ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಚುನಾವಣೆಯಲ್ಲಿ ಟಿಆರ್‌ಎಸ್, ಕೆಸಿಆರ್ ನಿರ್ನಾಮ ಖಚಿತ: ಜೆ.ಪಿ ನಡ್ಡಾ

Last Updated 23 ಆಗಸ್ಟ್ 2022, 9:49 IST
ಅಕ್ಷರ ಗಾತ್ರ

‌ನವದೆಹಲಿ: ತೆಲಂಗಾಣದಲ್ಲಿ ಟಿಆರ್‌ಎಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ಜನಗಾಂವ್​ನಲ್ಲಿ ಪಾದಯಾತ್ರೆ ನಡೆಸುತ್ತಿದ್ದ ತೆಲಂಗಾಣದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ‘ತೆಲಂಗಾಣದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಅವರನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸರ್ಕಾರ ಅಕ್ರಮವಾಗಿ ಬಂಧಿಸಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ’ ಎಂದಿದ್ದಾರೆ.

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಆರ್‌ಎಸ್ ಮತ್ತು ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಸೋಲು ಅನುಭವಿಸುವ ಮೂಲಕ ನಿರ್ನಾಮವಾಗಲಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ತೆಲಂಗಾಣದಲ್ಲಿ ಕೆಸಿಆರ್ ಅವರ ಭ್ರಷ್ಟಾಚಾರ ಮತ್ತು ಕುಟುಂಬ ಕೇಂದ್ರಿತ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬಿಜೆಪಿಗೆ ಸಿಗುತ್ತಿರುವ ಬೆಂಬಲ ಕಂಡು ಟಿಆರ್‌ಎಸ್ ಪಕ್ಷಕ್ಕೆ ಆತಂಕ ಮೂಡಿದೆ’ ಎಂದು ನಡ್ಡಾ ವಾಗ್ದಾಳಿ ನಡೆಸಿದ್ದಾರೆ.

ಧರ್ಮದ ವಿರುದ್ಧ ಹೇಳಿಕೆ: ತೆಲಂಗಾಣ ಬಿಜೆಪಿ ಶಾಸಕ ಬಂಧನ
ನಿರ್ದಿಷ್ಟ ಧರ್ಮವೊಂದರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ತೆಲಂಗಾಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್ ಮುನವ್ವರ್ ಫಾರೂಕಿ ನಡೆಸಿಕೊಟ್ಟಿದ್ದ ಕಾರ್ಯಕ್ರಮವೊಂದರ ಬಗ್ಗೆ ಟೀಕಿಸಿ ವಿಡಿಯೊ ತುಣುಕನ್ನು ರಾಜಾ ಸಿಂಗ್ ಸೋಮವಾರ ಬಿಡುಗಡೆ ಮಾಡಿದ್ದರು. ಅದರಲ್ಲಿ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ತೆಲಂಗಾಣದ ಐಟಿ ಮತ್ತು ಉದ್ಯಮ ಖಾತೆ ಸಚಿವ ಕೆ.ಟಿ. ರಾಮರಾವ್ ಅವರ ಆಹ್ವಾನದ ಮೇರೆಗೆ ಮುನವ್ವರ್ ಫಾರೂಕಿ ಹೈದರಾಬಾದ್‌ನಲ್ಲಿ ‘ಡೋಂಗ್ರಿ ಟು ನೋವೇರ್‘ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಬಿಗಿ ಭದ್ರತೆಯ ನಡುವೆ ಕಾರ್ಯಕ್ರಮ ನಡೆದಿತ್ತು. ಮುನವ್ವರ್ ಕಾರ್ಯಕ್ರಮ ನಡೆಸಿದರೆ, ಶೋ ನಡೆಯುವ ವೇದಿಕೆಗೆ ಬೆಂಕಿ ಹಚ್ಚುವುದಾಗಿಯೂ, ಫಾರೂಕ್ ಮೇಲೆ ಹಲ್ಲೆ ನಡೆಸುವುದಾಗಿಯೂ ರಾಜಾ ಸಿಂಗ್ ಬೆದರಿಕೆ ಒಡ್ಡಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT