ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸರ್ಕಾರ ಅಸ್ಥಿರಗೊಳಿಸುವ ಯತ್ನ ಫಲಿಸದು: ಸಂಜಯ ರಾವುತ್‌

Last Updated 8 ಏಪ್ರಿಲ್ 2021, 19:52 IST
ಅಕ್ಷರ ಗಾತ್ರ

ಮುಂಬೈ: ‘ಮಹಾರಾಷ್ಟ್ರದ ಮಹಾವಿಕಾಸ ಆಘಾಡಿ (ಎಂವಿಎ) ಸರ್ಕಾರವನ್ನು ಅಸ್ಥಿರಗೊಳಿಸಲು ಕೆಟ್ಟ ರಾಜಕಾರಣ ನಡೆಯುತ್ತಿದೆ. ಇಂತಹ ಯತ್ನಗಳು ಫಲ ನೀಡುವುದಿಲ್ಲ’ ಎಂದು ಶಿವಸೇನೆ ಸಂಸದ ಸಂಜಯ ರಾವುತ್‌ ಪ್ರತಿಪಾದಿಸಿದ್ದಾರೆ.

‘ಸೇವೆಯಲ್ಲಿ ಮುಂದುವರಿಸಲು ₹ 2 ಕೋಟಿ ನೀಡುವಂತೆ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್‌ ಕೇಳಿದ್ದರು. ಅಲ್ಲದೆ, ಮತ್ತೊಬ್ಬ ಮಂತ್ರಿ ಅನಿಲ್‌ ಪರಬ್‌ ಗುತ್ತಿಗೆದಾರರಿಂದ ಹಣ ಸಂಗ್ರಹಿಸಿಕೊಡಲು ತಿಳಿಸಿದ್ದರು’ ಎಂದು ಆರೋಪಿಸಿ ಅಮಾನತುಗೊಂಡಿರುವ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಪತ್ರದ ಹಿಂದೆಯೇ ರಾವುತ್‌ ಈ ಹೇಳಿಕೆ ನೀಡಿದ್ದಾರೆ.

ಉದ್ಯಮಿ ಮುಖೇಶ್‌ ಅಂಬಾನಿ ನಿವಾಸದ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಮತ್ತು ನಂತರ ಆ ವಾಹನದ ಮಾಲೀಕ ಮನ್‌ಸುಖ್‌ ಹಿರೇನ್ ಶಂಕಾಸ್ಪದ ಸಾವಿಗೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಸದ್ಯ ವಾಜೆ ಅವರನ್ನು ಬಂಧಿಸಿದ್ದಾರೆ.

ಈ ಮಧ್ಯೆ ವಾಜೆ ಆರೋಪ‍ವನ್ನು ಶಿವಸೇನೆ ನಾಯಕ ಪರಬ್‌ ತಳ್ಳಿಹಾಕಿದ್ದು, ‘ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ. ನಾನು ಬಾಬಾಸಾಹೇಬ್‌ ಠಾಕ್ರೆ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದೇನೆ, ಯಾವುದೇ ತಪ್ಪುಮಾಡಿಲ್ಲ’ ಎಂದು ಹೇಳಿದ್ದಾರೆ.

‘ಆರೋಪಿಗಳು ಈಗ ಜೈಲಿನಿಂದಲೇ ಪತ್ರ ಬರೆಯುವ ಹೊಸ ಪ್ರವೃತ್ತಿ ರಾಜ್ಯದಲ್ಲಿ ಆರಂಭವಾಗಿದೆ. ರಾಜಕೀಯ ಪಕ್ಷಗಳು ಐ.ಟಿ ಸೆಲ್ ಮತ್ತು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವ್ಯಕ್ತಿತ್ವಕ್ಕೆ ಕುಂದುತರುವ ಕೆಲಸ ಮಾಡುತ್ತಿವೆ.ಇಂಥ ಕೆಟ್ಟ ರಾಜಕಾರಣವನ್ನೇ ದೇಶ ಹಿಂದೆಂದೂ ನೋಡಿರಲಿಲ್ಲ’ ಎಂದು ರಾವುತ್ ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದರು.

ಮತ್ತೆ ವೈದ್ಯಕೀಯ ಪರೀಕ್ಷೆ: ಈ ಮಧ್ಯೆ, ಸಚಿನ್ ವಾಜೆ ಅವರನ್ನುಇಲ್ಲಿನ ಜೆಜೆ ಆಸ್ಪತ್ರೆಯಲ್ಲಿ ಎನ್‌ಐಎ ಅಧಿಕಾರಿಗಳು ಗುರುವಾರ 2ನೇ ಬಾರಿಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.

ಶೀಘ್ರ ಇಬ್ಬರು ಸಚಿವರ ರಾಜೀನಾಮೆ: ರಾಜ್ಯ ಬಿಜೆಪಿ ಅಧ್ಯಕ್ಷ ಪಾಟೀಲ್ ಭವಿಷ್ಯ
ಮುಂಬೈ:
‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಪರಿಸ್ಥಿತಿ ಸೂಕ್ತವಾಗಿದೆ. 15 ದಿನದಲ್ಲಿ ಇನ್ನು ಇಬ್ಬರು ಸಚಿವರು ರಾಜೀನಾಮೆ ನೀಡಲಿದ್ದಾರೆ’ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಹೇಳಿದ್ದಾರೆ.

ಇಬ್ಬರು ಸಚಿವರ ವಿರುದ್ಧ ಸಚಿನ್ ವಾಜೆ ಪತ್ರ ಬರೆದ ಹಿನ್ನೆಲೆಯಲ್ಲಿ ಹೀಗೇ ಪ್ರತಿಕ್ರಿಯಿಸಿರುವ ಪಾಟೀಲ್‌ ಅವರು, ಭವಿಷ್ಯದಲ್ಲಿ ಏನಾಗಬಹುದು ಎಂಬುದು ಸಾಮಾನ್ಯರ ಊಹೆಗೂ ನಿಲುಕುತ್ತದೆ ಎಂದಿದ್ದಾರೆ.

‘ಇಬ್ಬರು ಸಚಿವರ ವಿರುದ್ಧ ಕೆಲವರು ಕೋರ್ಟ್‌ ಮೆಟ್ಟಿಲು ಏರಲಿದ್ದು, ಆ ನಂತರ 15 ದಿನದಲ್ಲಿ ಇಬ್ಬರು ಸಚಿವರು ರಾಜೀನಾಮೆ ನೀಡಲೇಬೇಕಾಗುತ್ತದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆನಾನು ಒತ್ತಡ ಹೇರುವುದಿಲ್ಲ. ಆದರೆ, ಈಗಿನ ಸ್ಥಿತಿಯಲ್ಲಿ ಏನು ಮಾರ್ಗವಿದೆ ಎಂದು ಪರಿಣತರೇ ಹೇಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT