ಸೋಮವಾರ, ಮೇ 17, 2021
21 °C
ಕೇಂದ್ರ ಸರ್ಕಾರದಿಂದ ಮಾತುಕತೆ ಪ್ರಸ್ತಾವ– ಇಂದು ನಿರ್ಧಾರ ಪ್ರಕಟ

ಪ್ರತಿಭಟನೆ ತೀವ್ರ; ರೈತರಿಂದ ರಸ್ತೆತಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನೊಯಿಡಾ/ನವದೆಹಲಿ: ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದ ಕೃಷಿಗೆ ಸಂಬಂಧಿಸಿದ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಮಂಗಳವಾರ ತೀವ್ರಗೊಂಡಿತ್ತು. ರಸ್ತೆ ತಡೆ ನಡೆಸಿದ್ದರಿಂದ ನೊಯಿಡಾ–ಗ್ರೇಟರ್ ನೊಯಿಡಾ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಕದಲದೇ ರಸ್ತೆಯಲ್ಲಿ ನಿಲ್ಲಬೇಕಾಯಿತು.

ಮಾತುಕತೆ–ಇಂದು ನಿರ್ಧಾರ: ಕೇಂದ್ರ ಸರ್ಕಾರ ಮುಂದಿಟ್ಟಿರುವ ಹೊಸ ಮಾತುಕತೆ ಪ್ರಸ್ತಾವದ ಬಗ್ಗೆ ರೈತ ಸಂಘಟನೆಗಳು ಬುಧವಾರ ನಿರ್ಧಾರ ತೆಗೆದುಕೊಳ್ಳಲಿವೆ. ಮಾತುಕತೆ ಕುರಿತು ಮಂಗಳವಾರ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿತ್ತು.

ಭಾರತದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾಗವಹಿಸಬಾರದು ಎಂದು ಒತ್ತಾಯಿಸಿ ಬ್ರಿಟನ್‌ನ ಸಂಸದರಿಗೆ ಪತ್ರ ಬರೆಯಲು ರೈತ ಸಂಘಟನೆಗಳು ನಿರ್ಧರಿಸಿವೆ.

ಆಕ್ಷೇಪಣೆಗೆ ಗಡುವು
ಬೆಂಗಳೂರು: ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಮುಂದಿನ ಎಲ್ಲಾ ಕ್ರಮಗಳೂ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತವೆ ಎಂದು ಹೈಕೋರ್ಟ್‌ ಹೇಳಿದೆ.

ತಿದ್ದುಪಡಿ ಪ್ರಶ್ನಿಸಿ ಬೆಂಗಳೂರಿನ ವಕೀಲರಾದ ಗೀತಾ ಮಿಶ್ರಾ, ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸುಗ್ರೀವಾಜ್ಞೆ ಪ್ರಶ್ನಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಜ.5ರವರೆಗೆ ಗಡುವು ನೀಡಿತು.

‘ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಉಭಯ ಸದನಗಳು ಅನುಮೋದಿಸಿವೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕು’ ಎಂದು ಸರ್ಕಾರದ ಪರ ವಕೀಲರು ಕೋರಿದರು. ‘ಮಸೂದೆಗೆ ರಾಜ್ಯಪಾಲರು ಇನ್ನೂ ಅನುಮೋದನೆ ನೀಡಿಲ್ಲ. ಆಕ್ಷೇಪಣೆ ಸಲ್ಲಿಸಲು ಸರ್ಕಾರ ವಿಳಂಬ ಮಾಡುತ್ತಿದ್ದು, ಮತ್ತೊಮ್ಮೆ ಕಾಲಾವಕಾಶ ನೀಡಬಾರದು’ ಎಂದು ಅರ್ಜಿದಾರರ ಪರ ವಕೀಲರು ಪೀಠದ ಗಮನಕ್ಕೆ ತಂದರು.

‘ತಿದ್ದುಪಡಿ ಮಸೂದೆಯ ಸಾಂವಿಧಾನಿಕ ಸಿಂಧುತ್ವವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಗಂಭೀರ ವಿಚಾರವಾಗಿರುವ ಕಾರಣ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕಾಗುತ್ತದೆ. ಜ.5ರೊಳಗೆ ಆಕ್ಷೇಪಣೆ ಸಲ್ಲಿಸದಿದ್ದರೆ ಮತ್ತೊಮ್ಮೆ ಸಮಯ ನೀಡುವುದಿಲ್ಲ’ ಎಂದು ತಿಳಿಸಿದ ಪೀಠ, ಜ.6ಕ್ಕೆ ವಿಚಾರಣೆ ಮುಂದೂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು