ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ನಲ್ಲಿ 37 ವರ್ಷಗಳ ಪಯಣವನ್ನು ಆನಂದಿಸಿರುವೆ

ಸುಪ್ರೀಂ ಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ಮಾತು
Last Updated 7 ನವೆಂಬರ್ 2022, 14:17 IST
ಅಕ್ಷರ ಗಾತ್ರ

ನವದೆಹಲಿ: ‘ವಕೀಲ ಹಾಗೂ ನ್ಯಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 37 ವರ್ಷ ಕೆಲಸ ಮಾಡಿದ್ದೇನೆ. ಈ ಸುದೀರ್ಘ ಪಯಣವನ್ನು ಮನಸಾರೆ ಆನಂದಿಸಿದ್ದೇನೆ’ ಎಂದು ಸುಪ್ರೀಂ ಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಉದಯ್‌ ಉಮೇಶ್‌ ಲಲಿತ್‌ (ಯು.ಯು.ಲಲಿತ್‌) ಹೇಳಿದ್ದಾರೆ.

ಲಲಿತ್‌ ಅವರು ಮಂಗಳವಾರ ನಿವೃತ್ತರಾಗಲಿದ್ದಾರೆ. ಹೀಗಾಗಿ ವಕೀಲರ ಸಂಘವು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ತಮ್ಮ ಪಯಣವನ್ನು ಮೆಲುಕು ಹಾಕಿದ್ದಾರೆ.

‘ಕೋರ್ಟ್‌ ಸಂಖ್ಯೆ 1ರ ಮೂಲಕ ಆರಂಭವಾಗಿದ್ದ ವೃತ್ತಿ ಬದುಕು ಈಗ ಇದೇ ನ್ಯಾಯಾಲಯದಲ್ಲಿ ಅಂತ್ಯಗೊಂಡಿದೆ. ಹಿರಿಯ ನ್ಯಾಯಮೂರ್ತಿಯಾಗಿರುವ ಡಿ.ವೈ.ಚಂದ್ರಚೂಡ್‌ ಅವರಿಗೆ ಅಧಿಕಾರ ಹಸ್ತಾಂತರ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಈ ನ್ಯಾಯಾಲಯಕ್ಕೆ ಅಡಿ ಇಟ್ಟಿದ್ದಾಗ ಚಂದ್ರಚೂಡ್‌ ಅವರ ತಂದೆ ಯಶವಂತ್‌ ವಿಷ್ಣು ಚಂದ್ರಚೂಡ್‌ (ವೈ.ವಿ.ಚಂದ್ರಚೂಡ್‌) ಅವರು ಮುಖ್ಯ ನ್ಯಾಯಮೂರ್ತಿಗಳಾಗಿದ್ದರು’ ಎಂದು ಸ್ಮರಿಸಿದ್ದಾರೆ.

ಹಲವು ಸಾಂವಿಧಾನಿಕ ಪೀಠಗಳನ್ನು ರಚಿಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಇದು ಅತ್ಯಂತ ಸ್ಮರಣೀಯ ಹಾಗೂ ತೃಪ್ತಿದಾಯಕ ಅನುಭವ’ ಎಂದಿದ್ದಾರೆ.

‘ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗುವವರು ಎಲ್ಲಾ ಅರ್ಹತೆಗಳನ್ನು ಹೊಂದಿರುತ್ತಾರೆ. ಸಾಂವಿಧಾನಿಕ ಪೀಠದ ಭಾಗವಾಗುವುದಕ್ಕೆ ಎಲ್ಲರಿಗೂ ಸಮಾನ ಅವಕಾಶ ಇರುತ್ತದೆ’ ಎಂದು ತಿಳಿಸಿದ್ದಾರೆ.

ನಿಯೋಜಿತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ‘ಲಲಿತ್‌ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಹಲವು ಸುಧಾರಣೆಗಳನ್ನು ಮಾಡಿದ್ದಾರೆ. ಅವರ ಕೆಲಸಗಳನ್ನು ನಾವು ಮುಂದುವರಿಸಿಕೊಂಡು ಹೋಗುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

‘ಲಲಿತ್‌ ಅವರನ್ನು ಬಹಳ ಕಾಲದಿಂದ ಬಲ್ಲೆ. ಕೇವಲ ಒಂದು ವಿಚಾರದಲ್ಲಿ ಮಾತ್ರ ನಾನು ಅವರ ನಿಲುವನ್ನು ವಿರೋಧಿಸಿದ್ದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT