ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸವಾಲು: ಸದನಗಳಿಗೆ ಹೊಸ ರೂಪ

Last Updated 17 ಆಗಸ್ಟ್ 2020, 4:45 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಪಿಡುಗಿನ ನಡುವೆಯೇ ಮುಂದಿನ ವಾರದಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದೆ. ನೂರಾರು ಸದಸ್ಯರು ಒಂದೆಡೆ ಸೇರುವ ಅಧಿವೇಶನದಲ್ಲಿ ಅಂತರ ಕಾಯ್ದುಕೊಳ್ಳುವುದೂ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಲು ಸಿದ್ಧತೆಗಳಲಾಗುತ್ತಿದೆ. ಸದಸ್ಯರಿಗೆ ಆಸನ ವ್ಯವಸ್ಥೆ ಕಲ್ಪಿಸಲು ಗ್ಯಾಲರಿಗಳನ್ನು ಬಳಸಿಕೊಳ್ಳುವುದೂ ಒಳಗೊಂಡಂತೆ ವಿವಿಧ ಕ್ರಮಗಳು ಸಂಸತ್ತಿನ ಇತಿಹಾಸದಲ್ಲಿ ತೀರಾ ಹೊಸವು.

ಎರಡೂ ಸದನಗಳ ಗ್ಯಾಲರಿಗಳನ್ನು ಅಧಿವೇಶನಕ್ಕಾಗಿ ಮಾರ್ಪಡಿಸಿ ಬಳಸಿಕೊಳ್ಳಲು ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಹಾಗೂ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸಮಾಲೋಚಿಸಿ ನಿರ್ಧರಿಸಿದ್ದರು. ಆಗಸ್ಟ್ ಕೊನೆಯ ವಾರದ ವೇಳೆಗೆ ಪರಿವರ್ತಿತ ಸದನದಲ್ಲಿ ಪರೀಕ್ಷೆ, ತಾಲೀಮು ಹಾಗೂ ಅಂತಿಮ ಪರಿಶೀಲನೆ ಕೆಲಸಗಳನ್ನು ಮುಗಿಸುವಂತೆ ನಾಯ್ಡು ಅಧಿಕಾರಿಗಳಿಗೆ ಸೂಚಿಸಿದ್ದರು.

ನಾಲ್ಕು ಗಂಟೆ ಕಲಾಪ?: ಸಾಮಾನ್ಯವಾಗಿ ಏಕಕಾಲಕ್ಕೆ ಸಮಾವೇಶಗೊಳ್ಳುತ್ತಿದ್ದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಈ ಬಾರಿ ಕಲಾಪಗಳು ಒಟ್ಟಿಗೆ ನಡೆಯುತ್ತಿಲ್ಲ. ಕೋವಿಡ್ ಸೃಷ್ಟಿಸಿರುವ ಅನಿವಾರ್ಯ ಪರಿಸ್ಥಿತಿಯಿಂದಾಗಿ ಬೆಳಗಿನ ಹೊತ್ತು ಒಂದು ಸದನ, ಮಧ್ಯಾಹ್ನದ ಬಳಿಕ ಮತ್ತೊಂದು ಸದನ ಸಮಾವೇಶಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ತಲಾ ನಾಲ್ಕು ಗಂಟೆಯ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಕೋವಿಡ್ ಪಿಡುಗಿನಿಂದಾಗಿ ಮಾರ್ಚ್‌ ತಿಂಗಳಿನಲ್ಲಿ ಬಜೆಟ್ ಅಧಿವೇಶನವನ್ನು ಮೊಟಕುಗೊಳಿಸಲಾಗಿತ್ತು.

ಗ್ಯಾಲರಿ ಬಳಕೆ: ಸದಸ್ಯರಿಗೆ ರಾಜ್ಯಸಭೆಯ ಚೇಂಬರ್ ಮತ್ತು ಗ್ಯಾಲರಿಗಳಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ರಾಜ್ಯಸಭೆ ಸಚಿವಾಲಯ ತಿಳಿಸಿದೆ. ಚೇಂಬರ್‌ನಲ್ಲಿ 60 ಸದಸ್ಯರು, ಗ್ಯಾಲರಿಯಲ್ಲಿ 51 ಸದಸ್ಯರು ಹಾಗೂ ಉಳಿದ 132 ಜನರಿಗೆ ಲೋಕಸಭೆಯ ಗ್ಯಾಲರಿಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. 1952ರಲ್ಲಿ ಆರಂಭಗೊಂಡ ರಾಜ್ಯಸಭೆಯಲ್ಲಿ ಇಂತಹ ವ್ಯವಸ್ಥೆಯನ್ನು ಕಲ್ಪಿಸಿರುವುದು ಇದೇ ಮೊದಲು. ಲೋಕಸಭಾ ಸದಸ್ಯರಿಗೂ ಇದೇ ರೀತಿಯ ವ್ಯವಸ್ಥೆ ರೂಪಿಸಲಾಗಿದೆ.

ತುರುಸಿನ ಸಿದ್ಧತೆ: ಪರಿವರ್ತಿತ ಗ್ಯಾಲರಿಗಳಲ್ಲಿ ಹೆಚ್ಚುವರಿ ಸಾಧನಗಳನ್ನು ಅಳವಡಿಸುವ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಚೇಂಬರ್‌ನಲ್ಲಿ 4 ಡಿಸ್‌ಪ್ಲೇ ಪರದೆ, ಗ್ಯಾಲರಿಯಲ್ಲಿ ಚಿಕ್ಕ ಅಳತೆಯ 6 ಪರದೆಗಳು, ಗ್ಯಾಲರಿಯಲ್ಲಿ ಆಡಿಯೊ ಸಾಧನಗಳನ್ನು ಅಳವಡಿಸಲಾಗುತ್ತಿದೆ. ಅಂತರ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಿ ಈ ಎಲ್ಲ ಸವಲತ್ತುಗಳನ್ನು ಕಲ್ಪಿಸಲಾಗಿದೆ. ಯಾವ ಯಾವ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನಿರ್ಧರಿಸಿದ ಬಳಿಕ ಅದಕ್ಕೆ ಸಂಬಂಧಪಟ್ಟ ಸಂಸ್ಥೆಗಳ ಜೊತೆ ಚರ್ಚೆ ನಡೆಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎರಡೂ ಸದನಗಳ ನಡುವೆ ವಿಡಿಯೊ–ಆಡಿಯೊ ಸಂವಹನ ಸಾಧ್ಯವಾಗುವಂತೆ ವಿಶೇಷ ಕೇಬಲ್ ಅಳವಡಿಸಲಾಗಿದೆ.

ಗಾಳಿಯಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ನುಸುಳದಂತೆ ತಡೆಯಲು ರಾಜ್ಯಸಭೆಯ ಹವಾನಿಯಂತ್ರಣ ವ್ಯವಸ್ಥೆಯಲ್ಲಿ (ಎ.ಸಿ) ನೇರಳಾತೀತ ಜೀವಾಣು ವಿಕಿರಣ ವ್ಯವಸ್ಥೆಯನ್ನು ಸಹ ಅಳವಡಿಸಲಾಗುತ್ತಿದೆ. ಎಂದಿನಂತೆ ರಾಜ್ಯಸಭೆ ಟಿ.ವಿ ಹಾಗೂ ಲೋಕಸಭೆ ಟಿ.ವಿಗಳು ಸದನದ ಕಲಾಪವನ್ನು ನೇರ ಪ್ರಸಾರ ಮಾಡಲಿವೆ.

ಆಸನ ವ್ಯವಸ್ಥೆ: ಆಯಾ ಪಕ್ಷಗಳ ಸಂಖ್ಯಾಬಲದ ಆಧಾರದ ಮೇಲೆ ರಾಜ್ಯಸಭೆಯ ಚೇಂಬರ್ ಮತ್ತು ಗ್ಯಾಲರಿಗಳಲ್ಲಿ ವಿವಿಧ ಪಕ್ಷಗಳಿಗೆ ಸೀಟು ಹಂಚಿಕೆ ಮಾಡಲಾಗಿದೆ. ಉಳಿದವರನ್ನು ಆಡಳಿತ ಪಕ್ಷ ಮತ್ತು ಇತರರಿಗೆ ಮೀಸಲಾಗಿರುವ ಲೋಕಸಭೆ ಚೇಂಬರ್‌ನ ಎರಡು ಬ್ಲಾಕ್‌ಗಳಲ್ಲಿ ಕೂರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಧಾನಿ, ಸದನ ನಾಯಕ, ಪ್ರತಿಪಕ್ಷ ನಾಯಕ ಹಾಗೂ ವಿವಿಧ ಪಕ್ಷಗಳ ನಾಯಕರಿಗೆ ರಾಜ್ಯಸಭೆಯ ಚೇಂಬರ್‌ನಲ್ಲಿ ಸೀಟು ನೀಡಲಾಗುತ್ತಿದೆ. ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಎಚ್‌.ಡಿ. ದೇವೇಗೌಡ ಅವರಿಗೆ ಆಸನ ಮೀಸಲಿರಿಸಲಾಗಿದೆ. ರಾಜ್ಯಸಭೆಯ ಪ್ರತಿಯೊಂದು ಗ್ಯಾಲರಿಯಲ್ಲಿ ಯಾವ ಪಕ್ಷದ ಯಾವ ಸದಸ್ಯರಿಗೆ ಆಸನ ಮೀಸಲಾಗಿದೆ ಎಂದು ಭಿತ್ತಪತ್ರದ ಮೂಲಕ ಸೂಚಿಸಲಾಗಿದೆ.

ಏನು ಹೊಸತು?

* ಗ್ಯಾಲರಿಯಲ್ಲಿ ಕುಳಿತುಕೊಳ್ಳುವ ಸದಸ್ಯರಿಗಾಗಿ ‌ದೊಡ್ಡ ಪರದೆ

* ಎರಡೂ ಸದನಗಳ ನಡುವೆ ವಿಶೇಷ ಕೇಬಲ್ ಅಳವಡಿಕೆ

* ಎ.ಸಿಗಳಲ್ಲಿ ನೇರಳಾತೀತ ಜೀವಾಣು ವಿಕಿರಣ ವ್ಯವಸ್ಥೆ

* ಪಾಲಿಕಾರ್ಬೊನೇಟ್ ಶೀಟ್ ಅಳವಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT