ಗುರುವಾರ , ಆಗಸ್ಟ್ 18, 2022
23 °C

2–ಡಿಜಿ ಕೋವಿಡ್‌ ಸೋಂಕಿನ ಔಷಧಿ: ಮುಂದಿನ ವಾರ ಬಳಕೆಗೆ ಲಭ್ಯ –ಡಿಆರ್‌ಡಿಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಕೋವಿಡ್‌ ಸೋಂಕಿನ ವಿರುದ್ಧ ಅಭಿವೃದ್ಧಿಪಡಿಸಿರುವ 2–ಡಯಾಕ್ಸಿ–ಡಿ–ಗ್ಲೂಕೋಸ್‌ (2–ಡಿಜಿ) ಔಷಧದ 10 ಸಾವಿರ ಡೋಸ್‌ಗಳ ಬಳಕೆಗೆ ಮುಂದಿನ ವಾರ ಚಾಲನೆ ನೀಡಲಾಗುವುದು ಎಂದು ಡಿಆರ್‌ಡಿಒ ಅಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಈ ಔಷಧದ ತುರ್ತು ಬಳಕೆಗೆ ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿದ್ದಾರೆ. ಹೈದರಾಬಾದ್‌ನ ಡಾ. ರೆಡ್ಡೀಸ್‌ ಲ್ಯಾಬ್‌ನ ಸಹಯೋಗದಲ್ಲಿ ಡಿಆರ್‌ಡಿಒದ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯೂಕ್ಲಿಯರ್‌ ಮೆಡಿಸಿನ್‌ ಅಂಡ್ ಅಲೈಡ್ ಸೈನ್ಸಸ್‌ (ಐಎನ್‌ಎಂಎಎಸ್‌) ಪ್ರಯೋಗಾಲಯದಲ್ಲಿ 2–ಡಿಜಿ ಔಷಧವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಮುಂದಿನ ವಾರದ ಆರಂಭದಲ್ಲಿ ಈ ಔಷಧ ಬಳಕೆಗೆ ಲಭ್ಯವಾಗಲಿದೆ, ಮೊದಲ ಹಂತದಲ್ಲಿ 10 ಸಾವಿರ ಡೋಸ್‌ (ಪಾಕೇಟ್‌)ಗಳನ್ನು ನೀಡಲಾಗುವುದು ಎಂದು ಡಿಆರ್‌ಡಿಒದ ಅಧಿಕಾರಿ ನಾರಾಯಣ್‌ ಭಟ್‌ ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್‌ಗೆ ಡಿಆರ್‌ಡಿಒದಿಂದ ಔಷಧ: ಹೇಗೆ ಕೆಲಸ ಮಾಡುತ್ತದೆ 2–ಡಿಜಿ, ಪ್ರಯೋಜನವೇನು?

2–ಡಿಜಿ ಔಷಧದ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮುಂದಿನ ತಿಂಗಳಲ್ಲಿ ಈ ಔಷಧಿಯು ಎಲ್ಲ ಸಕ್ರಿಯ ರೋಗಿಗಳಿಗೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಶುಕ್ರವಾರ ಈ ಔಷಧಿಯ ಬಗ್ಗೆ ರಾಜ್ಯದ ಆರೋಗ್ಯ ಸಚಿವ ಸುಧಾಕರ್‌ ಅವರು ಡಿಆರ್‌ಡಿಒ ಕೇಂದ್ರದಲ್ಲಿ ಮಾಹಿತಿ ಪಡೆದರು.

ಸಣ್ಣ ಪೊಟ್ಟಣದಲ್ಲಿ ಪುಡಿಯ ರೂಪದಲ್ಲಿರುವ ‘2–ಡಿಜಿ’ ಔಷಧವನ್ನು ನೀರಿನಲ್ಲಿ ಬೆರೆಸಿ ಸೇವಿಸಬಹುದಾಗಿದೆ. ಇದು ಕೋವಿಡ್‌ಗೆ ಒಳಗಾಗಿ ಆಸ್ಪತ್ರೆಗೆ ಸೇರಿದ ರೋಗಿಗಳು ಶೀಘ್ರವಾಗಿ ಗುಣಮುಖರಾಗಲು ನೆರವಾಗುತ್ತದೆ. ಅಲ್ಲದೆ, ಆಮ್ಲಜನಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು