ಸೋಮವಾರ, ಅಕ್ಟೋಬರ್ 18, 2021
27 °C

ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಕಾಡುತ್ತಿದೆ ಭಯ! 

ಜೂಲ್ಫಿಕರ್‌ ಮಜಿದ್‌ Updated:

ಅಕ್ಷರ ಗಾತ್ರ : | |

ಶ್ರೀನಗರ: ಕಾಶ್ಮೀರದಲ್ಲಿ ಕಳೆದ ವಾರ ನಡೆದ ನಾಗರಿಕ ಹತ್ಯೆ ಪ್ರಕರಣದಿಂದಾಗಿ ರಾಜ್ಯದಲ್ಲಿ ವ್ಯಾಪಕ ಭೀತಿ ಮೂಡಿದೆ. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ತೀವ್ರ ಭಯ ಆವರಿಸಿದೆ.   

ಸರ್ಕಾರವು ಶ್ರೀನಗರ ಮತ್ತು ಇತರ ಪ್ರಮುಖ ಪಟ್ಟಣಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಭದ್ರತೆಯನ್ನು ಹೆಚ್ಚಿಸಿದೆ. ಆದರೂ ಹಳ್ಳಿಗಳಲ್ಲಿ ವಾಸಿಸುತ್ತಿರುವವರಿಗೆ ಉಗ್ರರ ಭಯ ಕಾಡುತ್ತಲೇ ಇದೆ.

ಕಣಿವೆ ರಾಜ್ಯದಲ್ಲಿ ಇತ್ತೀಚೆಗೆ ಉಗ್ರರ ಪ್ರತಿರೋಧ ಗುಂಪು ತನ್ನ ಇರುವಿಕೆಯನ್ನು ಸಾಬೀತುಪಡಿಸುವ ಸಲುವಾಗಿ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಸಂಘಟಿಸುತ್ತಿದೆ.  ಐದು ದಿನಗಳಲ್ಲಿ ಏಳು ಮಂದಿ ನಾಗರಿಕರನ್ನು ಉಗ್ರರು ಗುಂಡಿಟ್ಟು ಹತ್ಯೆ ಮಾಡುವುದರೊಂದಿಗೆ ದೇಶದ ಗಮನವು ಕಾಶ್ಮೀರದತ್ತ ಹರಿದಿದೆ. ಈ ಘಟನೆಗಳಿಂದಾಗಿ ಅಲ್ಲಿ ಈ ವರ್ಷ ಈವರೆಗೆ 25ಕ್ಕೂ ಹೆಚ್ಚು ನಾಗರಿಕರ ಹತ್ಯೆ ಆಗಿದೆ ಎಂಬುದೂ ಚರ್ಚೆಗೆ ಬಂದಿದೆ. ಉಗ್ರರ ಕಾರ್ಯಾಚರಣೆ ವಿಧಾನದಲ್ಲಿ ಬದಲಾವಣೆ ಆಗಿರುವುದನ್ನು ಈ ವರ್ಷದ ನಾಗರಿಕರ ಹತ್ಯೆಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಜತೆಗೆ, ಹತ್ಯೆಗೆ ಉಗ್ರರು ಗುರಿ ಮಾಡಿರುವ ವ್ಯಕ್ತಿಗಳನ್ನು ಗಮನಿಸಿದರೆ, ಯಾವುದೋ ನಿರ್ದಿಷ್ಟ ಗುರಿಯನ್ನು ಉಗ್ರರು ಹಾಕಿಕೊಂಡಿದ್ದಾರೆ ಎಂಬುದೂ ಅರಿವಾಗುತ್ತದೆ.

1990ರ ದಶಕದಲ್ಲಿ ಹಿಂಸಾಚಾರಕ್ಕೆ ಬೆದರಿ ಬಹುತೇಕ ಕಾಶ್ಮೀರಿ ಪಂಡಿತರು ಕಣಿವೆಯನ್ನು ತೊರೆದರು. ಆದರೂ, ಕಾಶ್ಮೀರದಲ್ಲೇ ಉಳಿಯಲು ನಿರ್ಧರಿಸಿದ 800 ಕುಟುಂಬಗಳ ಸುಮಾರು 3,400 ಜನರು ಇಲ್ಲಿದ್ದಾರೆ. ಸುಮಾರು 400 ಕಾಶ್ಮೀರಿ ಪಂಡಿತರು ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಉದ್ಯೋಗದಲ್ಲಿದ್ದಾರೆ. ಕಾಶ್ಮೀರದಲ್ಲೇ ಉಳಿಯಲು ನಿರ್ಧರಿಸಿದ್ದಕ್ಕಾಗಿ ಪ್ರಧಾನಮಂತ್ರಿಯ ಪ್ಯಾಕೇಜ್ ಅಡಿಯಲ್ಲಿ ಅವರನ್ನು ಸರ್ಕಾರದ ಇಲಾಖೆಗಳಿಗೆ ನೇಮಕ ಮಾಡಲಾಗಿದೆ. 

ಕಾಶ್ಮೀರಿ ಪಂಡಿತರಂತೆಯೇ ನೂರಾರು ಸಿಖ್‌ ಕುಟುಂಬಗಳೂ ಕಾಶ್ಮೀರ ಕಣಿವೆಯಲ್ಲಿಯೇ ಉಳಿದುಕೊಂಡಿವೆ. ಇವರೆಲ್ಲರೂ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದಾರೆ. 

 ‘ಸಂಜೆ ನಮ್ಮ ಮನೆಯ ಬಾಗಿಲನ್ನು ಯಾರಾದರೂ ಸಣ್ಣದಾಗಿ ತಟ್ಟಿದರೂ ನಮ್ಮ ಇಡೀ ಕುಟುಂಬದವರ ಹೃದಯದ ಬಡಿತ ಏರುತ್ತದೆ. ಏನಾದರೂ ಅನಾಹುತ ಆಗುತ್ತದೆ ಎಂಬುದು ನಮ್ಮ ಭಯ. ನಾವಿಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಲೂ ಆಗದ ಸ್ಥಿತಿಯಲ್ಲಿದ್ದೇವೆ. ಆದರೆ ಸರ್ಕಾರ ಮಾತ್ರ ಮೂಕ ಪ್ರೇಕ್ಷನಂತಾಗಿದೆ,‘ ಎಂದು ಉತ್ತರ ಬಾರಾಮುಲ್ಲಾ ಜಿಲ್ಲೆಯಲ್ಲಿ ವಾಸಿಸುತ್ತಿರುವ ಹೆಸರು ಹೇಳಲಿಚ್ಚಿಸದ ಕಾಶ್ಮೀರಿ ಪಂಡಿತರೊಬ್ಬರು ತಿಳಿಸಿದರು.  

‘1990ರ ದಶಕದ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಉತ್ತುಂಗದಲ್ಲಿತ್ತು. ಆಗಲೂ ನಾವು ಭಯಪಟ್ಟಿರಲಿಲ್ಲ. ನಮ್ಮ ನೆರೆಹೊರೆಯ ಮುಸ್ಲಿಮರ  ಬೆಂಬಲದಿಂದಾಗಿ ನಾವು ಅಂದು ಇಲ್ಲಿಯೇ ಉಳಿದೆವು. ಇಂದಿಗೂ, ಅವರು ನಮಗೆ ಎಲ್ಲಾ ಸಹಾಯದ ಭರವಸೆ ನೀಡಿದ್ದಾರೆ. ಆದರೆ, ಉಗ್ರರು ಹೇಗಾಗಿದ್ದಾರೆಂದರೆ, ಅವರು ಯಾರನ್ನಾದರೂ ಕೊಲ್ಲಬಯಸಿದಾಗ ಅಡ್ಡ ಬರುವ ಮುಸ್ಲಿಮರನ್ನೂ ಬಿಡುತ್ತಿಲ್ಲ,‘ ಎಂದು ತೀವ್ರ ವಿಷಾದದಿಂದ ಹೇಳಿದರು. 

ಕಣಿವೆಯಲ್ಲಿ ವಾಸಿಸುತ್ತಿರುವ ಪಂಡಿತರನ್ನು ಪ್ರತಿನಿಧಿಸುವ ಸಂಘಟನೆಯಾದ ‘ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯ (ಕೆಪಿಎಸ್‌ಎಸ್‌)’ ಅಧ್ಯಕ್ಷ ಸಂಜಯ್ ಟಿಕೂ, ‘ಕಾಶ್ಮೀರದ ಹೊರಗಿನ ನಮ್ಮ ಸಮುದಾಯದ ಸದಸ್ಯರು ‘ವಿಚಾರ ಹೀನ ಹೇಳಿಕೆಗಳನ್ನು ನೀಡುವ ಮೂಲಕ ಇಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರಿಗೆ ಸಮಸ್ಯೆ ಸೃಷ್ಟಿಸುತ್ತಿದ್ದಾರೆ,’ ಎಂದು ಆರೋಪಿಸಿದ್ದಾರೆ.

 ‘ತಮ್ಮ ಮಾತುಗಳು, ತಮ್ಮದೇ ಸಮುದಾಯದ ಜನರಿಗೆ ಕಾಶ್ಮೀರದಲ್ಲಿ ಎಷ್ಟು ಸಮಸ್ಯಾತ್ಮಕವಾಗಬಹುದು ಎಂಬುದು ಅವರಿಗೆ ಅರ್ಥವಾಗುವುದಿಲ್ಲ,‘ ಎಂದು ಅವರು ಹೇಳಿದರು.

ಕಾಶ್ಮೀರಿ ಪಂಡಿತರಿಗೆ ಪ್ರತಿ ಸಂದರ್ಭಗಳಲ್ಲಿ ಬೆಂಬಲವಾಗಿ ನಿಂತ ಮುಸ್ಲಿಂ ಸಮುದಾಯದ ನೆರೆಹೊರೆಯವರಿಗೆ ಕೃತಜ್ಞತೆ ಸಲ್ಲಿಸಿರುವ  ಕಾಶ್ಮೀರಿ ಪಂಡಿತರ ಸಂಘದ ಅಧ್ಯಕ್ಷ ಟಿಕೂ ಅವರು, ಇಮಾಮ್‌ಗಳಿಗೆ ಮನವಿಯೊಂದನ್ನು ಮಾಡಿದ್ದಾರೆ. ಕಾಶ್ಮೀರದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಪೂರ್ಣ ಭದ್ರತೆ ನೀಡಲಾಗುತ್ತದೆ ಎಂದು ಮಸೀದಿಗಳ ಮೂಲಕ ಘೋಷಣೆ ಮಾಡಬೇಕು ಎಂದು ಅವರು ಕೋರಿದ್ದಾರೆ.   

ಭರವಸೆ, ಭದ್ರತೆಗಳ ಹೊರತಾಗಿಯೂ ಇತ್ತೀಚಿನ ದಿನಗಳಲ್ಲಿ ಹಲವಾರು ಪಂಡಿತ ಕುಟುಂಬಗಳು ಕಾಶ್ಮೀರದಿಂದ  ಹೊರನಡೆದಿವೆ. ಅನೇಕರು ವಲಸೆ ಹೋಗಲು ಯೋಜಿಸುತ್ತಿದ್ದಾರೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು