ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸುದೀರ್ಘ ಪ್ರತಿಭಟನೆ ಅಂತ್ಯ: ಡಿ.11ರಂದು ಮನೆಗೆ ಮರಳಲು ಎಸ್‌ಕೆಎಂ ನಿರ್ಧಾರ

Last Updated 9 ಡಿಸೆಂಬರ್ 2021, 10:15 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಲ್ಲಿ ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘಟನೆಗಳು ತಮ್ಮ ಊರುಗಳಿಗೆ ಹಿಂದಿರುಗಲು ನಿರ್ಧರಿಸಿವೆ. ಕೇಂದ್ರದ ಭರವಸೆಯ ಹೊಸ ಪ್ರಸ್ತಾಪಗಳನ್ನು ರೈತ ಮುಖಂಡರು ಒಪ್ಪಿದ್ದಾರೆ.

ಶನಿವಾರ (ಡಿ.11) ಪ್ರತಿಭಟನಾ ಸ್ಥಳದಿಂದ ಹೊರಡುವುದಾಗಿ ರೈತ ಮುಖಂಡ ದರ್ಶನ್‌ ಪಾಲ್‌ ಸಿಂಗ್‌ ತಿಳಿಸಿದರು.

ಪ್ರತಿಭಟನೆ ಹಿಂಪಡೆಯುವ ಕುರಿತು ದೆಹಲಿಯಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಸಭೆ ನಡೆಸಿದೆ. ಸಭೆಯ ಬಳಿಕ ಮಾತನಾಡಿದ ರೈತ ಮುಖಂಡ ಗುರ್ನಾಮ್‌ ಸಿಂಗ್‌ ಚರೌನಿ, 'ಪ್ರತಿಭಟನೆಯನ್ನು ನಿಲ್ಲಿಸಲು ನಾವು ನಿರ್ಧರಿಸಿದ್ದೇವೆ. ಜನವರಿ 15ರಂದು ಪರಿಶೀಲನಾ ಸಭೆ ನಡೆಸಲಿದ್ದೇವೆ. ಸರ್ಕಾರ ನೀಡಿರುವ ಭರವಸೆಗಳನ್ನು ಪೂರೈಸದಿದ್ದರೆ, ನಾವು ಮತ್ತೆ ಪ್ರತಿಭಟನೆ ಆರಂಭಿಸುತ್ತೇವೆ' ಎಂದರು.

ದೆಹಲಿ–ಹರಿಯಾಣದ ಸಿಂಘು ಗಡಿಯಲ್ಲಿ ರೈತರು ಟೆಂಟ್‌ಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 'ನಾವು ನಮ್ಮ ಮನೆಗಳಿಗೆ ತೆರಳಲು ಸಜ್ಜಾಗುತ್ತಿದ್ದೇವೆ, ಆದರೆ ಅಂತಿಮ ನಿರ್ಧಾರವನ್ನು ಸಂಯುಕ್ತ ಕಿಸಾನ್‌ ಮೋರ್ಚಾ ಕೈಗೊಳ್ಳಲಿದೆ' ಎಂದು ರೈತರೊಬ್ಬರು ಪ್ರತಿಕ್ರಿಯಿಸಿದರು.

ರೈತರ ಮೇಲೆ ದಾಖಲಿಸಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದು ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಗೆ ಸಂಬಂಧಿಸಿದಂತೆ ಸಮಿತಿ ರಚಿಸುವುದಾಗಿ ಕೇಂದ್ರ ಸರ್ಕಾರವು ರೈತರಿಗೆ ಪತ್ರ ಮುಖೇನ ಭರವಸೆ ನೀಡಿದೆ.

ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕುರಿತು ರೈತರು ಮತ್ತು ಕೇಂದ್ರದ ನಡುವೆ ವರ್ಷದ ವರೆಗೂ ನಡೆದ ಹಗ್ಗ–ಜಗ್ಗಾಟ ಈಗ ಕೊನೆಯಾಗುತ್ತಿದೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕೃಷಿ ಕಾಯ್ದೆಗಳನ್ನು ರದ್ದು ಪಡಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗಳನ್ನು ಹಿಂಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT