ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100ನೇ ದಿನಕ್ಕೆ ರೈತರ ಪ್ರತಿಭಟನೆ; ನಾಳೆ ದೆಹಲಿಯಲ್ಲಿ ರಸ್ತೆ ತಡೆಗೆ ನಿರ್ಧಾರ

Last Updated 5 ಮಾರ್ಚ್ 2021, 18:48 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ರೈತರು ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಯು ಶನಿವಾರ 100ನೇ ದಿನಕ್ಕೆ ಕಾಲಿಡಲಿದೆ. ‘ಈ ದಿನವನ್ನು ಪ್ರತಿಭಟನೆನಿರತ ರೈತರು ಕರಾಳ ದಿನವನ್ನಾಗಿ ಆಚರಿಸಲಿದ್ದಾರೆ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಕಿಸಾನ್ ಏಕತಾ ಮೋರ್ಚಾ ಹೇಳಿದೆ.

ಪಂಜಾಬ್, ಹರಿಯಾಣದ ರೈತರು 2020ರ ನವೆಂಬರ್ 24ರಂದು ದೆಹಲಿ ಚಲೋ ಆರಂಭಿಸಿದ್ದರು. ಎರಡೂ ರಾಜ್ಯಗಳ ರೈತರು ಪೊಲೀಸರೊಂದಿಗೆ ಭಾರಿ ಸಂಘರ್ಷ ನಡೆಸಿ, ನವೆಂಬರ್ 26ರಂದು ದೆಹಲಿ ಗಡಿ ತಲುಪಿದ್ದರು. ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ರೈತರನ್ನು ದೆಹಲಿ ಪೊಲೀಸರು ತಡೆದು ನಿಲ್ಲಿಸಿದ್ದರು. ಹೀಗಾಗಿ ರೈತರು ಅಲ್ಲಿಯೇ ಪ್ರತಿಭಟನೆ ಆರಂಭಿಸಿದ್ದರು. ಉತ್ತರಪ್ರದೇಶದಿಂದ ಬಂದಿದ್ದ ರೈತರನ್ನು ಗಾಜಿಪುರ ಗಡಿಯಲ್ಲಿ ತಡೆದು ನಿಲ್ಲಿಸಿದ ಕಾರಣ, ಅಲ್ಲಿಯೇ ಶಿಬಿರ ಹೂಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯು ಈಗ 99 ದಿನಗಳನ್ನು ಪೂರೈಸಿ, ನೂರನೇ ದಿನಕ್ಕೆ ಕಾಲಿರಿಸಿದೆ.

ರೈತರ ಜತೆ ಕೇಂದ್ರ ಸರ್ಕಾರವು ಈವರೆಗೆ 11 ಸುತ್ತಿನ ಮಾತುಕತೆ ನಡೆಸಿದೆ. ಕಾಯ್ದೆಗಳಲ್ಲಿ ಬದಲಾವಣೆಗಳನ್ನು ತರುವುದಾಗಿ ಹೇಳಿದೆ. ಆದರೆ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ಪಟ್ಟನ್ನು ರೈತರು ಸಡಿಲಿಸದ ಕಾರಣ, ಪ್ರತಿಭಟನೆ ಮುಂದುವರಿದಿದೆ.

‘ಕಾಯ್ದೆಗಳನ್ನು ರದ್ದುಪಡಿಸುವವರೆಗೆ ಪ್ರತಿಭಟನೆ ಮುಂದುವರಿಸಲು ರೈತರು ಸಿದ್ಧರಿದ್ದಾರೆ. ಬೇಸಿಗೆಯ ಸುಡುಬಿಸಿಲಿನ ದಿನಗಳನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಮತ್ತೆ ಮಾತುಕತೆಗೆ ಬರಬೇಕು. ಕಾಯ್ದೆಗಳನ್ನು ರದ್ದುಪಡಿಸಬೇಕು’ ಎಂದು ಕಿಸಾನ್ ಏಕತಾ ಮೋರ್ಚಾ ಹೇಳಿದೆ.

ಹೆದ್ದಾರಿ ತಡೆ ಮತ್ತು ಕಪ್ಪು ಧ್ವಜ

‘ಪ್ರತಿಭಟನೆಯ ಸ್ಥಳದಲ್ಲಿ ಶನಿವಾರ ಕಪ್ಪುಧ್ವಜವನ್ನು ಹಾರಿಸುವ ಮೂಲಕ ಕರಾಳ ದಿನವನ್ನು ಆಚರಿಸಲು ರೈತ ಸಂಘಟನೆಗಳು ನಿರ್ಧರಿಸಿವೆ. ದೇಶದ ಎಲ್ಲಾ ರಾಜ್ಯಗಳ ಜಿಲ್ಲಾಕೇಂದ್ರಗಳಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಅಲ್ಲಿಯೂ ಕಪ್ಪುಧ್ವಜವನ್ನು ಹಾರಿಸಿ, ಕರಾಳ ದಿನವನ್ನು ಆಚರಿಸಲಾಗುತ್ತದೆ’ ಎಂದು ಕಿಸಾನ್ ಏಕತಾ ಮೋರ್ಚಾ ಹೇಳಿದೆ.

‘ಪ್ರತಿಭಟನೆಯು ನೂರನೇ ದಿನಕ್ಕೆ ಕಾಲಿರಿಸಿರುವುದರ ಅಂಗವಾಗಿ ದೆಹಲಿಯಲ್ಲಿ ಹೆದ್ದಾರಿ ತಡೆ ನಡೆಸಲು ನಿರ್ಧರಿಸಲಾಗಿದೆ. ಉತ್ತರ ದೆಹಲಿಯಿಂದ ದಕ್ಷಿಣ ದೆಹಲಿಗೆ ಸಂಪರ್ಕ ಕಲ್ಪಿಸುವ ಕೆಎಂಪಿ ಎಕ್ಸ್‌ಪ್ರೆಸ್‌ವೇಯಲ್ಲಿ ಶನಿವಾರ ಬೆಳಿಗ್ಗೆ 11ಗಂಟೆಗೆ ಹೆದ್ದಾರಿ ತಡೆ ನಡೆಸಲಾಗುತ್ತದೆ. ಸಂಜೆ 4ರವರೆಗೂ ಹೆದ್ದಾರಿ ತಡೆ ನಡೆಯಲಿದೆ’ ಎಂದು ಕಿಸಾನ್ ಏಕತಾ ಮೋರ್ಚಾ ಹೇಳಿದೆ.

‘ರೈತರ ಪ್ರತಿಭಟನೆಗೆ ನೆರವು ಮತ್ತು ಬೆಂಬಲ ನೀಡುತ್ತಿರುವವರ ಮೇಲೆ ಕೇಂದ್ರ ಸರ್ಕಾರವು ದಾಳಿ ನಡೆಸುತ್ತಿದೆ. ಬೆಂಬಲ ನೀಡುತ್ತಿರುವವರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ನಡೆಸುತ್ತಿದೆ. ಈ ಮೂಲಕ ರೈತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆದರೆ, ಈ ಕಾಯ್ದೆಗಳನ್ನು ರದ್ದುಪಡಿಸುವವರೆಗೂ ರೈತರು ತಮ್ಮ ಹೋರಾಟದಿಂದ ಹಿಂದೆಸರಿಯುವುದಿಲ್ಲ’ ಎಂದು ಕಿಸಾನ್ ಏಕತಾ ಮೋರ್ಚಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT