ್‌ಹೌಸ್‌ನಲ್ಲಿ ಸೋಮವಾರ ಮಧ್ಯಾಹ್ನ ಚರ್ಚೆ ನಡೆಸಲಾಗಿದೆ. ಗುಂಪಿನಲ್ಲಿ ಸದಸ್ಯರು ಕೆಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ‘ಈ ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಕೆಲವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೆಹಲಿ ಮಹಿಳಾ ಆಯೋಗವು ಪತ್ರ ಬರೆದ ಬಳಿಕ ದೆಹಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. 

‘ಮುಸ್ಲಿಂ ಹುಡುಗಿಯರು ಹಿಂದೂ ಹುಡುಗಿಯರಿಗಿಂತ ಹೆಚ್ಚು ಸುಂದರವಾಗಿದ್ದಾರೆ’ ಎಂಬ ಚರ್ಚೆಯ ಕೆಲವು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಚರ್ಚೆಯು ಮಹಿಳೆಯರ ಅವಹೇಳನಕಾರಿ ಮತ್ತು ಸಮುದಾಯ ಕೇಂದ್ರಿತವಾಗಿತ್ತು ಎನ್ನಲಾಗಿದೆ. 

ಚರ್ಚೆಯಲ್ಲಿ ಭಾಗವಹಿಸಿದವರನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. 

‘ಈ ಚರ್ಚಾಕೂಟದಲ್ಲಿ ಮುಸ್ಲಿಂ ಮಹಿಳೆಯರನ್ನು ಎಲ್ಲಿ ಅವಹೇಳನಕಾರಿಯಾಗಿ ಉಲ್ಲೇಖಿಸಲಾಗಿದೆ ಎಂಬುದನ್ನು ಗುರುತಿಸಲಾಗಿದೆ. ಈ ಸಂಭಾಷಣೆಯಲ್ಲಿ ಭಾಗವಹಿಸಿದವರು ಮುಸ್ಲಿಂ ಮಹಿಳೆಯರು ಮತ್ತು ಹುಡುಗಿಯರನ್ನು ಗುರಿಯಾಗಿಟ್ಟುಕೊಂಡು ಅಶ್ಲೀಲ, ಅಸಭ್ಯ ಮತ್ತು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ಸ್ಪಷ್ಟವಾಗಿ ಕೇಳಿಸಿದೆ. ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿದೆ. ದೆಹಲಿ ಪೊಲೀಸರು ಈ ಬಗ್ಗೆ ತುರ್ತು ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ದೆಹಲಿ ಮಹಿಳಾ ಆಯೋಗವು ನೋಟಿಸ್‌ನಲ್ಲಿ ಕೋರಿದೆ.  

‘ಸುಲ್ಲಿ ಬಾಯಿ ನಂತರ ಬುಲ್ಲಿ ಬಾಯಿ ಮತ್ತು ಈಗ ಕ್ಲಬ್‌ಹೌಸ್‌ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಅಸಭ್ಯ  ಟೀಕೆಗಳು! ಎಷ್ಟು ಕಾಲ ಇವು ಮುಂದುವರೆಯುತ್ತವೆ?’ ಎಂದು ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಟ್ವೀಟ್‌ನಲ್ಲಿ  ಪ್ರಶ್ನಿಸಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು