ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್ಟರ್‌ ಜಾಥಾ ತಡೆ ಕೋರಿರುವ ಅರ್ಜಿ ವಜಾಗೊಳಿಸಿ: ‘ಸುಪ್ರೀಂ’ಗೆ ರೈತ ಸಂಘಟನೆ

Last Updated 16 ಜನವರಿ 2021, 19:32 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಸೃಷ್ಟಿಯಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ರಚಿಸಿರುವ ಸಮಿತಿಯಲ್ಲಿ ಉಳಿದಿರುವ ಮೂವರು ಸದಸ್ಯರನ್ನು ತೆಗೆದುಹಾಕಬೇಕು ಎಂದು ಭಾರತೀಯ ಕಿಸಾನ್‌ ಯೂನಿಯನ್‌ (ಲೋಕಶಕ್ತಿ), ಸುಪ್ರೀಂ ಕೋರ್ಟ್‌ಗೆ ಶನಿವಾರ ಮನವಿ ಮಾಡಿದೆ.

ಸಮಿತಿಗೆ ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಎಲ್ಲ ನಾಲ್ವರು ಸದಸ್ಯರು, ಕೇಂದ್ರವು ಜಾರಿಗೆ ತಂದ ಕೃಷಿ ಕಾಯ್ದೆಗಳ ಬೆಂಬಲಿಗರು. ಅಂಥವರನ್ನು ಸಮಿತಿಗೆ ನೇಮಕ ಮಾಡುವ ಮೂಲಕ ಸಹಜ ನ್ಯಾಯದ ತತ್ವವನ್ನೇ ಉಲ್ಲಂಘಿಸಲಾಗಿದೆ ಎಂದು ರೈತ ಸಂಘಟನೆಯು ಹೇಳಿದೆ.

ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯ ವಿವಿಧ ಗಡಿಗಳಲ್ಲಿ 50 ದಿನಗಳಿಂದ ಭಾರತೀಯ ಕಿಸಾನ್ ಯೂನಿಯನ್ (ಲೋಕಶಕ್ತಿ) ಸೇರಿದಂತೆ 40ಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಕೃಷಿ ಕಾನೂನುಗಳ ಅನುಷ್ಠಾನವನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲು ಮಧ್ಯಂತರ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ಕುಂದುಕೊರತೆಗಳನ್ನು ಆಲಿಸಲು ಮತ್ತು ಬಿಕ್ಕಟ್ಟನ್ನು ಪರಿಹರಿಸಲು ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿತ್ತು.

ಈ ಸಮಿತಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್, ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ದಕ್ಷಿಣ ಏಷ್ಯಾದ ನಿರ್ದೇಶಕ ಡಾ. ಪ್ರಮೋದ್‌ ಕುಮಾರ್ ಜೋಶಿ, ಕೃಷಿ ಅರ್ಥಶಾಸ್ತ್ರಜ್ಞ, ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಮಾಜಿ ಅಧ್ಯಕ್ಷ ಅಶೋಕ್ ಗುಲಾಟಿ ಹಾಗೂ ಶೇತ್ಕಾರಿ ಸಂಘಟನೆಯ ಅಧ್ಯಕ್ಷ ಅನಿಲ್ ಘನವತ್‌ ಇದ್ದಾರೆ.‌ ಮಾನ್‌ ಅವರು ಸಮಿತಿಯಿಂದ ಈಗಾಗಲೇ ಹೊರ ನಡೆದಿದ್ದಾರೆ.

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್‌ ಜಾಥಾ ಅಥವಾ ಇನ್ನಾವುದೇ ರೀತಿಯ ಪ್ರತಿಭಟನೆ ನಡೆಸದಂತೆ ಆದೇಶ ನೀಡಬೇಕು ಎಂದು ಕೋರಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಜಾಗೊಳಿಸುವಂತೆಯೂ ಲೋಕಶಕ್ತಿ ಸಂಘಟನೆಯು ಸುಪ್ರೀಂ ಕೋರ್ಟ್‌ ಅನ್ನು ಕೋರಿದೆ.

ಉದ್ದೇಶಿತ ಟ್ರ್ಯಾಕ್ಟರ್ ಮೆರವಣಿಗೆಯ ರ‍್ಯಾಲಿಯ ವಿರುದ್ಧ ಕೇಂದ್ರ ಸಲ್ಲಿಸಿರುವ ಅರ್ಜಿಯನ್ನುಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬಡೆ ನೇತೃತ್ವದ ನ್ಯಾಯಪೀಠವು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿದೆ.

ಕೇರಳದ 400 ರೈತರು ಪ್ರತಿಭಟನೆಯಲ್ಲಿ ಭಾಗಿ

(ಜೈಪುರ ವರದಿ): ರಾಜಸ್ಥಾನ–ಹರಿಯಾಣ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೇರಳದಿಂದ ಬಂದಿದ್ದ ಸುಮಾರು 400 ರೈತರು ಭಾಗಿಯಾಗಿದ್ದರು.

ಶಾಜಹಾನ್‌ಪುರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಮ್ಮಿಕೊಂಡಿರುವ ಧರಣಿಯಲ್ಲಿ ಕೇರಳ ರೈತರ ಗುಂಪು ಭಾಗಿಯಾಗಿದೆ ಎಂದು ಸಿಪಿಎಂ ಶಾಸಕ ಅಮರ ರಾಮ್ ಹೇಳಿದ್ದಾರೆ.

ಹೆದ್ದಾರಿಯ 3 ಕಿ.ಮೀ ವಿಸ್ತಾರದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತೀವ್ರ ಚಳಿಯಲ್ಲಿ ರೈತರು ಧರಣಿ ಕುಳಿತಿದ್ದರೂ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.

ನಾಗ್ಪುರದಲ್ಲಿ ಟ್ರ್ಯಾಕ್ಟರ್ ರ‍್ಯಾಲಿ

ಕೃಷಿ ಕಾಯ್ದೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಸಾವಿರಾರು ಕಾರ್ಯಕರ್ತರು ಹಾಗೂ ರೈತರು ಮಹಾರಾಷ್ಟ್ರದ ನಾಗ್ಪುರದಲ್ಲಿ ಶನಿವಾರ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರು.

ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ಬಾಳಾಸಾಹೇಬ್ ಥೋರಟ್, ಸಚಿವರಾದ ಸುನಿಲ್ ಕೇದಾರ್, ವಿಜಯ ವಡ್ಡೆಟ್ಟಿವರ್, ನಿತಿನ್ ರಾವುತ್, ಭಾಯಿ ಜಗದೀಪ್ ಹಾಗೂ ಪಕ್ಷದ ಹಲವರು ರ‍್ಯಾಲಿಯಲ್ಲಿ ಭಾಗಿಯಾಗಿದ್ದರು.

ಮುಂಬೈನಲ್ಲಿ ರ‍್ಯಾಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ನಾಗ್ಪುರಕ್ಕೆ ಸ್ಥಳಾಂತರಿಸಲಾಯಿತು. ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಅವರ ನಾಗ್ಪುರ ಭೇಟಿಯ ಕಾರಣದಿಂದ ರ‍್ಯಾಲಿ ಸ್ಥಳ ಬದಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT