ಮಂಗಳವಾರ, ಅಕ್ಟೋಬರ್ 19, 2021
24 °C
ಅಕ್ರಮ ಹಣ ವರ್ಗಾವಣೆ ಆರೋಪ

ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್‌ ಮನೆ, ಕಚೇರಿಯಲ್ಲಿ ಇ.ಡಿ ಯಿಂದ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಐಎಎಸ್‌ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್‌ ಅವರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (.ಇ.ಡಿ) ಅಧಿಕಾರಿಗಳು ಗುರುವಾರ ಶೋಧ ನಡೆಸಿದ್ದಾರೆ.

ಜರ್ಮನಿಯ ರಾಬರ್ಟ್‌ ಬಾಷ್‌ ಅಕಾಡೆಮಿಯ ಫೆಲೋಷಿಪ್‌ ಹಿನ್ನೆಲೆಯಲ್ಲಿ ಹರ್ಷ ಮಂದರ್‌ ಅವರು ಬೆಳಿಗ್ಗೆ ಬರ್ಲಿನ್‌ಗೆ ಪ್ರಯಾಣ ಬೆಳಸಿದ ಕೆಲವೇ ಗಂಟೆಗಳ ನಂತರ, ಈ ಶೋಧ ಕಾರ್ಯ ನಡೆದಿದೆ.

ಹರ್ಷ ಮಂದರ್‌ ವಿರುದ್ಧ ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗವು ಎಫ್‌ಐಆರ್‌ ದಾಖಲಿಸಿದೆ. ಈ ಎಫ್‌ಐಆರ್‌ನ ಆಧಾರದ ಮೇಲೆ ಅವರ ವಿರುದ್ಧ  ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿರುವ ಇ.ಡಿ. ಈಗ ಶೋಧ ನಡೆಸಿದೆ.

ವಸಂತ್ ಕುಂಜದಲ್ಲಿರುವ ಮನೆ, ಅಡ್ಚಿನಿಯಲ್ಲಿರುವ ಅವರ ಒಡೆತನದ ಎನ್‌ಜಿಒ ಸೆಂಟರ್‌ ಫಾರ್ ಈಕ್ವಿಟಿ ಸ್ಟಡೀಸ್‌ನ (ಸಿಇಎಸ್‌) ಕಚೇರಿಯಲ್ಲಿ ಶೋಧ ನಡೆಸಿದ್ದಾರೆ.

ಮೆಹ್ರೌಲಿಯಲ್ಲಿರುವ ಸಿಇಎಸ್‌ ಒಡೆತನದ ಬಾಲಮಂದಿರಗಳ ಮೇಲೂ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡರು.

ಮಂದರ್‌ ಅವರು ಸಿಇಎಸ್‌ನ ನಿರ್ದೇಶಕರಾಗಿದ್ದಾರೆ. ಈ ಎನ್‌ಜಿಒ ‘ಉಮೀದ್‌ ಅಮನ್‌ ಘರ್‌’ ಹಾಗೂ ‘ಖುಷಿ ರೇನ್‌ಬೊ ಹೋಂ’ ಎಂಬ ಬಾಲಮಂದಿರಗಳನ್ನು ನಡೆಸುತ್ತಿದೆ. ರಾಜಕೀಯ ವಿಜ್ಞಾನಿ ಝೋಯಾ ಹಸನ್‌, ಸಾಮಾಜಿಕ ಕಾರ್ಯಕರ್ತ ಬೆಜವಾಡ ವಿಲ್ಸನ್ ಹಾಗೂ ಆರ್ಥಿಕ ತಜ್ಞೆ ದೀಪ ಸಿನ್ಹಾ ಅವರು ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರಾಗಿದ್ದಾರೆ.

ಈ ಬಾಲಮಂದಿರಗಳ ನಿರ್ವಹಣೆಯಲ್ಲಿ ಸಿಇಎಸ್‌ನಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಆರೋಪಿಸಿತ್ತು.

‘ಸಿಎಎ ವಿರೋಧಿಸಿ ಜಂತರ್ ಮಂತರ್‌ ಸೇರಿದಂತೆ ವಿವಿಧೆಡೆ ಪ್ರತಿಭಟನೆಗಳು ನಡೆದ ಸ್ಥಳಗಳಿಗೆ ತಮ್ಮನ್ನು ಸಿಇಎಸ್‌ ಸದಸ್ಯರು ಕರೆದೊಯ್ದಿದ್ದರು ಎಂಬುದಾಗಿ ಬಾಲಮಂದಿರಗಳಲ್ಲಿರುವ ಮಕ್ಕಳು ತಿಳಿಸಿದ್ದಾರೆ’ ಎಂಬುದಾಗಿ ಎನ್‌ಸಿಪಿಸಿಆರ್‌ ಆರೋಪಿಸಿತ್ತು. 

ಈ ಸಂಬಂಧ ಎನ್‌ಸಿಪಿಸಿಆರ್‌ ಸಲ್ಲಿಸಿದ ದೂರಿನ ಅನ್ವಯ ದೆಹಲಿ ಪೊಲೀಸರು ಕಳೆದ ಫೆಬ್ರುವರಿಯಲ್ಲಿ ಸಿಇಎಸ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆದರೆ, ಎನ್‌ಸಿಪಿಸಿಆರ್‌ನ ಆರೋಪಗಳನ್ನು ದೆಹಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಡಿಸಿಪಿಸಿಆರ್‌) ತಳ್ಳಿ ಹಾಕಿತ್ತು.

‘ರಾಜಕೀಯ ಪ್ರತೀಕಾರದಿಂದಾಗಿ ತನ್ನ ಒಡೆತನದ ಎನ್‌ಜಿಒ ತೊಂದರೆ ಅನುಭವಿಸುತ್ತಿದೆ’ ಎಂಬ ಹರ್ಷ ಮಂದರ್ ಅವರ ಹೇಳಿಕೆಯನ್ನು ಡಿಸಿಪಿಸಿಆರ್‌ ಬೆಂಬಲಿಸಿತ್ತು.

ಆಕ್ರೋಶ: ಹರ್ಷ ಮಂದರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಶೋಧ ಕಾರ್ಯ ಕೈಗೊಂಡಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ವಿರೋಧ ಪಕ್ಷಗಳ ಮುಖಂಡರು, ಸಾಮಾಜಿಕ ಹೋರಾಟಗಾರರು ಹಾಗೂ ಹರ್ಷ ಮಂದರ್‌ ಅವರ ಸ್ನೇಹಿತರು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾನು ಕಳೆದ 40 ವರ್ಷಗಳಿಂದ ಹರ್ಷ ಮಂದರ್‌ ಅವರನ್ನು ಬಲ್ಲೆ. ಮಧ್ಯಪ್ರದೇಶ ಕೇಡರ್‌ನ ಅಧಿಕಾರಿಯಾಗಿದ್ದ ಹರ್ಷ, ಪ್ರಾಮಾಣಿಕ ವ್ಯಕ್ತಿ’ ಎಂದು ಕಾಂಗ್ರೆಸ್‌ ಮುಖಂಡ ದಿಗ್ವಿಜಯ್ ಸಿಂಗ್‌ ಹೇಳಿದ್ದಾರೆ.

‘ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಡುವವರನ್ನು ಹಾಗೂ ಸಂಘಟನೆಗಳನ್ನು ತುಳಿಯುವುದಕ್ಕಾಗಿ ಇ.ಡಿ ಯಂತಹ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೋರಾಟಗಾರ ಹಾಗೂ ವಕೀಲ ಪ್ರಶಾಂತಭೂಷಣ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು