ಮುಂಬೈ: ‘ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ತನಗೆ ಗೊತ್ತಿರುವವರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಿಸುತ್ತಿದೆ. ಇದು ಬದಲಾಗಬೇಕು. ಅತ್ಯಂತ ಸಮರ್ಥರಾದವರನ್ನು ಈ ಹುದ್ದೆಗೆ ನೇಮಿಸುವಂತಾಗಬೇಕು’ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಇಲ್ಲಿ ಆಯೋಜನೆಗೊಂಡಿದ್ದ ಸಮ್ಮೇಳನವೊಂದರಲ್ಲಿ ‘ನ್ಯಾಯಾಂಗದ ಸುಧಾರಣೆ’ ಕುರಿತು ಶುಕ್ರವಾರ ಮಾತನಾಡಿದ ಅವರು, ‘ನ್ಯಾಯಮೂರ್ತಿಗಳ ನೇಮಕಕ್ಕಾಗಿ ಸದ್ಯ ಪಾಲಿಸಲಾಗುತ್ತಿರುವ ಸುಪ್ರೀಂ ಕೋರ್ಟ್ ಕೊಲಿಜಿಯಂ ಪದ್ಧತಿ ಅಪಾರದರ್ಶಕವಾಗಿದೆ. ಕೊಲಿಜಿಯಂಗೆ ಗೊತ್ತಿರುವವರು ನ್ಯಾಯಮೂರ್ತಿಗಳಾಗಿ ನೇಮಕವಾಗುತ್ತಿದ್ದಾರೆ. ಅದು ಈ ಪದ್ಧತಿಯ ಮೂಲ ಸಮಸ್ಯೆ’ ಎಂದು ದೂರಿದ್ದಾರೆ.
ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸಿದರೆ ಪ್ರಕ್ರಿಯೆ ಹೇಗೆ ಭಿನ್ನವಾಗಿರುತ್ತದೆ ಎಂಬ ಪ್ರಶ್ನೆಗೆ, ‘ಮಾಹಿತಿ ಸಂಗ್ರಹಿಸುವ ವಿಚಾರದಲ್ಲಿ ಸರ್ಕಾರ ಸ್ವತಂತ್ರ ಕಾರ್ಯವಿಧಾನ ಹೊಂದಿದೆ. ನಿರ್ಧಾರ ಕೈಗೊಳ್ಳುವ ಮೊದಲು ಗುಪ್ತಚರ ಇಲಾಖೆಯ ಮಾಹಿತಿ ಹಾಗೂ ಇತರ ವರದಿಗಳನ್ನು ಪರಿಗಣಿಸಲಾಗುತ್ತದೆ. ನ್ಯಾಯಾಂಗ ಅಥವಾ ನ್ಯಾಯಾಮೂರ್ತಿಗಳು ಈ ವ್ಯವಸ್ಥೆಯನ್ನು ಹೊಂದಿಲ್ಲ’ ಎಂದು ಉತ್ತರಿಸಿದ್ದಾರೆ.
‘ಸರ್ಕಾರವೇ ನ್ಯಾಯಮೂರ್ತಿಗಳನ್ನು ನೇಮಿಸುವ ಪದ್ಧತಿಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಇದೆ. ನ್ಯಾಯಮೂರ್ತಿಗಳು ನ್ಯಾಯದಾನದ ಪ್ರಕ್ರಿಯೆಗಾಗಿ ಹೆಚ್ಚು ಸಮಯ ಮೀಸಲಿಡಬೇಕೆ ಅಥವಾ ಇಂತಹ ಆಡಳಿತಾತ್ಮಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಕೊಳ್ಳಬೇಕೆ’ ಎಂದೂ ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟ್, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳ ಆಯೋಗ ಕಾಯ್ದೆ ತಿರಸ್ಕರಿಸಿರುವುದರ ಕುರಿತು ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್, ಕಾಯ್ದೆ ತಿರಸ್ಕರಿಸಿದಾಗ ಸರ್ಕಾರ ಏನಾದರೂ ಮಾಡಬಹುದಿತ್ತು. ನ್ಯಾಯಾಂಗದ ಮೇಲಿರುವ ಗೌರವದಿಂದಾಗಿ ಪರ್ಯಾಯ ಹೆಜ್ಜೆಗಳನ್ನು ಇಡಲಿಲ್ಲ. ಹಾಗಂತ ಎಲ್ಲಾ ಸಂದರ್ಭಗಳಲ್ಲೂ ಸರ್ಕಾರ ಮೌನವಾಗಿರುತ್ತದೆ ಎಂದು ಭಾವಿಸಬೇಕಿಲ್ಲ’ ಎಂದಿದ್ದಾರೆ.
‘ಮೋದಿ ಸರ್ಕಾರಕ್ಕೆ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಹೀಗಾಗಿ ಅದನ್ನು ದುರ್ಬಲಗೊಳಿಸುವ ಯಾವ ಕಾರ್ಯಕ್ಕೂ ಕೈಹಾಕಿಲ್ಲ. ನ್ಯಾಯಾಂಗವು ಕಾರ್ಯಾಂಗದ ಪಾತ್ರ ನಿಭಾಯಿಸಲು ಮುಂದಾಗಬಾರದು. ನ್ಯಾಯಮೂರ್ತಿಗಳು ತಾವು ನೀಡುವ ಆದೇಶಗಳಿಗೆ ಸಂಬಂಧಿಸಿದಂತೆ ಮಾತ್ರ ಮಾತನಾಡಬೇಕು. ಅದನ್ನು ಬಿಟ್ಟು ಅನಗತ್ಯ ಹೇಳಿಕೆಗಳನ್ನು ನೀಡಿ ಟೀಕೆಗೆ ಗುರಿಯಾಗಬಾರದು’ ಎಂದು ತಿಳಿಸಿದ್ದಾರೆ.
‘ನ್ಯಾಯಾಂಗ ವ್ಯವಸ್ಥೆಯಲ್ಲೂ ರಾಜಕೀಯವಿದೆ’
‘ನ್ಯಾಯಾಂಗ ವ್ಯವಸ್ಥೆಯಲ್ಲೂ ರಾಜಕೀಯ ಹಾಸುಹೊಕ್ಕಾಗಿದೆ. ಆದರೆ ನ್ಯಾಯಮೂರ್ತಿಗಳು ಅದನ್ನು ತೋರ್ಪಡಿಸುವುದಿಲ್ಲ’ ಎಂದು ಕೊಲಿಜಿಯಂ ಪದ್ಧತಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.
‘ಯಾವ ಪದ್ಧತಿಯೂ ಪರಿಪೂರ್ಣವಾದುದಲ್ಲ. ಅದನ್ನು ಉತ್ತಮಗೊಳಿಸಲು ನಾವು ಪ್ರಯತ್ನಿಸುತ್ತಲೇ ಇರಬೇಕು. ಆ ದಿಸೆಯಲ್ಲಿ ಕೆಲಸ ಮಾಡಬೇಕು’ ಎಂದಿದ್ದಾರೆ.
‘ನೇಮಕಾತಿ ಪದ್ಧತಿಯು ಪಾರದರ್ಶಕವಾಗಿರಬೇಕು. ಜೊತೆಗೆ ಜವಾಬ್ದಾರಿಯಿಂದ ಕೂಡಿರಬೇಕು. ಇದು ಅಪಾರದರ್ಶಕವಾಗಿದ್ದಾಗ ಅದರ ವಿರುದ್ಧ ಸಂಬಂಧಪಟ್ಟ ಸಚಿವರಲ್ಲದೆ ಬೇರೆ ಯಾರು ಮಾತನಾಡಲು ಸಾಧ್ಯ. ಈ ವಿಚಾರದಲ್ಲಿ ನಾನು ಈ ದೇಶದಲ್ಲಿರುವ ವಕೀಲರು, ಕೆಲ ನ್ಯಾಯಮೂರ್ತಿಗಳು ಹಾಗೂ ನಾಗರಿಕರ ಚಿಂತನೆಯನ್ನು ಪ್ರತಿಬಿಂಬಿಸುತ್ತಿದ್ದೇನೆ’ ಎಂದು ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ.
‘ದೇಶದ್ರೋಹ ಕಾನೂನಿನ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ಸರ್ಕಾರ ಹೇಳುತ್ತಲೇ ಇದೆ. ಹೀಗಿದ್ದರೂ ಸುಪ್ರೀಂ ಕೋರ್ಟ್ ಈ ವಿಚಾರಕ್ಕೆ ಜೋತು ಬಿದ್ದಿದೆ. ಎಲ್ಲದಕ್ಕೂ ಲಕ್ಷ್ಮಣ ರೇಖೆಯೊಂದಿದೆ. ಅದನ್ನು ಯಾರೂ ದಾಟಬಾರದು’ ಎಂದು ನ್ಯಾಯಾಲಯದ ನಿಲುವನ್ನು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.