ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ: ಪಟ್ಟು ಸಡಿಲಿಸದ ರೈತರು, 9ನೇ ಸುತ್ತಿನ ಮಾತುಕತೆಯೂ ವಿಫಲ

Last Updated 15 ಜನವರಿ 2021, 16:28 IST
ಅಕ್ಷರ ಗಾತ್ರ

ನವದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾನಿರತ ರೈತರು ಮತ್ತು ಕೇಂದ್ರ ಕೃಷಿ ಸಚಿವಾಲಯದ ನಡುವೆ ಶುಕ್ರವಾರ ನಡೆದ 9ನೇ ಸುತ್ತಿನ ಮಾತುಕತೆಯು ವಿಫಲವಾಗಿದೆ. ರೈತರು ಮತ್ತು ಸರ್ಕಾರವು ತಮ್ಮ ಪಟ್ಟುಗಳನ್ನು ಸಡಿಲಿಸದ ಕಾರಣ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ಜನವರಿ 19ಕ್ಕೆ 10ನೇ ಸುತ್ತಿನ ಮಾತುಕತೆ ನಿಗದಿಯಾಗಿದೆ.

ಇಲ್ಲಿನ ವಿಜ್ಞಾನ ಭವನದಲ್ಲಿ 5 ತಾಸು ನಡೆದ ಸಭೆಯಲ್ಲಿ 41 ರೈತ ಸಂಘಟನೆಗಳ ಪ್ರತಿನಿಧಿಗಳು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಸಚಿವಾಲಯದ ಅಧಿಕಾರಿಗಳು ಇದ್ದರು.

ಕಾಯ್ದೆಗಳ ಬಗ್ಗೆ ನಿಮಗೆ ಇರುವ ಆಕ್ಷೇಪಗಳು ಮತ್ತು ಸಲಹೆಗಳನ್ನು ಪಟ್ಟಿ ಮಾಡಲು ಒಂದು ಅನೌಪಚಾರಿಕ ತಂಡವನ್ನು ರಚಿಸಿ ಎಂದು ತೋಮರ್ ಅವರು ರೈತರಿಗೆ ಸಲಹೆ ನೀಡಿದರು. ಆದರೆ, ರೈತರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ಪಟ್ಟನ್ನು ಸಡಿಲಿಸಲಿಲ್ಲ. ಹೀಗಾಗಿ 9ನೇ ಸುತ್ತಿನ ಮಾತುಕತೆಯೂ ವಿಫಲವಾಯಿತು.

ಪ್ರತಿಭಟನಾನಿರತ ರೈತರ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿರುವುದರ ಬಗ್ಗೆ ರೈತರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿಭಟನಾನಿರತ ರೈತರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ರೈತ ಪ್ರತಿನಿಧಿಗಳು ಸಭೆಯಲ್ಲಿ ಒತ್ತಾಯಿಸಿದರು. ಇದು ರಾಜ್ಯ ಸರ್ಕಾರ ಗಳ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಸರ್ಕಾರದ ಪ್ರತಿನಿಧಿಗಳು ಆರಂಭದಲ್ಲಿ ತಿಳಿಸಿದರು. ಆದರೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರದ ಪ್ರತಿನಿಧಿಗಳು ಒಪ್ಪಿಕೊಂಡರು.

‘ಸರ್ಕಾರವು ಇದನ್ನು ಪ್ರತಿಷ್ಠೆಯ ವಿಷಯವನ್ನಾಗಿಸಿಕೊಂಡಿದೆ ಎಂದು ರೈತರು ಭಾವಿಸಿದ್ದಾರೆ. ಆದರೆ ಸರ್ಕಾರವು ಹಲವು ಸಮಸ್ಯೆಗಳನ್ನು ಬಗೆಹರಿಸಲು ಒಪ್ಪಿಕೊಂಡಿದೆ.ಹೀಗಾಗಿ ರೈತರು ತಮ್ಮ ಬೇಡಿಕೆಗಳನ್ನು ಸ್ವಲ್ಪ ಸಡಿಲಿಸಬೇಕು ಎಂದು ತೋಮರ್ ಅವರು ಹೇಳಿದರು. ಆದರೆ, ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಪಂಜಾಬ್ ರೈತ ಮೋರ್ಚಾದ ನಾಯಕ ಬಲ್ಜಿತ್ ಸಿಂಗ್ ಬಾಲಿ ಹೇಳಿದರು.

ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು, ನ್ಯಾಯಾಲಯದ ಮೂಲಕ ಅಲ್ಲ ಎಂದು ಸರ್ಕಾರ ಹೇಳಿದೆ. ಇದನ್ನು ನೋಡಿದರೆ ಪರಿಹಾರ ದೊರೆಯಬಹುದು ಎಂದು ಮತ್ತೊಬ್ಬ ರೈತ ನಾಯಕ ರಾಕೇಶ್ ಟಿಕಾಯತ್ ಹೇಳಿದರು.

ನ್ಯಾಯಾಲಯದ ಹೊರಗೆ ಪರಿಹಾರ?

ರೈತರ ಪ್ರತಿಭಟನೆ ಮತ್ತು ಕೃಷಿ ಕಾಯ್ದೆಗಳ ಬಿಕ್ಕಟ್ಟನ್ನು ಪರಿಹರಿಸಲು ಸುಪ್ರೀಂ ಕೋರ್ಟ್‌ ರಚಿಸಿರುವ ಸಮಿತಿಯು ಜನವರಿ 19ರಂದು ತನ್ನ ಮೊದಲ ಸಭೆ ನಡೆಸಲಿದೆ. ಆದರೆ 10ನೇ ಸುತ್ತಿನ ಮಾತುಕತೆ ನಡೆಸಲು ರೈತ ಸಂಘಟನೆಗಳು ಮತ್ತು ಸರ್ಕಾರವು ಜನವರಿ 19ನ್ನೇ ಆಯ್ಕೆ ಮಾಡಿಕೊಂಡಿವೆ. ಹೀಗಾಗಿ ಏಕಕಾಲದಲ್ಲಿ ಎರಡೂ ಮಾತುಕತೆಗಳು ನಡೆಯುವ ಸಾಧ್ಯತೆ ಇದೆ.

ಸರ್ಕಾರವೂ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸೋಣ ಎಂದು ಪದೇ-ಪದೇ ಹೇಳಿದೆ. ನ್ಯಾಯಾಲಯ ರಚಿಸಿರುವ ಸಮಿತಿಯ ಸಭೆಯಲ್ಲಿ ಭಾಗಿಯಾಗುವುದಿಲ್ಲ. ಈ ಸಮಿತಿಯ ಸದಸ್ಯರು ಕೃಷಿ ಕಾಯ್ದೆಗಳ ಪರವಾಗಿದ್ದಾರೆ. ಹೀಗಾಗಿ ಅಂತಹವರ ಜತೆ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ರೈತ ನಾಯಕರು ಹೇಳಿದ್ದಾರೆ. ನ್ಯಾಯಾಲಯದ ಹೊರಗೇ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಅಧಿಕವಾಗಿದೆ.

ಕಾಂಗ್ರೆಸ್ ಪ್ರತಿಭಟನೆ

ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಕಾಂಗ್ರೆಸ್‌ ದೇಶದಾದ್ಯಂತ ಶುಕ್ರವಾರ ‘ಕಿಸಾನ್ ಅಧಿಕಾರ್ ದಿವಸ್’ ಅನ್ನು ಆಚರಿಸಿತು. ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಈ ಸಲುವಾಗಿ ಪ್ರತಿಭಟನೆ ನಡೆಸಿದರು.

ಛತ್ತೀಸಗಡ, ಜಾರ್ಖಂಡ್, ಹರಿಯಾಣಗಳಲ್ಲಿ ರಾಜಭವನದ ಎದುರು ಪ್ರತಿಭಟನೆ ನಡೆಸಿದರು. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಈ ಕಾಯ್ದೆಗಳ ವಿರುದ್ಧ ಸಹಿ ಸಂಗ್ರಹ ಅಭಿಯಾನವನ್ನು ಕಾಂಗ್ರೆಸ್ ಆಯೋಜಿಸಿತ್ತು. ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಹರಿಯಾಣದಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್‌ ಕಾರ್ಯಕರ್ತರು ಯತ್ನಿಸಿದರು. ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ರಾಜಸ್ಥಾನದ ಹಲವೆಡೆ ಕಾಂಗ್ರೆಸ್‌ ಕಾರ್ಯಕರ್ತರು, ಕೃಷಿ ಕಾಯ್ದೆಗಳು ಮತ್ತು ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT