ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನ ದಿನಕ್ಕೂ ತಿರುವು ಪಡೆಯುತ್ತಿರುವ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ!

ಲಂಚ ಆರೋಪದ ತನಿಖೆಗೆ ಒತ್ತಡ: ಎನ್‌ಸಿಬಿ ಅಧಿಕಾರಿ ಸಮೀರ್‌ಗೆ ಇಕ್ಕಟ್ಟು
Last Updated 25 ಅಕ್ಟೋಬರ್ 2021, 19:59 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಕಡಲ ಕಿನಾರೆಯ ಸಮೀಪ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಸೇವನೆ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದ ಮಾದಕ ಪದಾರ್ಥ ನಿಯಂತ್ರಣ ಬ್ಯೂರೊದ (ಎನ್‌ಸಿಬಿ) ಅಧಿಕಾರಿ ಸಮೀರ್‌ ವಾಂಖೆಡೆ ಅವರೇ ಈಗ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಕ್‌ ಖಾನ್‌ ಅವರ ಮಗ ಆರ್ಯನ್‌ ಖಾನ್‌ ಮತ್ತು ಇತರರುಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಆದರೆ, ಈ ಪ್ರಕರಣದ ಬಗ್ಗೆಯೇ ಈಗ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಉದ್ಧವ್‌ ಠಾಕ್ರೆ ನೇತೃತ್ವದಮಹಾರಾಷ್ಟ್ರ ಸರ್ಕಾರದ ಹಲವು ಸಚಿವರು ಇದೊಂದು ನಕಲಿ ಪ್ರಕರಣ ಎಂಬ ಗಂಭೀರ ಆರೋಪ ಮಾಡಿದ್ಧಾರೆ.

ಪ್ರಕರಣದಿಂದ ಆರ್ಯನ್‌ನನ್ನು ಕೈಬಿಡಲು ವಾಂಖೆಡೆ ಮತ್ತು ಇತರರು ₹25 ಕೋಟಿಗೆ ಬೇಡಿಕೆ ಇರಿಸಿದ್ದರು ಎಂದು ಪ್ರಮುಖ ಸಾಕ್ಷಿ ಪ್ರಭಾಕರ ಸೈಲ್ ಎಂಬವರು ಆರೋಪ ಮಾಡಿದ್ಧಾರೆ. ಇದಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ನೈರುತ್ಯ ವಲಯ ಕಚೇರಿ ಉಪ ಪ್ರಧಾನ ನಿರ್ದೇಶಕರಿಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈ ಪ್ರಮಾಣ ಪತ್ರವನ್ನು ನೈರುತ್ಯ ವಲಯ ಕಚೇರಿಯು,ಎನ್‌ಸಿಬಿ ಕೇಂದ್ರ ಕಚೇರಿಗೆ ರವಾನಿಸಿತ್ತು. ಇದರ ಆಧಾರದಲ್ಲಿ,ಎನ್‌ಸಿಬಿ ಕೇಂದ್ರ ಕಚೇರಿಯು ಸೋಮವಾರ ಮಧ್ಯಾಹ್ನವೇ ತನಿಖೆಗೆ ಆದೇಶಿಸಿದೆ.

ಲಂಚದ ಆರೋಪ ಕುರಿತಂತೆ ವಿಶೇಷ ತನಿಖಾ ತಂಡದಿಂದ ತನಿಖೆ ಆಗಬೇಕು ಎಂದು ಆಡಳಿತಾರೂಢ ಮಹಾ ವಿಕಾಸ ಅಘಾಡಿಯ ಅಂಗಪಕ್ಷಗಳಾದ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಒತ್ತಾಯಿಸಿವೆ. ಅದರ ಬೆನ್ನಿಗೇ, ಉದ್ಧವ್‌ ಅವರು ರಾಜ್ಯದ ಗೃಹ ಸಚಿವ ದಿಲೀಪ್‌ ವಲ್ಸೆ ಪಾಟೀಲ್‌ ಅವರ ಜತೆಗೆ ಚರ್ಚೆ ನಡೆಸಿದ್ದಾರೆ.

ಆರ್ಯನ್‌ ಜಾಮೀನು ಅರ್ಜಿಯು ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರುವುದಕ್ಕೆ ಒಂದು ದಿನ ಮೊದಲು ಈ ಎಲ್ಲ ಬೆಳವಣಿಗೆಗಳು ಆಗಿವೆ.

–––

ಜಾತಿ ಪ್ರಮಾಣಪತ್ರ ತಿರುಚಿದ ಸಮೀರ್: ನವಾಬ್ ಆರೋಪ

‘ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಕೆಲಸಕ್ಕೆ ಸೇರುವುದಕ್ಕಾಗಿ ತಮ್ಮಜಾತಿ ಪ್ರಮಾಣಪತ್ರವನ್ನು ತಿರುಚಿದ್ದಾರೆ. ವಾಂಖೆಡೆ ಮುಸ್ಲಿಂ, ಆದರೆ ತಾನು ಹಿಂದೂ ಎಂದು ಪ್ರಮಾಣ ಪತ್ರ ಸೃಷ್ಟಿಸಿ ಭಾರತೀಯ ರೆವೆನ್ಯೂ ಸೇವೆಗೆ ಸೇರಿದ್ದಾರೆ' ಎಂದು ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಆರೋಪಿಸಿದ್ದಾರೆ.

ಈ ಆರೋಪವನ್ನು ಸಮೀರ್ ವಾಂಖೆಡೆ ಅಲ್ಲಗಳೆದಿದ್ದಾರೆ.‘ನಾನುಜಾತಿ ಪ್ರಮಾಣಪತ್ರವನ್ನು ತಿರುಚಿಲ್ಲ. ನನ್ನ ವೈಯಕ್ತಿಕ ಮತ್ತುಖಾಸಗಿ ಜೀವನಕ್ಕೆ ಸಂಬಂಧಿಸಿದ ವಿವರಗಳನ್ನು ನವಾಬ್ ಮಲಿಕ್ಅವರು ಸಾರ್ವಜನಿಕವಾಗಿ ಬಹಿರಂಗಗೊಳಿಸುತ್ತಿದ್ದಾರೆ. ಇದು ಮಾನಹಾನಿಪ್ರಕರಣ’ ಎಂದು ಸಮೀರ್ ವಾಂಖೆಡೆ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಸಮೀರ್ ವಾಂಖೆಡೆ ಅವರ ಬೆಂಬಲಕ್ಕೆ ಅವರ ತಂದೆ ಮತ್ತು ಪತ್ನಿ ಬಂದಿದ್ದಾರೆ. ಸಮೀರ್‌ ಅವರು ಯಾವುದೇ ರೀತಿಯಲ್ಲಿ ವಂಚನೆಮಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ‘ನವಾಬ್ಮಲಿಕ್ ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ.ಅದರ ವಿರುದ್ಧ ತನಿಖೆ ನಡೆಸಬೇಕು’ ಎಂದು ಸಮೀರ್ ಅವರ ತಂದೆ ಆಗ್ರಹಿಸಿದ್ದಾರೆ.

––––

ನನಗೆ ರಕ್ಷಣೆ ನೀಡಿ: ಸಾಕ್ಷಿಯ ಮನವಿ

ಎನ್‌ಸಿಬಿ ಅಧಿಕಾರಿ ವಿರುದ್ಧ ಲಂಚದ ಆರೋಪ ಮಾಡಿರುವ ಸಾಕ್ಷಿ ಪ್ರಭಾಕರ್‌ ಸೈಲ್‌ ಅವರು, ‘ನನಗೆ ಜೀವ ಬೆದರಿಕೆ ಇದೆ. ರಕ್ಷಣೆ ನೀಡಿ’ ಎಂದು ಮುಂಬೈ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಆಯುಕ್ತರ ಕಚೇರಿಗೆ ಭೇಟಿ ನೀಡಿದ್ದ ಪ್ರಭಾಕರ್ ಅವರು, ಆಯುಕ್ತರ ಜತೆಗೆ ಸುಮಾರು 1 ಗಂಟೆ ಮಾತುಕತೆ ನಡೆಸಿದ್ದಾರೆ. ತಮಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ. ನಂತರ ತಮ್ಮ ಹುಟ್ಟೂರಿನಲ್ಲಿ ಕುಟುಂಬ ದವರಿಗೂ ಬೆದರಿಕೆ ಇದೆ. ಅವರಿಗೂ ರಕ್ಷಣೆ ನೀಡಬೇಕು ಮತ್ತು ಅವರನ್ನು ಭೇಟಿ ಮಾಡಲು ಹೋದಾಗ ತಮಗೂರಕ್ಷಣೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT