ಗುರುವಾರ , ಮೇ 26, 2022
28 °C
ದೆಹಲಿಯ ಸಿಂಘು, ಟಿಕ್ರಿ, ಗಾಜಿಪುರ ಗಡಿ ತೊರೆದ ರೈತರು

ದೆಹಲಿ: ಪ್ರತಿಭಟನೆ ಕೈಬಿಟ್ಟು ತವರೂರಿಗೆ ರೈತರ ‘ವಿಜಯಯಾತ್ರೆ’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಒತ್ತಾಯಿಸಿ ಒಂದು ವರ್ಷದಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ರೈತರು ಶನಿವಾರ ಬೆಳಿಗ್ಗೆಯಿಂದ ತಮ್ಮ ಊರುಗಳಿಗೆ ಮರಳಲು ಆರಂಭಿಸಿದ್ದಾರೆ. ರಾಜಧಾನಿಯ ಗಡಿಗಳಲ್ಲಿ ಯಶಸ್ವಿಯಾಗಿ ಕೈಗೊಂಡಿದ್ದ ಸತ್ಯಾಗ್ರಹ ಹಾಗೂ ಈ ಮೂಲಕ ದೊರೆತ ಗೆಲುವಿನ ಸಂಭ್ರಮವನ್ನು ಹೊತ್ತು ಮರಳುತ್ತಿದ್ದಾರೆ.

ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ
ನೀಡಲು ಸಮಿತಿಯೊಂದರನ್ನು ರಚಿಸುವುದಾಗಿ ಕೇಂದ್ರವು ಲಿಖಿತ ಭರವಸೆ ನೀಡಿದೆ. ಪ್ರತಿಭಟನೆ ಯಶಸ್ಸು ಕಂಡಿದ್ದು, ದೆಹಲಿಯ ಸಿಂಘು, ಟಿಕ್ರಿ ಹಾಗೂ ಗಾಜಿಪುರ ಗಡಿಯ ಹೆದ್ದಾರಿಗಳಲ್ಲಿ ಹಾಕಿದ್ದ ದಿಗ್ಬಂಧನವನ್ನು ರೈತರು ತೆರವುಗೊಳಿಸಿದ್ದಾರೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಕಡೆಗೆ ಹೊರಟ ರೈತರು, ಈ ಸಂಭ್ರಮವನ್ನು ‘ವಿಜಯ ಯಾತ್ರೆ’ ಮೂಲಕ ಆಚರಿಸುತ್ತಿದ್ದಾರೆ.

ಒಂದು ವರ್ಷದಿಂದ ಆಶ್ರಯ ನೀಡಿದ್ದ ಟೆಂಟ್‌ಗಳನ್ನು ತೆರವುಗೊಳಿಸಿ, ಸಾಮಗ್ರಿಗಳನ್ನು ಟ್ರ್ಯಾಕ್ಟರ್‌ಗಳಿಗೆ ತುಂಬುತ್ತಿದ್ದ ಚಿತ್ರಣ ಸಿಂಘು, ಗಾಜಿಪುರ ಗಡಿಗಳಲ್ಲಿ ಕಂಡುಬಂದಿತು. ಹೂಗಳಿಂದ ಸಿಂಗಾರಗೊಂಡ ಟ್ರ್ಯಾಕ್ಟರ್‌ಗಳು ಮೆರವಣಿಗೆ ಹೊರಟವು. ವಿಜಯದ ಹಾಡುಗಳು ಮೊಳಗಿದವು. ಬಣ್ಣಬಣ್ಣದ ಟರ್ಬನ್‌ ಧರಿಸಿದ್ದ ಹಿರಿಯರು ಯಾತ್ರೆಯ ಮಾರ್ಗದಲ್ಲಿ ಯುವಕರ ಜೊತೆ ನೃತ್ಯಕ್ಕೆ ಹೆಜ್ಜೆ ಹಾಕಿದರು. ಶನಿವಾರ ಸಂಜೆ ಹೊತ್ತಿಗೆ ಮುಕ್ಕಾಲು ಭಾಗದಷ್ಟು ಜನರು ಸ್ಥಳವನ್ನು ತೆರವುಗೊಳಿಸಿದ್ದು, ಡಿ. 15ರ ಹೊತ್ತಿಗೆ ಸಂಪೂರ್ಣ ತೆರವುಗೊಳ್ಳುವ ನಿರೀಕ್ಷೆಯಿದೆ.

ಸಾವಿರಾರು ರೈತರು ದೆಹಲಿಯ ಮೂರು ಗಡಿಗಳಲ್ಲಿ ಕಳೆದ ವರ್ಷದ ನ.26ರಿಂದ ಪ್ರತಿಭಟನೆ ನಡೆಸುತ್ತಿದ್ದರು. 2021ರ ನ.29ರಂದು ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಯನ್ನು ಸಂಸತ್ತು ಅಂಗೀಕರಿಸಿತು. ಬೆಂಬಲ ಬೆಲೆಗೆ ಕಾನೂನಿನ ಖಾತರಿ ನೀಡುವ ಬಗ್ಗೆ ಲಿಖಿತ ಭರವಸೆ ನೀಡಿದ್ದರಿಂದ ಪ್ರತಿಭಟನೆಗೆ ಅಂತ್ಯ ಹಾಡಲು ರೈತರ
ಸಂಘಟನೆಗಳ ಒಕ್ಕೂಟವಾದ ‘ಸಂಯುಕ್ತಕಿಸಾನ್ ಮೋರ್ಚಾ’ ಗುರುವಾರ ನಿರ್ಧರಿಸಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು