ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನಮತ್ತರಾಗಿದ್ದ ಮಾನ್ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತೇ? ಪಂಜಾಬಲ್ಲಿ ಕೋಲಾಹಲ

Last Updated 19 ಸೆಪ್ಟೆಂಬರ್ 2022, 11:26 IST
ಅಕ್ಷರ ಗಾತ್ರ

ಚಂಡೀಗಢ: ಪಾನಮತ್ತರಾಗಿದ್ದ ಭಗವಂತ್ ಮಾನ್ ಅವರನ್ನು ಜರ್ಮನಿಯ ಲುಫ್ತಾನ್ಸ ವಿಮಾನದಿಂದ ಕೆಳಗಿಳಿಸಲಾಗಿದೆ. ಫ್ರಾಂಕ್‌ಫರ್ಟ್‌ – ದೆಹಲಿ ನಡುವಿನ ವಿಮಾನ ಅವರಿಂದಾಗಿ ನಾಲ್ಕು ಗಂಟೆ ತಡವಾಗಿದೆ ಎಂಬ ಕೆಲ ವರದಿಗಳು ಪಂಜಾಬ್‌ನಲ್ಲಿ ತೀವ್ರ ಕೋಲಾಹಲ ಸೃಷ್ಟಿ ಮಾಡಿವೆ.

ಈ ವಿಚಾರವನ್ನು ಹಿಡಿದು, ಪಂಜಾಬ್‌ನ ಎಎಪಿ ಸರ್ಕಾರವನ್ನು ಹಣಿಯುತ್ತಿರುವ ವಿರೋಧ ಪಕ್ಷಗಳು, ಭಗವಂತ ಮಾನ್‌ ಪಂಜಾಬಿಗಳು ನಾಚಿಕೆಪಡುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

ಅಸ್ವಸ್ಥತೆ ಕಾರಣದಿಂದಾಗಿ ಅವರು ದೆಹಲಿಗೆ ಹಿಂದಿರುಗುವುದು ವಿಳಂಬವಾಗಿದೆ ಎಂದು ಮಾನ್ ಅವರ ಕಚೇರಿ ಹೇಳಿದೆ. ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ ಎಂದು ಎಎಪಿ ಆರೋಪಿಸಿದೆ.

ಲುಫ್ತಾನ್ಸ ಹೇಳಿಕೆಯನ್ನು ಹಂಚಿಕೊಂಡಿರುವ ಎಎಪಿ, ‘ಒಳಬರುವ ವಿಮಾನ ವಿಳಂಬವಾಗಿದ್ದರಿಂದ ಮತ್ತು ವಿಮಾನ ಬದಲಾವಣೆ ಕಾರಣಗಳಿಂದಾಗಿ ತಡವಾಗಿದೆ’ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

‘ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತುಂಬಾ ಕುಡಿದಿದ್ದರಿಂದ ಅವರನ್ನು ಲುಫ್ತಾನ್ಸ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಅವರ ಸಹ ಪ್ರಯಾಣಿಕರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಅವರ ಕಾರಣದಿಂದ ವಿಮಾನ 4 ಗಂಟೆ ವಿಳಂಬವಾಗಿದೆ. ಅವರು ಎಎಪಿಯ ರಾಷ್ಟ್ರೀಯ ಸಮಾವೇಶಕ್ಕೂ ಗೈರಾಗಿದ್ದಾರೆ. ಈ ವರದಿಗಳು ಮುಜುಗರಕ್ಕೆ ಕಾರಣವಾಗಿವೆ ಮತ್ತು ಜಗತ್ತಿನಾದ್ಯಂತ ಇರುವ ಪಂಜಾಬಿಗಳನ್ನು ನಾಚಿಕೆಪಡುವಂತಾಗಿದೆ’ ಎಂದು ಅಕಾಲಿ ದಳದ ಮುಖಂಡ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮಾಡಿದ್ದಾರೆ.

‘ಆಘಾತಕಾರಿ ಎಂದರೆ, ಪಂಜಾಬ್ ಸರ್ಕಾರವು ಸಿಎಂ ಭಗವಂತ್ ಮಾನ್ ಅವರಿಗೆ ಸಂಬಂಧಿಸಿದ ವರದಿಗಳ ಬಗ್ಗೆ ಮೌನವಾಗಿದೆ. ಅರವಿಂದ್ ಕೇಜ್ರಿವಾಲ್ ಅವರು ಈ ವಿಷಯದ ಬಗ್ಗೆ ಸ್ಪಷ್ಟವಾಗಿರಬೇಕು. ಇದು ಪಂಜಾಬಿಗಳು ಮತ್ತು ರಾಷ್ಟ್ರೀಯ ಘನತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಭಾರತ ಸರ್ಕಾರವು ಮಧ್ಯಪ್ರವೇಶಿಸಬೇಕು. ಮಾನ್‌ ಅವರನ್ನು ವಿಮಾನದಿಂದ ಸುಮ್ಮನೇ ಕೆಳಗೆ ಇಳಿಸಿದ್ದರೆ, ಭಾರತ ಸರ್ಕಾರ ಜರ್ಮನಿಯ ಗಮನಕ್ಕೆ ತರಬೇಕು’ ಎಂದು ಅವರು ಹೇಳಿದ್ದಾರೆ.

ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಲುಫ್ತಾನ್ಸ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಮುಖ್ಯಮಂತ್ರಿ ಪಾನಮತ್ತರಾಗಿದ್ದರು ಎಂದು ಹೇಳಿರುವ ವರದಿಯನ್ನು ಕಾಂಗ್ರೆಸ್‌ ಕೂಡ ಟ್ವೀಟ್ ಮಾಡಿ ಟೀಕೆ ಮಾಡಿದೆ.

‘ಮಾನ್ ಅವರು ಅತಿಯಾಗಿ ಕುಡಿದಿದ್ದರು. ಅವರಿಗೆ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಅವರ ಪತ್ನಿ ಮತ್ತು ಭದ್ರತಾ ಸಿಬ್ಬಂದಿ ಅವರಿಗೆ ನೆರವಾಗುತ್ತಿದ್ದರು’ ಎಂಬ ಪ್ರಯಾಣಿಕರೊಬ್ಬರ ಹೇಳಿಕೆ ಉಲ್ಲೇಖಿಸಿ ಮಾಡಲಾಗಿರುವ ವರದಿಯೊಂದರ ಚಿತ್ರವನ್ನು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಈ ಬಗ್ಗೆ ಮಾತನಾಡಿರುವ ಎಎಪಿ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್, ‘ಮುಖ್ಯಮಂತ್ರಿ ಅವರು ನಿಗದಿಯಂತೇ ಸೆಪ್ಟೆಂಬರ್ 19ರಂದು ಹಿಂತಿರುಗಿದ್ದಾರೆ. ಈ ಎಲ್ಲಾ ಸಾಮಾಜಿಕ ಮಾಧ್ಯಮ ವರದಿಗಳು ಕೇವಲ ಅಪಪ್ರಚಾರವಷ್ಟೇ. ಮಾನ್ ಅವರು ತಮ್ಮ ವಿದೇಶ ಪ್ರವಾಸದ ಮೂಲಕ ಒಂದಷ್ಟು ಹೂಡಿಕೆ ತರುತ್ತಿರುವುದನ್ನು ಕಂಡು ವಿರೋಧ ಪಕ್ಷಗಳು ಕಂಗಾಲಾಗಿವೆ. ಅಗತ್ಯವಿದ್ದವರು ಲುಫ್ತಾನ್ಸ ಏರ್‌ಲೈನ್ಸ್‌ನ ಬಳಿ ಪರಿಶೀಲಿಸಬಹುದು’ ಎಂದು ಹೇಳಿದ್ದಾರೆ.

‘ ಒಳಬರುವ ವಿಮಾನ ವಿಳಂಬವಾಗಿದ್ದರಿಂದ ಮತ್ತು ವಿಮಾನ ಬದಲಾವಣೆ ಕಾರಣಗಳಿಂದಾಗಿ ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ತೆರಳುತ್ತಿದ್ದ ನಮ್ಮ ವಿಮಾನ ವಿಳಂಬವಾಯಿತು. ಮಾಹಿತಿ ರಕ್ಷಣೆಯ ಕಾರಣಗಳಿಗಾಗಿ ನಾವು ಪ್ರಯಾಣಿಕರಿಗೆ ಸಂಬಂಧಿಸಿದಂತೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಒದಗಿಸುವುದಿಲ್ಲ’ ಎಂದು ಲುಫ್ತಾನ್ಸ ಸ್ಪಷ್ಟನೆಯಲ್ಲಿ ತಿಳಿಸಿದೆ.

ಹೂಡಿಕೆ ಆಕರ್ಷಿಸಲು ಮಾನ್ ಸೆಪ್ಟೆಂಬರ್ 11 ರಿಂದ 18 ರವರೆಗೆ ಜರ್ಮನಿ ಪ್ರವಾಸ ಕೈಗೊಂಡಿದ್ದರು.

ಮದ್ಯಪಾನ ತೊರೆಯುವುದಾಗಿ ಭಗವಂತ ಮಾನ್‌ ಅವರು ತಮ್ಮ ತಾಯಿಯ ಸಮ್ಮುಖದಲ್ಲಿ 2019ರಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರತಿಜ್ಞೆಯನ್ನು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT