ಬುಧವಾರ, ಮೇ 25, 2022
26 °C

ಹೊಸ ಫಾಲೋವರ್ಸ್ ಸಂಖ್ಯೆ ಭಾರೀ ಕುಸಿತ: ಟ್ವಿಟರ್ ಸಿಇಒಗೆ ರಾಹುಲ್ ಗಾಂಧಿ ಖಡಕ್ ಪತ್ರ

ಅಮೃತ ಮಧುಕಲ್ಯ Updated:

ಅಕ್ಷರ ಗಾತ್ರ : | |

ನವದೆಹಲಿ: ತಮ್ಮ ಟ್ವಿಟರ್ ಖಾತೆಯ ಹೊಸ ಅನುಯಾಯಿಗಳ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವಿಟರ್ ಸಿಇಒಗೆ ಪತ್ರ ಬರೆದಿದ್ದಾರೆ.

ದಲಿತ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಟ್ವೀಟ್‌ ಮಾಡಿದ ಬಳಿಕ 2021ರ ಆಗಸ್ಟ್‌ನಲ್ಲಿ ನನ್ನ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದಾಗಿನಿಂದ ನನ್ನ ಅನುಯಾಯಿಗಳ ಸಂಖ್ಯೆ ಹೆಚ್ಚಾಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್‌ಗೆ ಪತ್ರ ಬರೆದಿದ್ದಾರೆ.

ಡಿಸೆಂಬರ್ 27 ರಂದು ಅವರು ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಅವರಿಗೆ ಬರೆದ ಪತ್ರದಲ್ಲಿ, ನಾನು ಗೊಂದಲಕ್ಕೆ ಒಳಗಾಗಿದ್ದೇನೆ ಮತ್ತು ಟ್ವಿಟರ್‌ನ ‘ಅಜ್ಞಾನದ ತೊಡಕಿನಿಂದ’ಭಾರತದಲ್ಲಿ ಮುಕ್ತ ಮತ್ತು ನ್ಯಾಯಯುತ ಅಭಿವ್ಯಕ್ತಿಯನ್ನು ನಿರ್ಬಂಧಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ದಲಿತ ಬಾಲಕಿಯ ವಿಷಯವನ್ನು ಪ್ರಸ್ತಾಪಿಸಿದಾಗಿನಿಂದ ತನ್ನ ಖಾತೆಯ ಸರಾಸರಿ ಮಾಸಿಕ ಅನುಯಾಯಿಗಳ ಸಂಖ್ಯೆ ಏರಿಕೆ ಪ್ರಮಾಣ ಶೂನ್ಯಕ್ಕೆ ಕುಸಿದಿದೆ ಎಂದು ರಾಹುಲ್ ದೂರಿದ್ದಾರೆ.

‘ಭಾರತದ ಪರಿಕಲ್ಪನೆಯ ನಾಶದಲ್ಲಿ ಟ್ವಿಟ್ಟರ್‌ ಅನ್ನು ಪಾನ್ ರೀತಿ ಬಳಸುವುದಕ್ಕೆ ಅವಕಾಶ ನೀಡಬಾರದು ಎಂದು ನಾನು ಶತಕೋಟಿಗೂ ಹೆಚ್ಚು ಭಾರತೀಯರ ಪರವಾಗಿ ನಿಮಗೆ ಪತ್ರ ಬರೆಯುತ್ತಿದ್ದೇನೆ. ಭಾರತದಲ್ಲಿ ಸರ್ವಾಧಿಕಾರದ ಬೆಳವಣಿಗೆಯಲ್ಲಿ ಟ್ವಿಟರ್ ಸಕ್ರಿಯವಾಗಿ ಸಹಾಯ ಮಾಡದಂತೆ ನೋಡಿಕೊಳ್ಳುವ ಅಗಾಧ ಜವಾಬ್ದಾರಿ ನಿಮ್ಮ ಮೇಲಿದೆ’ಎಂದು ರಾಹುಲ್ ಗಾಂಧಿ ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದ ಜೊತೆ ಅವರು ತಮ್ಮ ಅನುಯಾಯಿಗಳ ಸಂಖ್ಯೆಯ ವಿಶ್ಲೇಷಣೆಯನ್ನು ಸಹ ಕಳುಹಿಸಿದ್ದಾರೆ. ಅದನ್ನು ಪಿಎಂ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಅನುಯಾಯಿಗಳ ಸಂಖ್ಯೆಗೆ ಹೋಲಿಸಿದ್ದಾರೆ. ನಾಲ್ಕು ನಾಯಕರ ಅನುಯಾಯಿಗಳ ಎಣಿಕೆಗಳ ಮಾಸಿಕ ವಿಶ್ಲೇಷಣೆ ಹಾಗೂ ಮೇ 3 ರಿಂದ ಮೇ 10, 2021 ಮತ್ತು ನವೆಂಬರ್ 22 ರಿಂದ ನವೆಂಬರ್ 29, 2021ರ ನಡುವಿನ ವಾರದ ಹೋಲಿಕೆಯ ವಿಶ್ಲೇಷಣೆಯೂ ಇದೆ.

2021ರ ಜನವರಿಯಿಂದ ಜುಲೈವರೆಗೆ ಪ್ರತಿ ತಿಂಗಳು ರಾಹುಲ್ ಗಾಂಧಿಯವರು 2,20,000 ರಿಂದ 6,40,000 ಹೊಸ ಟ್ವಿಟರ್ ಅನುಯಾಯಿಗಳನ್ನು ಗಳಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಆದರೆ ಆಗಸ್ಟ್ 2021ರಿಂದ, ಹೊಸ ಅನುಯಾಯಿಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ.

‘ಉದಾಹರಣೆಗೆ, ಮೇ 2021 ರಲ್ಲಿ, ನನ್ನ ಖಾತೆಯು ಸರಿಸುಮಾರು 6,40,000 ಹೊಸ ಅನುಯಾಯಿಗಳನ್ನು ಗಳಿಸಿತು. ಜುಲೈ 2021ರವರೆಗೆ ಹಲವಾರು ವರ್ಷಗಳಿಂದ ಇದೇ ರೀತಿಯಾಗಿದೆ. ನಂತರ ಏನೋ ವಿಚಿತ್ರ ಸಂಭವಿಸಿದೆ. ಆಗಸ್ಟ್ 2021ರಿಂದ, ನನ್ನ ಟ್ವಿಟರ್ ಖಾತೆಯ ಮಾಸಿಕ ಹೊಸ ಅನುಯಾಯಿಗಳ ಏರಿಕೆ ಸರಾಸರಿ ಸಂಖ್ಯೆ ಶೂನ್ಯಕ್ಕೆ ಕುಸಿದಿದೆ. ನನ್ನ ಟ್ವಿಟ್ಟರ್ ಖಾತೆಗೆ ಗರ ಬಡಿದಿದೆ’ಎಂದು ರಾಹುಲ್ ಗಾಂಧಿ ಬರೆದಿದ್ದಾರೆ. ದಲಿತ ಬಾಲಕಿಯ ಅತ್ಯಾಚಾರ ವಿಷಯ ಮತ್ತು ರೈತರ ಪ್ರತಿಭಟನೆಗೆ ಕಾರಣವಾದ ಮೂರು ಕೃಷಿ ಕಾನೂನುಗಳನ್ನು ಪ್ರಸ್ತಾಪಿಸುವುದರೊಂದಿಗೆ ಈ ಬೆಳವಣಿಗೆ ನಡೆದಿದ್ದು, ಕಾಕತಾಳೀಯವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವಿಟರ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅವರು ಭಾರತ ಸರ್ಕಾರದಿಂದ ಅಪಾರ ಒತ್ತಡದಲ್ಲಿದ್ದಾರೆ ಎಂದು ರಾಹುಲ್ ದೂರಿದ್ದಾರೆ.

ಸಾಮಾಜಿಕ ಮಾಧ್ಯಮ ತಜ್ಞರು ಮಾಡಿದ ವಿಶ್ಲೇಷಣೆಯಲ್ಲಿ ಗಾಂಧಿಯವರ ಖಾತೆಯು ಆಗಸ್ಟ್, 2021ರಲ್ಲಿ 54,803 ಅನುಯಾಯಿಗಳನ್ನು ಗಳಿಸಿತು. ಅದೇ ಅವಧಿಯಲ್ಲಿ, ಮೋದಿ 7,73,134 ಅನುಯಾಯಿಗಳನ್ನು ಗಳಿಸಿದರು, ಅಮಿತ್ ಶಾ 2,85,059 ಮತ್ತು ತರೂರ್ 23,939 ಅನುಯಾಯಿಗಳನ್ನು ಪಡೆದರು. ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ, ರಾಹುಲ್ ಗಾಂಧಿಯವರು 132 ಅನುಯಾಯಿಗಳನ್ನು ಕಳೆದುಕೊಂಡರು ಮತ್ತು ನಂತರ ಕ್ರಮವಾಗಿ 2,380 ಮತ್ತು 2,788 ಅನುಯಾಯಿಗಳನ್ನು ಗಳಿಸಿದರು ಎಂದು ವಿಶ್ಲೇಷಣೆ ಹೇಳುತ್ತದೆ.

ಈ ಬೆಳವಣಿಗೆಯನ್ನು ಮೊದಲು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ವಿಟರ್ ವಕ್ತಾರರು, ವೇದಿಕೆಯಲ್ಲಿ ಮ್ಯಾನಿಪ್ಯುಲೇಷನ್ ಮತ್ತು ಸ್ಪ್ಯಾಮ್‌ ಬಗ್ಗೆ ನಾವು ಶೂನ್ಯ ಸಹಿಷ್ಣುತೆ ವಿಧಾನವನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಆರೋಗ್ಯಕರ ಸೇವೆ ಮತ್ತು ವಿಶ್ವಾಸಾರ್ಹ ಖಾತೆಗಳನ್ನು ಖಚಿತಪಡಿಸಿಕೊಳ್ಳಲು ನಡೆಯುತ್ತಿರುವ ಸ್ಥಿರವಾದ ಪ್ರಯತ್ನಗಳ ಭಾಗವಾಗಿ ನಾವು ಸ್ಪ್ಯಾಮ್ ಮತ್ತು ದುರುದ್ದೇಶಪೂರಿತ ವಿಷಯಗಳ ಬಗ್ಗೆ ಯಾಂತ್ರೀಕೃತಗೊಂಡ ಉಪಕರಣಗಳ ಮೂಲಕ ಹೋರಾಡುತ್ತೇವೆ. ಅನುಯಾಯಿಗಳ ಸಂಖ್ಯೆಯಲ್ಲಿ ಏರಿಳಿತ ಸಾಮಾನ್ಯ. ವೇದಿಕೆಯ ಮ್ಯಾನಿಪ್ಯುಲೇಷನ್ ಮತ್ತು ನಮ್ಮ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ಪ್ರತಿ ವಾರ ಲಕ್ಷಾಂತರ ಖಾತೆಗಳನ್ನು ತೆಗೆದುಹಾಕುತ್ತೇವೆ’ಎಂದು ಅವರು ಹೇಳಿದರು.

ಖಾತೆ ವಿವರಗಳನ್ನು ಮೌಲ್ಯೀಕರಿಸಲು ಅಥವಾ ದೃಢೀಕರಿಸಲು ಅಥವಾ CAPTCHA ಪರೀಕ್ಷೆಯನ್ನು ಪೂರ್ಣಗೊಳಿಸಲು ನಾವು ಖಾತೆದಾರರಿಗೆ ಮನವಿ ಮಾಡುತ್ತೇವೆ. ನಿರ್ದಿಷ್ಟ ಅವಧಿಯೊಳಗೆ ಹಾಗೆ ಮಾಡಲು ವಿಫಲವಾದ ಖಾತೆಗಳನ್ನು ಅಮಾನತುಗೊಳಿಸಬಹುದು ಅಥವಾ ಲಾಕ್ ಮಾಡಬಹುದು. ಇದರಿಂದ ಅವರ ಅನುಯಾಯಿಗಳ ಸಂಖ್ಯೆಯ ಮೇಲೂ ಪರಿಣಾಮ ಬೀರಬಹುದು ಎಂದು ಟ್ವಿಟರ್ ಹೇಳಿದೆ.

ಮತ್ತೊಂದೆಡೆ, ರಾಹುಲ್ ಗಾಂಧಿ ಅವರು ಅಗರವಾಲ್‌ಗೆ ಪತ್ರ ಕಳುಹಿಸುವ ಮೊದಲು ನಾವು ಟ್ವಿಟರ್‌ಗೆ ಹಲವಾರು ಬಾರಿ ಪತ್ರ ಬರೆದಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು