ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಹಳ್ಳಿಗಳಲ್ಲಿ ರೈತರ ಮನವೊಲಿಕೆ ಮುಂದಾದ ಬಿಜೆಪಿ

ಬಿಜೆಪಿ ಸಂಸದ ಹನ್ಸ್‌ರಾಜ್ ಸಂಚಾರ; ಉತ್ತರ ಪ್ರದೇಶದಲ್ಲಿ ಕಿಸಾನ್ ಸಂವಾದಕ್ಕೆ ಸಿದ್ಧತೆ; 25ನೇ ದಿನಕ್ಕೆ ಪ್ರತಿಭಟನೆ
Last Updated 20 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಮಾರುಕಟ್ಟೆ ಕಾಯ್ದೆಗಳಿಂದ ರೈತರಿಗೆ ಆಗುವ ಲಾಭಗಳನ್ನು ಜನರಿಗೆ ಮನದಟ್ಟು ಮಾಡಲು ಬಿಜೆಪಿ ಮುಂದಾಗಿದೆ.

ಬಿಜೆಪಿ ಸಂಸದ ಹಾಗೂ ಸೂಫಿ ಗಾಯಕ ಹನ್ಸ್‌ರಾಜ್ ಹನ್ಸ್‌ ಅವರು ವಾಯವ್ಯ ದೆಹಲಿಯ ಹರಿಯಾಣ ಗಡಿ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ಭೇಟಿ ಮಾಡುತ್ತಿದ್ದಾರೆ.

ದಕ್ಷಿಣ ದೆಹಲಿ ಸಂಸದ ರಮೇಶ್ ಬಿಧೂರಿ ಅವರ ಒಡಗೂಡಿ ಭಾನುವಾರ ‘ಕಿಸಾನ್ ಕಾನೂನ್ ಕಲ್ಯಾಣ್ಸಮರ್ಥನ್ ಯಾತ್ರಾ’ದಲ್ಲಿ 9 ಕಿಲೋಮೀಟರ್ ಸಂಚಾರ ನಡೆಸಿದರು.

ತಮ್ಮ ಮತಕ್ಷೇತ್ರ ವ್ಯಾಪ್ತಿಯ ಜೈತ್‌ಪುರ, ಬಂಡಾರ್‌ಪುರ್, ಮೀತಾ ಪುರ್, ಮೊಲಾರ್‌ಬಂದ್‌ ಮೊದಲಾದ ಹಳ್ಳಿಗಳಲ್ಲಿ ಯಾತ್ರೆ ಸಾಗಿತು.

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರಿಗೆ ಬರೆದಿರುವ ಪತ್ರವನ್ನು ಕರಪತ್ರದ ರೂಪದಲ್ಲಿ ಹಳ್ಳಿಗಳಲ್ಲಿ ಹಂಚಲಾಯಿತು. ‘ಹೊಸ ಕಾನೂನುಗಳು ಎಷ್ಟುಪ್ರಯೋಜನಗಳನ್ನು ಹೊಂದಿವೆ ಎಂಬುದು ಈ ಕರಪತ್ರಗಳನ್ನುಓದಿದ ಬಳಿಕ ರೈತರಿಗೆ ತಿಳಿಯಲಿದೆ. ಈಗಿರುವ ಪ್ರತಿಭಟನೆಯ ವಾತಾವರಣ ಸಕಾರಾ ತ್ಮಕವಾಗಿ ಬದಲಾಗಲಿದೆ. ರೈತರ ಪ್ರತಿ ಭಟನೆಯ ಲಾಭ ಪಡೆಯಲು ಕೆಲವರು ಯತ್ನಿಸುತ್ತಿದ್ದಾರೆ’ ಎಂದು ಹನ್ಸ್‌ರಾಜ್‌ ಹೇಳಿದ್ದಾರೆ.

ಸಚಿವ ತೋಮರ್ ಅವರು ರೈತರಿಗೆ 8 ಪುಟಗಳ ಪತ್ರ ಬರೆದು, ಎಲ್ಲ ಬೇಡಿಕೆಗಳನ್ನೂ ಪರಿಗಣಿಸುವ ಭರವಸೆ ನೀಡಿದ್ದರು. ಹನ್ಸ್‌ರಾಜ್ ಅವರು ತಮ್ಮ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಲು ನಿರ್ಧರಿಸಿದ್ದಾರೆ. ಪಕ್ಷದ ವಾರ್ಡ್ ಘಟಕಗಳು ಕರಪತ್ರ
ಗಳನ್ನು ಜನರಿಗೆ ಮುಟ್ಟಿಸಲಿವೆ.

ಪ್ರಧಾನಿ ಸಂವಾದ: ಡಿಸೆಂಬರ್ 25ರಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಅಂಗವಾಗಿ ರೈತರ ಜೊತೆ ಪ್ರಧಾನಿ ನರೇಂದ್ರಮೋದಿ ಅವರು ಸಂವಾದ ನಡೆಸಲಿದ್ದಾರೆ. ಅಲ್ಲದೆ, ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಲು ಉತ್ತರ ಪ್ರದೇಶದ 2,500 ಸ್ಥಳಗಳಲ್ಲಿ ಕಿಸಾನ್ ಸಂವಾದ ಏರ್ಪಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಈ ಸಂಬಂಧ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ವತಂತ್ರದೇವ್ ಸಿಂಗ್ ಹಾಗೂ ಪಕ್ಷದ ನಾಯಕ ರಾಧಾಮೋಹನ್ಸಿಂಗ್ ಅವರು ಪಕ್ಷದ ರಾಜ್ಯ ಮುಖಂಡರ ಜೊತೆ ವರ್ಚ್ಯುವಲ್ ಸಭೆ ನಡೆಸಿದ್ದಾರೆ.

25ನೇ ದಿನಕ್ಕೆ ಪ್ರತಿಭಟನೆ: ದೆಹಲಿ ಯಲ್ಲಿ ರೈತರ ಪ್ರತಿಭಟನೆ 25ನೇ ದಿನಕ್ಕೆ ಕಾಲಿರಿಸಿದ್ದು, ಕೊರೆಯುವ ಚಳಿಯಲ್ಲೂ ಮುಂದುವರಿದಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ದೆಹಲಿಯಲ್ಲಿ ಭಾನುವಾರ 3.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಈ ಋತುವಿನ ಅತಿಕಡಿಮೆ ಉಷ್ಣಾಂಶವಾಗಿದೆ. ಭಾನುವಾರ ಶೀತಗಾಳಿ ಬೀಸಿದೆ ಎಂದು ಇಲಾಖೆ ತಿಳಿಸಿದೆ.

ದೆಹಲಿ ಗಡಿಯಲ್ಲಿ ಪ್ರತಿಭಟನಾ ನಿರತ ರೈತರಿಗಾಗಿ ವೈದ್ಯರು ಉಚಿತ ನೇತ್ರತಪಾಸಣೆ ಶಿಬಿರ ಆಯೋಜಿಸಿದ್ದಾರೆ. ಪಂಜಾಬ್‌ನ ಗರಶಂಕರ್‌ನಿಂದ ವೈದ್ಯರ ತಂಡ ನಾಲ್ಕನೇ ಬಾರಿ ಇಲ್ಲಿಗೆ ಭೇಟಿ ನೀಡಿದೆ.

ಉಪವಾಸ ಸತ್ಯಾಗ್ರಹ ಇಂದು
‘ಪ್ರತಿಭಟನೆ ನಡೆಯುತ್ತಿರುವ ಎಲ್ಲಾ ಕೆಂದ್ರಗಳಲ್ಲೂ ರೈತರು ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದ್ದಾರೆ’ ಎಂದು ಸ್ವರಾಜ್‌ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಯೋಗೇಂದ್ರ ಯಾದವ್‌ ತಿಳಿಸಿದ್ದಾರೆ.

ದೇಶದ ಇತರ ಭಾಗಗಳಲ್ಲಿರುವ ರೈತರೂ ಒಂದು ದಿನ ಉಪವಾಸ ನಡೆಸುವ ಮೂಲಕ ಪ್ರತಿಭಟನಾನಿರತರನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಡಿ.25ರಿಂದ 27ರವರೆಗೆ ರೈತರು ಹರಿಯಾಣದ ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹವನ್ನು ತಡೆಯಲಿದ್ದಾರೆ ಎಂದು ರೈತ ಮುಖಂಡ ಜಗಜೀತ್‌ ಸಿಂಗ್‌ ದಲೆವಾಲಾ ತಿಳಿಸಿದರು.

ಶೀಘ್ರ ಮಾತುಕತೆ: ಅಮಿತ್ ಶಾ
ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಅವರು ಎರಡು ದಿನದೊಳಗೆ ರೈತ ಪ್ರತಿನಿಧಿಗಳನ್ನು ಭೇಟಿಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಗೃಹಸಚಿವ ಅಮಿತ್‌ ಶಾ ಹೇಳಿದ್ದಾರೆ.

‘ಯಾವ ಸಮಯದಲ್ಲಿ ಭೇಟಿಯಾಗುತ್ತಾರೆ ಎಂಬುದು ನಿಖರವಾಗಿ ನನಗೆ ತಿಳಿದಿಲ್ಲ. ಆದರೆ, ಸಚಿವರು ನಾಳೆ ಅಥವಾ ನಾಡಿದ್ದು ರೈತ ಪ್ರತಿನಿಧಿಗಳನ್ನು ಭೇಟಿಮಾಡಲಿದ್ದಾರೆ’ ಎಂದು ಶಾ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಕಾಯ್ದೆ ತಿದ್ದುಪಡಿಗೆ ಸಿದ್ಧ, ರದ್ದುಪಡಿಸುವುದಿಲ್ಲ’
ಬೆಂಗಳೂರು: ಇತ್ತೀಚೆಗೆ ಜಾರಿಗೊಳಿಸಿರುವ ಕೃಷಿ ಸಂಬಂಧಿ ಕಾಯ್ದೆಗಳ ತಿದ್ದುಪಡಿಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ಈ ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ಬೇಡಿಕೆಯನ್ನು ಒಪ್ಪುವುದಿಲ್ಲ ಎಂದು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್‌ ಅಠಾವಳೆ ಹೇಳಿದರು.

ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಸಂಬಂಧಿ ಕಾಯ್ದೆಗಳ ಬದಲಾವಣೆಯಿಂದ ರೈತರಿಗೆ ಅನುಕೂಲವಾಗಲಿದೆ. ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳ ತಿದ್ದುಪಡಿಯಿಂದ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದರು.

ರೈತರ ಜತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಚರ್ಚೆಯ ಬಳಿಕ ಕಾಯ್ದೆಗಳ ತಿದ್ದುಪಡಿ ಕುರಿತು ನಿರ್ಧಾರಕ್ಕೆ ಬರಲಾಗುವುದು. ಆದರೆ, ಈಗಾಗಲೇ ರೈತರ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ ಎಂದು ಟೀಕಿಸಿದರು.

**

ರೈತರ ಪ್ರತಿಭಟನೆಯ ಬಗ್ಗೆ ಯಾವುದೇ ಚರ್ಚೆ ನಡೆಯದಂತೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದು ಪಡಿಸಲಾಗಿದೆ. ವಿಸ್ತಾ ಪ್ರಾಜೆಕ್ಟ್‌ಗೆ ಸಾವಿರ ಕೋಟಿ ಸುರಿಯುವ ಔಚಿತ್ಯವೇನು?
-ಸಂಜಯ್ ರಾವುತ್, ಶಿವಸೇನಾ ಸಂಸದ

**

ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ರಾಜಕೀಯ ಬೆರೆತಿದೆ. ನಿಜವಾದ ರೈತರಿಗೆ ಕಳೆದ ಆರು ತಿಂಗಳಲ್ಲಿ ಆಗಿರುವ ಕೆಲಸಗಳ ಬಗ್ಗೆ ತೃಪ್ತಿಯಿದೆ.
-ವಿ.ಕೆ. ಸಿಂಗ್, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT