ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳ ಬಿಡುಗಡೆಗೆ ಡಿಎಂಕೆ ಆಗ್ರಹ

ರಾಜ್ಯಪಾಲರನ್ನು ಭೇಟಿಯಾದ ಎಂ.ಕೆ.ಸ್ಟಾಲಿನ್ ನೇತೃತ್ವದ ನಿಯೋಗ
Last Updated 24 ನವೆಂಬರ್ 2020, 14:14 IST
ಅಕ್ಷರ ಗಾತ್ರ

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಮಂದಿ ಅಪರಾಧಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ನೇತೃತ್ವದ ನಿಯೋಗವು ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರನ್ನು ಮಂಗಳವಾರ ಒತ್ತಾಯಿಸಿದೆ. ರಾಜ್ಯ ಸಚಿವ ಸಂಪುಟವು 2018ರಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿತ್ತು.

ಏಳು ಮಂದಿ ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿ 2018 ಸೆಪ್ಟೆಂಬರ್ 9ರಂದು ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸಿನ ಜ್ಞಾಪಕ ಪತ್ರವನ್ನು ಸ್ಟಾಲಿನ್ ಅವರು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.

ಅಪರಾಧಿಗಳಾದ ನಳಿನಿ, ಆಕೆಯ ಪತಿ ಮುರುಗನ್, ಸಂತನ್, ಎ.ಜಿ.ಪೆರಿವಾಳನ್, ಜಯಕುಮಾರ್, ರಾಬರ್ಟ್ ಪಾಯಸ್ ಮತ್ತು ಪಿ.ರವಿಚಂದ್ರನ್ ಅವರ ಬಿಡುಗಡೆಗೆ ತಮಿಳುನಾಡು ಸರ್ಕಾರವು ಒತ್ತಾಯಿಸುತ್ತಿದೆ.

‘ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಕಾನೂನಿನ ಅಡಿಯಲ್ಲಿ ಶಿಕ್ಷೆಗೊಳಗಾಗಿರುವ ಅಪರಾಧಿಯ ಶಿಕ್ಷೆಯನ್ನು ಅಮಾನತುಗೊಳಿಸುವ, ವಿನಾಯಿತಿ ನೀಡುವ ಅಥವಾ ಬದಲಾಯಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ ಎಂದು ಸಂವಿಧಾನದ 161ನೇ ವಿಧಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸಚಿವ ಸಂಪುಟವು ಬಿಡುಗಡೆಗೆ ಶಿಫಾರಸು ಮಾಡಿದ್ದರೂ ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಅದು ಬಾಕಿ ಉಳಿದಿದೆ. ಇದು ಅಪರಾಧಿಗಳಿಗೆ ಗಂಭೀರ ಮತ್ತು ಸರಿಪಡಿಸಲಾಗದಂಥ ಅನ್ಯಾಯವನ್ನು ಉಂಟುಮಾಡುತ್ತಿದೆ’ ಎಂದು ಸ್ಟಾಲಿನ್ ಹೇಳಿದ್ದಾರೆ.

ಪೆರಿವಾಳನ್ ಮನವಿಗೆ ಸಂಬಂಧಿಸಿದ ವಿಚಾರ ಅವರ ಮತ್ತು ತಮಿಳುನಾಡು ರಾಜ್ಯಪಾಲರಿಗೆ ಸಂಬಂಧಿಸಿದ್ದಾಗಿದೆ ಎಂದು ನವೆಂಬರ್ 20ರಂದು ಸಿಬಿಐಯು ಸುಪ್ರೀಂಕೋರ್ಟಿಗೆ ತಿಳಿಸಿದೆ ಎಂದು ಸ್ಟಾಲಿನ್ ಅವರು ರಾಜ್ಯಪಾಲರಿಗೆ ತಿಳಿಸಿದ್ದಾರೆ.

‘ಸಿಬಿಐ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಸಂವಿಧಾನದ ವಿಧಿಯಂತೆ ರಾಜ್ಯ ಸಚಿವ ಸಂಪುಟದ ಶಿಫಾರಸನ್ನು ಅನುಮೋದಿಸುವ ಸಂಪೂರ್ಣ ಅಧಿಕಾರ ನಿಮಗಿದೆ. ಹೀಗಾಗಿ ಸಂಪುಟದ ಶಿಫಾರಸನ್ನು ನಿಮ್ಮ ಕಚೇರಿಯು ಎರಡು ವರ್ಷಗಳಿಂದ ಬಾಕಿ ಇರಿಸಿರುವುದು ರಾಜ್ಯದ ಆಡಳಿತವನ್ನು ಕಳಪೆಯಾಗಿ ಬಿಂಬಿಸುವುದು ಮಾತ್ರವಲ್ಲದೆ ರಾಜ್ಯದ ಆಡಳಿತ ಕಾನೂನಿನ ಪ್ರಕಾರ ನಡೆಯುತ್ತಿಲ್ಲ ಎಂಬ ಸಂದೇಶ ರವಾನಿಸಿದಂತಾಗುತ್ತದೆ’ ಎಂದು ರಾಜ್ಯಪಾಲರ ಬಳಿ ಅವರು ಹೇಳಿದ್ದಾರೆ.

ತಮಿಳುನಾಡಿನ ರಾಜಕೀಯ ಪಕ್ಷಗಳು ಕಳೆದ ಕೆಲವು ವರ್ಷಗಳಿಂದ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಮಂದಿ ಅಪರಾಧಿಗಳ ಬಿಡುಗಡೆಗೆ ಒತ್ತಾಯಿಸುತ್ತಿವೆ. ಆದರೆ, ಅಪರಾಧಿಗಳನ್ನು ಬಿಡುಗಡೆ ಮಾಡುವ ಅಧಿಕಾರವು ತನಗೆ ಮಾತ್ರವೇ ಇದೆ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT