ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂತ್ರ ವಿಸರ್ಜನೆ ಪ್ರಕರಣ: ಏರ್‌ ಇಂಡಿಯಾ ವಿರುದ್ಧ ನಿವೃತ್ತ ಪೈಲಟ್‌ಗಳ ಆಕ್ರೋಶ

ವಿಮಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣ: ಏರ್‌ ಇಂಡಿಯಾ ವಿರುದ್ಧ ನಿವೃತ್ತ ಪೈಲಟ್‌ಗಳ ಆಕ್ರೋಶ
Last Updated 8 ಜನವರಿ 2023, 13:16 IST
ಅಕ್ಷರ ಗಾತ್ರ

ನವದೆಹಲಿ : ‘ವಿಮಾನದಲ್ಲಿ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣದಲ್ಲಿ ವಿಮಾನದ ಕ್ಯಾಪ‍್ಟನ್‌ ಹಾಗೂ ಕೆಲ ಸಿಬ್ಬಂದಿಯನ್ನು ಬಲಿಪಶುಮಾಡಿರುವುದು ಸರಿಯಲ್ಲ’ ಎಂದು ಅನುಭವಿ ಹಾಗೂ ನಿವೃತ್ತ ಪೈಲಟ್‌ಗಳು ಭಾನುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಘಟನೆ ಸಂಬಂಧ ವಿಮಾನದ ಪೈಲಟ್‌ ಹಾಗೂ ನಾಲ್ವರು ಕ್ಯಾಬಿನ್‌ ಸಿಬ್ಬಂದಿಗೆ ಶೋಕಾಸ್‌ ನೋಟಿಸ್ ಜಾರಿಗೊಳಿಸಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಇವರಿಗೆ ಯಾವುದೇ ಹೊಣೆ ವಹಿಸದಿರಲು ತೀರ್ಮಾನಿಸಲಾಗಿದೆ’ ಎಂದು ಏರ್‌ ಇಂಡಿಯಾ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್‌ ವಿಲ್ಸನ್‌ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದರು.

‘ಕ್ಯಾಪ್ಟನ್‌ ಮತ್ತು ಸಿಬ್ಬಂದಿ ತಪ್ಪಿತಸ್ಥರಾಗಿದ್ದರೆ ಅವರ ವಿರುದ್ಧ ಘಟನೆಯ ಮರುದಿನವೇ (ನ. 27) ಕ್ರಮ ಕೈಗೊಳ್ಳಬೇಕಿತ್ತು. ಆದರೆ ಏರ್‌ ಇಂಡಿಯಾವು ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಹಾಗೂ ಮುಜುಗರದಿಂದ ಪಾರಾಗುವ ಉದ್ದೇಶದಿಂದ ಈ ಪ್ರಕರಣದಲ್ಲಿ ಪೈಲಟ್‌ ಹಾಗೂ ಸಿಬ್ಬಂದಿಯನ್ನು ಬಲಿಪಶು ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಿಮಾನವು ನಿಗದಿತ ಮಾರ್ಗದ ಸಂಚಾರ ಪೂರ್ಣಗೊಳಿಸಿದ ಬಳಿಕ ಅದರಲ್ಲಿರುವ ಸಿಬ್ಬಂದಿಯು ಪ್ರಯಾಣದ ವೇಳೆ ಕ್ಯಾಬಿನ್‌ನಲ್ಲಿ ಏನೆಲ್ಲಾ ಆಯಿತು ಎಂಬುದರ ಕುರಿತ ವರದಿಯೊಂದನ್ನು ಸಿದ್ಧಪಡಿಸಿ, ಪೈಲಟ್‌ ಸಹಿಯೊಂದಿಗೆ ಅದನ್ನು ಕ್ಯಾಬಿನ್‌ ಸಿಬ್ಬಂದಿ ಇಲಾಖೆಗೆ ಸಲ್ಲಿಸುವುದು ವಾಡಿಕೆ. ಅದನ್ನು ಕ್ಯಾಬಿನ್‌ ಸಿಬ್ಬಂದಿ ಇಲಾಖೆ ಹಾಗೂ ಏರ್‌ ಇಂಡಿಯಾವು ಸರಿಯಾಗಿ ಪರಿಶೀಲಿಸದೇ ವಿಮಾನದ ಕ್ಯಾಪ್ಟನ್‌ನನ್ನು ದೂಷಿಸುತ್ತಿರುವುದು ಏಕೆ. ಕ್ಯಾಪ್ಟನ್‌ಗೆ ಶೋಕಾಸ್‌ ನೋಟಿಸ್‌ ನೀಡಿರುವುದು ಹಾಸ್ಯಾಸ್ಪದ’ ಎಂದು ನಿವೃತ್ತ ಪೈಲಟ್‌ ಎಸ್‌.ಎಸ್‌.ಪನೇಸರ್‌ ಕಿಡಿಕಾರಿದ್ದಾರೆ.

‘ಪೈಲಟ್‌ ಹಾಗೂ ಸಿಬ್ಬಂದಿಯನ್ನು ಹೊಣೆಯಾಗಿಸುವ ಬದಲು ಬೇಜವಾಬ್ದಾರಿಯಿಂದ ನಡೆದುಕೊಂಡಿರುವ ಉನ್ನತ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿ’ ಎಂದು ಒತ್ತಾಯಿಸಿದ್ದಾರೆ.

‘ಸಿಬ್ಬಂದಿಯು ವರದಿ ಸಲ್ಲಿಸಿದ ಬಳಿಕ ಏರ್‌ ಇಂಡಿಯಾ ಆಡಳಿತವು ಜಾಗೃತವಾಗಬೇಕಿತ್ತು. ವರದಿಯು ಅಸ್ಪಷ್ಟವಾಗಿದ್ದರೆ ಸಿಬ್ಬಂದಿಯಿಂದ ಮತ್ತಷ್ಟು ಮಾಹಿತಿ ಕೇಳಬೇಕಿತ್ತು. ಈ ಪ್ರಕರಣವನ್ನು ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿದ ಬಳಿಕ ಎಚ್ಚೆತ್ತುಕೊಂಡಿರುವ ಆಡಳಿತವು ಘಟನೆಗೆ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಲು ಮುಂದಾಗಿರುವುದು ಸರಿಯಲ್ಲ’ ಎಂದು ಕ್ಯಾಪ್ಟನ್‌ ಅಜಯ್‌ ಅಹ್ಲಾವತ್‌ ಟೀಕಿಸಿದ್ದಾರೆ.

ಕಳೆದ ವರ್ಷದ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ಮಹಿಳೆಯ ಮೇಲೆ ಮದ್ಯದ ಅಮಲಿನಲ್ಲಿದ್ದ ಆರೋಪಿ ಶಂಕರ್‌ ಮಿಶ್ರಾ ಎಂಬಾತ ಮೂತ್ರ ವಿಸರ್ಜನೆ ಮಾಡಿದ್ದ.

ಕೋಟ್ಸ್‌

ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಅದು ಪೂರ್ಣಗೊಂಡ ನಂತರ ತಪ್ಪಿತಸ್ಥರ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು–ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ವಿಮಾನಯಾನ ಸಚಿವ

ಬಾಕ್ಸ್‌

‘ಕರ್ತವ್ಯ ನಿಭಾಯಿಸುವಲ್ಲಿ ಸಿಬ್ಬಂದಿ ವಿಫಲ’

ನ್ಯೂಯಾರ್ಕ್‌ (ಪಿಟಿಐ): ‘ಕುಡಿದಿದ್ದರಿಂದ ವ್ಯಕ್ತಿಗೆ ಪ್ರಜ್ಞೆ ಇರಲಿಲ್ಲ. ಆದರೆ ವಿಮಾನ ಸಿಬ್ಬಂದಿ ಕಿಂಚಿತ್ತೂ ಕನಿಕರ ತೋರಲಿಲ್ಲ. ಅವರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪಿ ಶಂಕರ್‌ ಮಿಶ್ರಾ ಅವರ ಪಕ್ಕದ ಆಸನದಲ್ಲಿ ಕುಳಿತಿದ್ದ ಅಮೆರಿಕ ಮೂಲದ ವೈದ್ಯ ಡಾ.ಸುಗತ ಭಟ್ಟಾಚಾರ್ಜಿ ಭಾನುವಾರ ಆರೋ‍‍ಪಿಸಿದ್ದಾರೆ.

ನ್ಯೂ ಹಾಂಪ್‌ಶೈರ್‌ ನಿವಾಸಿಯಾಗಿರುವ ಅವರು ಘಟನೆ ಕುರಿತು ಏರ್‌ ಇಂಡಿಯಾಗೆ ವಿವರವಾದ ದೂರು ಸಲ್ಲಿಸಿದ್ದಾರೆ.

‘ಊಟದ ವೇಳೆ ಮಿಶ್ರಾ ನಾಲ್ಕು ಪೆಗ್‌ ಮದ್ಯ ಸೇವಿಸಿದ್ದರು. ವಿಪರೀತ ಕುಡಿದಿರುವ ಅವರ ಮೇಲೆ ನಿಗಾ ಇಡುವಂತೆ ವಿಮಾನದಲ್ಲಿದ್ದ ಪುರುಷ ಸಿಬ್ಬಂದಿಯೊಬ್ಬರಿಗೆ ತಿಳಿಸಿದ್ದೆ. ಕುಡಿದಿದ್ದವನಿಗೆ ಪ್ರಜ್ಞೆ ಇರಲಿಲ್ಲ. ಹೀಗಾಗಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ. ಸಿಬ್ಬಂದಿ ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಮೊದಲ ದರ್ಜೆ ವಿಭಾಗದಲ್ಲಿ ನಾಲ್ಕು ಆಸನಗಳು ಖಾಲಿ ಇದ್ದವು. ಮಹಿಳೆಗೆ ವಯಸ್ಸಾಗಿದ್ದರಿಂದ ಅಲ್ಲಿ ಕುಳಿತುಕೊಳ್ಳಲು ಅನುವು ಮಾಡಿಕೊಡಬಹುದಿತ್ತು. ಆದರೆ ಸಿಬ್ಬಂದಿ ಹಾಗೆ ಮಾಡಲಿಲ್ಲ’ ಎಂದು ದೂರಿದ್ದಾರೆ.

**

‘ಪರಿಸ್ಥಿತಿ ನಿಭಾಯಿಸುವಲ್ಲಿ ಹಿಂದೆ ಬಿದ್ದಿದ್ದೇವೆ’

ಮುಂಬೈ (ಪಿಟಿಐ): ‘ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಪ್ರಕರಣದಲ್ಲಿ ಏರ್‌ ಇಂಡಿಯಾ ಇನ್ನಷ್ಟು ತ್ವರಿತವಾಗಿ ಪ್ರತಿಕ್ರಿಯೆ ನೀಡಬೇಕಿತ್ತು. ಪರಿಸ್ಥಿತಿ ನಿಭಾಯಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ’ ಎಂದು ಟಾಟಾ ಸಮೂಹದ ಮುಖ್ಯಸ್ಥ ಎನ್‌.ಚಂದ್ರಶೇಖರನ್‌ ಭಾನುವಾರ ಹೇಳಿದ್ದಾರೆ.

‘ಈ ಘಟನೆ ವೈಯಕ್ತಿಕವಾಗಿ ನನಗೆ ನೋವುಂಟುಮಾಡಿದೆ. ಟಾಟಾ ಸಮೂಹ ಹಾಗೂ ಏರ್‌ ಇಂಡಿಯಾವು ತನ್ನ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡಲಿದೆ. ನಾವು ಪ್ರತಿ ‍ಪ್ರಕ್ರಿಯೆಯನ್ನೂ ಪರಿಶೀಲಿಸಲಿದ್ದು, ಅದನ್ನು ಸರಿಪಡಿಸಲೂ ಪ್ರಯತ್ನಿಸುತ್ತೇವೆ’ ಎಂದು ಪ‍್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT