ಕೃಷಿ ಕಾಯ್ದೆ ರದ್ದು: ಘೋಷಣೆ ಜಾರಿಗೆ ಬರುವವರೆಗೂ ಪ್ರತಿಭಟನೆ- ರೈತರ ಪಟ್ಟು

ನವದೆಹಲಿ: ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಪ್ರಧಾನಿ ನರೇಂದ್ರ ಮೋದಿ ನಿರ್ಧಾರವನ್ನು ರೈತ ಸಂಘಟನೆಗಳು ಸ್ವಾಗತಿಸಿವೆ. ಆದರೆ, ಸಂಸತ್ತಿನ ಕಾರ್ಯವಿಧಾನಗಳ ಮೂಲಕ ಘೋಷಣೆ ಜಾರಿಗೆ ಬರುವವರೆಗೆ ದೆಹಲಿಯ ವಿವಿಧ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿವೆ.
ಪೂರ್ವ ನಿಗದಿಯಾಗಿರುವ ಪ್ರತಿಭಟನೆಗಳನ್ನು ಮುಂದುವರಿಸುವುದಾಗಿ ರೈತ ಸಂಘಟನೆಗಳ ಒಕ್ಕೂಟ ‘ಸಂಯುಕ್ತ ಕಿಸಾನ್ ಮೋರ್ಚಾ’ ಶನಿವಾರ ತಿಳಿಸಿದೆ.
ಸಂಸತ್ ಚಳಿಗಾಲದ ಅಧಿವೇಶನದ ವೇಳೆ ಪ್ರತಿನಿತ್ಯ ಸಂಸತ್ ಭವನದವರೆಗೆ ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಜಾಥಾ ಹಾಗೂ ಲಖನೌನಲ್ಲಿ ಆಯೋಜಿಸಲಾಗಿರುವ ರೈತ ಮಹಾಪಂಚಾಯತ್ ಕಾರ್ಯಕ್ರಮಗಳು ನಿಗದಿಯಂತೆ ನಡೆಯಲಿವೆ. ನವೆಂಬರ್ 26ಕ್ಕೆ ರೈತರ ಪ್ರತಿಭಟನೆಗೆ ಒಂದು ವರ್ಷ ಸಲ್ಲುತ್ತಿರುವ ಹಿನ್ನೆಲೆಯಲ್ಲಿ, ನಿತ್ಯ 500 ಟ್ರ್ಯಾಕ್ಟರ್ಗಳ ಮೂಲಕ ಸಂಸತ್ ಭವನಕ್ಕೆ ಜಾಥಾ ನಡೆಸುವುದಾಗಿ ಇದೇ ತಿಂಗಳ ಆರಂಭದಲ್ಲಿ ರೈತ ಸಂಘಟನೆಗಳು ಘೋಷಿಸಿದ್ದವು.
ನವೆಂಬರ್ 29ರಿಂದ ಅಧಿವೇಶನ ಆರಂಭವಾಗಲಿದೆ.
ನ. 22ರಂದು ಲಖನೌದಲ್ಲಿ ಆಯೋಜಿಸಿರುವ ರೈತ ಮಹಾಪಂಚಾಯತ್ಗೆ ಭಾರಿ ಸಂಖ್ಯೆಯಲ್ಲಿ ರೈತರು ಸೇರುವಂತೆ ಸಂಘಟನೆಯ ಕೋರ್ಕಮಿಟಿ ಸದಸ್ಯ ದರ್ಶನ್ಪಾಲ್ ಸಿಂಗ್ ಕರೆ ನೀಡಿದ್ದಾರೆ. ಸಂಘಟನೆಯ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಭಾನುವಾರ ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.
ರೈತರು ಬೆಳೆದ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನೀಡಲು ಕಾನೂನಿನ ಖಾತರಿ ಬೇಕು ಎಂದಿರುವ ಪಾಲ್, ವಿದ್ಯುತ್ ತಿದ್ದುಪಡಿ ಮಸೂದೆಯನ್ನೂ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ವಾಯು ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದ ದಂಡದ ಷರತ್ತಿನ ವ್ಯಾಪ್ತಿಯಿಂದ ರೈತರನ್ನು ಹೊರಗಿಡಬೇಕು ಎಂಬ ಬೇಡಿಕೆ ಹಾಗೆಯೇ ಉಳಿದಿದೆ. ಈ ಎಲ್ಲಾ ವಿಚಾರದಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಬೇಷರತ್ತಾಗಿ ವಾಪಸ್ ಪಡೆಯಬೇಕು ಎಂದು ದರ್ಶನ್ಪಾಲ್ ಒತ್ತಾಯಿಸಿದ್ದಾರೆ. ಟ್ರ್ಯಾಕ್ಟರ್ ಜಾಥಾ ಹಾಗೂ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಸಿಂಘು ಗಡಿಯಲ್ಲಿ ಭಾನುವಾರ ನಡೆಯಲಿರುವ ಕೋರ್ಕಮಿಟಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅಜಯ್ ಮಿಶ್ರಾ ವಿರುದ್ಧ ಕ್ರಮಕ್ಕೆ ಆಗ್ರಹ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರವನ್ನು ಈ ಮೊದಲೇ ಪ್ರಕಟಿಸಿದ್ದರೆ, ನೂರಾರು ಅಮಾಯಕ ಜೀವಗಳು ಉಳಿಯುತ್ತಿದ್ದವು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಲಖಿಂಪುರ– ಖೇರಿಯಲ್ಲಿ ನಡೆದ ಹಿಂಸಾಚಾರ– ರೈತರ ಸಾವು ಪ್ರಕರಣದ ತನಿಖೆಯು ನ್ಯಾಯಯುತವಾಗಿ ನಡೆಯಲು, ಕೇಂದ್ರ ಸಚಿವ ಅಜಯ್ಮಿಶ್ರಾ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೃತಪಟ್ಟ ರೈತರ ಕುಟುಂಬದವರಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಪ್ರತಿಭಟನನಿರತ ರೈತರ ವಿರುದ್ಧ ಹೂಡಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
‘ಈ ಆಂದೋಲನದಲ್ಲಿ ಸುಮಾರು 700 ರೈತರು ಸಾವಿಗೀಡಾಗಿದ್ದಾರೆ. ಮೋದಿ ಅವರು ಕಾಯ್ದೆ ರದ್ದುಗೊಳಿಸುವ ನಿರ್ಧಾರವನ್ನು ಮುಂಚೆಯೇ ಕೈಗೊಂಡಿದ್ದರೆ ಈ ಅಮಾಯಕ ಜೀವಗಳು ಉಳಿಯುತ್ತಿದ್ದವು’ ಎಂದು ಪತ್ರದಲ್ಲಿ ಹೇಳಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತ್ರಿಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ರೈತರ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಪ್ರಧಾನಿಗೆ ಮನವಿ ಮಾಡಿರುವುದಾಗಿ ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.