ಬುಧವಾರ, ಅಕ್ಟೋಬರ್ 21, 2020
24 °C
ಜನರೇಟರ್‌ ಕಾರ್ಯನಿರ್ವಹಣೆಗೆ ಡೀಸೆಲ್ ದಾಸ್ತಾನಿಡಲು ಆಸ್ಪತ್ರೆಗಳಿಗೆ ಸೂಚನೆ

ತಾಂತ್ರಿಕ ದೋಷ: ಮುಂಬೈನಲ್ಲಿ ವಿದ್ಯುತ್ ಸಂ‍ಪರ್ಕ ಕಡಿತ, ರೈಲು ಸಂಚಾರ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ತಾಂತ್ರಿಕ ದೋಷದಿಂದಾಗಿ ವಾಣಿಜ್ಯನಗರಿ ಮುಂಬೈನಲ್ಲಿ ಸೋಮವಾರ (ಅ.12) ಬೆಳಿಗ್ಗೆ 10 ಗಂಟೆಯಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಮುಂಬೈ ನಗರ, ಉಪನಗರ, ಠಾಣೆ, ಪಾಲ್ಘಡ ಮತ್ತು ರಾಯಗಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಪರಿಣಾಮವಾಗಿ ಕೇಂದ್ರ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ನಡುವಿನ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಕೆಲವು ಪ್ರಯಾಣಿಕರು ರೈಲಿನಿಂದ ಇಳಿದು, ಹಳಿಗಳನ್ನು ದಾಟಿ ಬಸ್‌, ಆಟೊಗಳನ್ನು ಹಿಡಿಯುವತ್ತ ಹೆಜ್ಜೆ ಹಾಕಿದರು.

ವಿದ್ಯತ್ ಸಂಪರ್ಕದಲ್ಲಾದ ವ್ಯತ್ಯಯವು ಟ್ರಾಫಿಕ್‌ ಸಿಗ್ನಲ್‌ಗಳ ಮೇಲೆಯೂ ಪರಿಣಾಮಬೀರಿದ್ದು, ರಸ್ತೆ ಸಂಚಾರವೂ ಅಸ್ತವ್ಯಸ್ತಗೊಂಡಿತು. ಆದರೆ, ವಿಮಾನ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಈ ವಿದ್ಯುತ್‌ ವ್ಯತ್ಯಯ, ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಮೇಲೆ ತೀವ್ರ ಪರಿಣಾಮಬೀರುವ ಸಾಧ್ಯತೆ ಬಗ್ಗೆ ಆತಂಕವಿತ್ತು. ಆದರೆ, ಮುಂಬೈನ ಯಾವುದೇ ಆಸ್ಪತ್ರೆಯ ಕಾರ್ಯನಿರ್ವಹಣೆಯ ಮೇಲೂ ದೊಡ್ಡ ಪರಿಣಾಮ ಬೀರಿಲ್ಲ.

ಈ ಮಧ್ಯೆ, ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್, ಎಂಟು ಗಂಟೆಗಳ ಕಾಲ ಜನರೇಟರ್‌ ಕಾರ್ಯನಿರ್ವಹಿಸಲು ಅಗತ್ಯವಿರುವಷ್ಟು ಡೀಸೆಲ್‌ ಸಂಗ್ರಹಿಸಿಟ್ಟುಕೊಳ್ಳುವಂತೆ ಎಲ್ಲ ಆಸ್ಪತ್ರೆಗಳಿಗೂ ಸೂಚಿಸಿದರು. ಇದರಿಂದ ತೀವ್ರ ನಿಗಾ ಘಟಕಗಳ ಕಾರ್ಯನಿರ್ವಹಣೆಗೆ ಯಾವುದೇ ರೀತಿ ಅಡಚಣೆ ಉಂಟಾಗುವುದಿಲ್ಲ ಎಂದು ತಿಳಿಸಿದರು.

ಆಸ್ಪತ್ರೆಗಳ ನಿಯಂತ್ರಣ ಕೊಠಡಿ ಮುಖ್ಯಸ್ಥರು ಪ್ರತಿ ಅರ್ಧ ಗಂಟೆಗೊಮ್ಮೆ ತಮ್ಮ ಆಸ್ಪತ್ರೆಯಲ್ಲಾಗುವ ಬೆಳವಣಿಗೆಗಳ ಬಗ್ಗೆ ಪಾಲಿಕೆಗೆ ಮಾಹಿತಿ ನೀಡುವಂತೆ ಸೂಚಿಸಿದರು. ಸಂಭಾವ್ಯ ವಿಪತ್ತನ್ನು ಎದುರಿಸಲು ಆಸ್ಪತ್ರೆಗಳೊಂದಿಗೆ ಸಂಪರ್ಕದಲ್ಲಿರುವಂತೆ ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಇಂಧನ ಸಚಿವ ನಿತಿನ್ ರಾವತ್ ಅವರೊಂದಿಗೆ ಘಟನೆ ಕುರಿತು ಚರ್ಚಿಸಿದರು. ನಾಗಪುರದಲ್ಲಿ, ಮಹಾರಾಷ್ಟ್ರ ರಾಜ್ಯ ವಿದ್ಯುತ್ ಪ್ರಸರಣ ಕಂಪನಿಯ 400 ಕೆ.ವಿ. ವಿದ್ಯುತ್ ಸರಬರಾಜು ಕೇಂದ್ರದಲ್ಲಾದ ತಾಂತ್ರಿಕ ದೋಷದಿಂದ, ವಿದ್ಯುತ್ ಪೂರೈಕೆಯ ಮೇಲೆ ಪರಿಣಾಮ ಬೀರಿದೆ ಎಂದು ಸಚಿವರು ಮಾಹಿತಿ ನೀಡಿದರು.

'ತಾಂತ್ರಿಕ ದೋಷವನ್ನು ಸರಿಪಡಿಸಿ, ವಿದ್ಯುತ್ ವ್ಯತ್ಯಯ ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಒಂದೆರಡು ಗಂಟೆಗಳಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರುವ ನಿರೀಕ್ಷೆ ಇದೆ’ ಎಂದು ಸಚಿವ ರಾವತ್‌, ಮುಖ್ಯಮಂತ್ರಿಗೆ ತಿಳಿಸಿದರು. ಮಹಾರಾಷ್ಟ್ರ ಸರ್ಕಾರ ಈ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು