ಮಂಗಳವಾರ, ಮೇ 17, 2022
29 °C

ಸಚಿನ್ ಸೇರಿದಂತೆ ಸೆಲೆಬ್ರಿಟಿಗಳ ಟ್ವೀಟ್ ತನಿಖೆಗೆ ಮಹಾ ಆದೇಶ; ಬಿಜೆಪಿ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಪ್ರಮುಖವಾದ ರಾಜಕೀಯ ಬೆಳವಣಿಗೆಯೊಂದರಲ್ಲಿ ರೈತರ ಪ್ರತಿಭಟನೆಗೆ ಸಂಬಂಧಪಟ್ಟಂತೆ ಯಾವುದೇ ಒತ್ತಡಕ್ಕೊಳಗಾಗಿ ತಾರೆಗಳು ಟ್ವೀಟ್ ಮಾಡಿದ್ದಾರೆಯೇ ಎಂಬುದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲು ಮಹಾರಾಷ್ಟ್ರದ ಕಾಂಗ್ರೆಸ್-ಶಿವಸೇನಾ ಮೈತ್ರಿ ಸರ್ಕಾರ ಆದೇಶಿಸಿದೆ.

ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರದ ಈ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಭಾರತೀಯ ಜನತಾ ಪಕ್ಷವು (ಬಿಜೆಪಿ), ತೀವ್ರ ವಾಗ್ದಾಳಿ ನಡೆಸಿದೆ.

ಕೇಂದ್ರ ಸರ್ಕಾರದ ವಿವಾದಿತ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ರಿಯಾನಾ ಸೇರಿದಂತೆ ವಿದೇಶಿ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದರು.

ವಿದೇಶಿಯರ ಅಪ ಪ್ರಚಾರದ ವಿರುದ್ಧ ಭಾರತದ ಏಕತೆಗಾಗಿ ಟ್ವೀಟ್ ಮಾಡಿದ್ದವರಲ್ಲಿ ದೇಶದ ಅತ್ಯುನ್ನತ್ತ ನಾಗರಿಕ 'ಭಾರತ ರತ್ನ' ಪ್ರಶಸ್ತಿ ಪುರಸ್ಕೃತ ಸಚಿನ್ ತೆಂಡೂಲ್ಕರ್, ಗಾನ ಕೋಗಿಲೆ ಲತಾ ಮಂಗೇಶ್ಕರ್ ಮುಂತಾದವರು ಸೇರಿದ್ದರು.

ಇದನ್ನೂ ಓದಿ: 

ಕೇಂದ್ರದ ಆಡಳಿತರೂಢ ಬಿಜೆಪಿ ಸರ್ಕಾರವು ಉದ್ದೇಶಪೂರ್ವಕವಾಗಿ ಒತ್ತಡವನ್ನು ಹೇರಿ ತಾರೆಗಳಿಂದ ಟ್ವೀಟ್ ಮಾಡಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಸಂಬಂಧ ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವ ಅನಿಲ್ ದೇಶಮುಖ್ ತನಿಖೆಗೆ ಆದೇಶಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವ ದೇಶಮುಖ್ ನಾಗ್ಪುರದ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾರೆಗಳ ಟ್ವೀಟ್ ವಿರುದ್ಧ ಮಹಾರಾಷ್ಟ್ರ ಸರ್ಕಾರದ ತನಿಖೆ ಆದೇಶವನ್ನು ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್ ಖಂಡಿಸಿದ್ದು, ಅಸಹ್ಯವೆನಿಸುವ ಕ್ರಮ ಎಂದು ಟೀಕಿಸಿದ್ದಾರೆ.

ಮರಾಠಿಗರ ಬಗ್ಗೆ ನಿಮ್ಮ ಹೆಮ್ಮೆಯೀಗ ಎಲ್ಲಿದೆ? ಮಹಾರಾಷ್ಟ್ರದ ಧರ್ಮ ಎಲ್ಲಿದೆ? ನಮ್ಮ ರಾಷ್ಟ್ರದ ಹಿತಕ್ಕಾಗಿ ಸದಾ ಒಂದೇ ಧ್ವನಿಯಲ್ಲಿ ನಿಂತಿರುವ ನೈಜ ಭಾರತ ರತ್ನಗಳ ವಿರುದ್ಧ ತನಿಖೆ ನಡೆಸಲು ಆದೇಶಿಸಿರುವ ಇಂತಹ ರತ್ನಗಳು ದೇಶದಲ್ಲಿ ಎಲ್ಲಿ ಸಿಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು