ಭಾನುವಾರ, ಮಾರ್ಚ್ 26, 2023
23 °C

ಸಂಸತ್‌ ಬಿಕ್ಕಟ್ಟು ತಪ್ಪಿಸಲು ಮಧ್ಯಮಾರ್ಗ ಕಾಣುತ್ತಿಲ್ಲ: ಜೈರಾಂ ರಮೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅದಾನಿ ಹಗರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ವಹಿಸುವಂತೆ ವಿರೋಧ ಪಕ್ಷಗಳ ಆಗ್ರಹವನ್ನು ಸರ್ಕಾರ ಪರಿಗಣಿಸುತ್ತಿಲ್ಲ ಮತ್ತು ಬ್ರಿಟನ್‌ ಪ್ರವಾಸ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ಹೀಗಿರುವಾಗ ಸಂಸತ್ತಿನ ಎರಡನೇ ಅವಧಿಯ ಬಜೆಟ್‌ ಅಧಿವೇಶದ ಕಲಾಪಗಳು ಸರಾಗವಾಗಿ ನಡೆಯುವಂತೆ ಮಾಡಲು ಯಾವುದೇ ‘ಮಧ್ಯಮಾರ್ಗ’ ಕಾಣುತ್ತಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು ಶನಿವಾರ ಹೇಳಿದರು. 

ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ಅದಾನಿ ಪ್ರಕರಣವನ್ನು ಜಿಪಿಸಿಗೆ ವಹಿಸಲು 16 ವಿರೋಧ ಪಕ್ಷಗಳು ಪಟ್ಟುಹಿಡಿದಿವೆ. ಆದರೆ ಸರ್ಕಾರ 3ಡಿ ನೀತಿ (ತಿರುಚು, ಅಪಮಾನಕ್ಕೆ ಗುರಿಮಾಡು ಮತ್ತು ದಿಕ್ಕುತಪ್ಪಿಸು) ಅನುಸರಿಸುತ್ತಿದೆ ಎಂದರು.

ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯವನ್ನು ಅನೂರ್ಜಿತಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರ ಪ್ರಯತ್ನವನ್ನು ಟೀಕಿಸಿದ ಅವರು, ಈ ಎಲ್ಲಾ ಪ್ರಯತ್ನಗಳೂ ಹೆದರಿಸುವ ತಂತ್ರಗಳಾಗಿವೆ ಮತ್ತು ಮುಖ್ಯ ವಿಷಯದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಕೆಲಸವಾಗಿದೆ ಎಂದರು. 

ಉಭಯ ಸದನಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಶುಕ್ರವಾರ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ವಿರೋಧ ಪಕ್ಷಗಳು ಮಾತುಕತೆಗೆ ಮುಂದಡಿ ಇಟ್ಟರೆ ಸರ್ಕಾರವು ಎರಡು ಹೆಜ್ಜೆ ಮುಂದೆ ಇರಿಸುತ್ತದೆ ಎಂದಿದ್ದರು. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಪಕ್ಷಗಳು ನ್ಯಾಯಬದ್ಧವಾದ ಜೆಪಿಸಿ ತನಿಖೆಗೆ ಆಗ್ರಹಿಸಿದರೆ, ಆ ವಿಷಯವನ್ನು ಮರೆಮಾಚಲು ಬಿಜೆಪಿ ರಾಹುಲ್‌ ಅವರ ಕ್ಷಮೆಗೆ ಆಗ್ರಹಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ, ಜರ್ಮನಿ, ದಕ್ಷಿಣ ಕೊರಿಯ ಮತ್ತಿತರ ದೇಶಗಳಲ್ಲಿ ಭಾರತದಲ್ಲಿಯ ತಮ್ಮ ವಿರೋಧಿಗಳನ್ನು ಹಣಿಯಲು ದೇಶದ ರಾಜಕೀಯವನ್ನು ಲೇವಡಿ ಮಾಡಿದ್ದಾರೆ. ಕ್ಷಮೆ ಕೇಳಬೇಕಿರುವುದು ಅವರೇ ಹೊರತು ರಾಹುಲ್‌ ಅಲ್ಲ ಎಂದು ಹೇಳಿದರು.

‘ಅದಾನಿ ಪ್ರಕರಣದ ತನಿಖೆ ಜೆಪಿಸಿಯಿಂದ ಮಾತ್ರ ಸಾಧ್ಯ’

ಅದಾನಿ ಪ್ರಕರಣವನ್ನು ಸಮಗ್ರವಾಗಿ ತನಿಖೆಗೊಳಪಡಿಸಲು ಜಂಟಿ ಸಂಸದೀಯ ತನಿಖೆ (ಜೆಸಿಪಿ) ಏಕೈಕ ಮಾರ್ಗ. ಬೇರೆ ಎಲ್ಲಾ ಸಮಿತಿಗಳು ಸರ್ಕಾರದ ಭಾದ್ಯತೆಗೆ ಒಳಗಾಗಿ ಕೆಲಸ ಮಾಡುತ್ತವೆ ಎಂದು ಕಾಂಗ್ರೆಸ್ ಶನಿವಾರ ಅಭಿಪ್ರಾಯಪಟ್ಟಿತು. 

ಅದಾನಿ ಪ್ರಕರಣದಲ್ಲಿ ಅಕ್ರಮ ನಡೆದಿರುವ ಕುರಿತು ಯಾರ ಬಳಿಯಾದರೂ ಸಾಕ್ಷ್ಯಗಳು ಇದ್ದರೆ ಅವರು ಸುಪ್ರೀಂ ಕೋರ್ಟ್‌ ನೇಮಿಸಿರುವ ತಜ್ಞರ ಸಮಿತಿಯ ಮೊರೆಹೋಗಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿಕೆ ನೀಡಿದ್ದ ಮರುದಿನವೇ ಕಾಂಗ್ರೆಸ್‌ ಈ ಹೀಗೆ ಪ್ರತಿಕ್ರಿಯೆ ನೀಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು