ಸೋಮವಾರ, ಸೆಪ್ಟೆಂಬರ್ 27, 2021
28 °C

ಮಹಿಳಾ ಸುರಕ್ಷತೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂಬೈ ಪೊಲೀಸರಿಗೆ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮಹಿಳಾ ಸುರಕ್ಷತೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೋಮವಾರ ಮುಂಬೈನ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಇತರ ಘಟಕಗಳಿಗೆ ಸೂಚನೆ ನೀಡಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಸಾಕಿನಾಕಾದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಮತ್ತು ರಾಡ್‌ನಿಂದ ಕ್ರೂರವಾಗಿ ಹಲ್ಲೆ ಮಾಡಿದ ನಂತರ 11 ಅಂಶಗಳನ್ನೊಳಗೊಂಡ ಆದೇಶವನ್ನು ಆಯುಕ್ತರು ಹೊರಡಿಸಿದ್ದಾರೆ.

ನಿಯಂತ್ರಣ ಕೊಠಡಿಯಿಂದ ಬರುವ ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ಕರೆಗಳಿಗೂ ತಕ್ಷಣವೇ ಸ್ಪಂದಿಸಬೇಕು. ಸಿಬ್ಬಂದಿ ಕತ್ತಲು ಅಥವಾ ಮಸುಕಾದ ಪ್ರದೇಶಗಳಲ್ಲಿ ನಿಗದಿತವಾಗಿ ಗಸ್ತು ನಡೆಸಬೇಕು. ಅಂತಹ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲು ಮುಂದಾಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಹಿಳಾ ಶೌಚಾಲಯಗಳು ಇರುವ ಪ್ರದೇಶಗಳಲ್ಲಿ ಗಸ್ತು ನಡೆಸಬೇಕು. ಗಸ್ತು ಸಿಬ್ಬಂದಿ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಚಲನವಲನಗಳ ಮೇಲೆ ನಿಗಾ ಇಡಬೇಕು ಮತ್ತು ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಮಹಿಳೆಯರು ಒಬ್ಬಂಟಿಯಾಗಿ ಕಂಡರೆ ಅಂತವರಿಗೆ ಸಹಾಯ ಮಾಡಬೇಕು ಎಂದು ಅದು ಹೇಳಿದೆ.

ರಸ್ತೆಗಳ ಉದ್ದಕ್ಕೂ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸಬೇಕು ಅಥವಾ ಅವುಗಳ ಮಾಲೀಕರು ಪತ್ತೆಯಾಗದಿದ್ದರೆ ಅಂತವುಗಳನ್ನು ವಶಪಡಿಸಿಕೊಳ್ಳಬೇಕು. ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಆರೋಪಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಮತ್ತು ಅಂಥವರ ವಿರುದ್ಧ ನಿಷೇಧಿತ ಕ್ರಮ ಕೈಗೊಳ್ಳಬೇಕು. ದೂರ ಪ್ರಯಾಣದ ರೈಲುಗಳು ಸಂಚರಿಸುವ ಮಾರ್ಗದ ರೈಲ್ವೆ ನಿಲ್ದಾಣಗಳನ್ನು ವ್ಯಾಪ್ತಿಯಲ್ಲಿ ಒಳಗೊಂಡಿರುವ ಪೊಲೀಸ್‌ ಠಾಣೆಗಳು ರಾತ್ರಿ 10 ರಿಂದ ಬೆಳಿಗ್ಗೆ 7ರವರೆಗೆ ಗಸ್ತು ವಾಹನವನ್ನು ನಿಯೋಜಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈಮಧ್ಯೆ ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗರಾಲೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಸಾಕಿನಾಕಾ ಅತ್ಯಾಚಾರ ಸಂತ್ರಸ್ತೆಯು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವೇಳೆ ಟೆಂಪೋದಲ್ಲಿಯೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದ ಕಾನ್‌ಸ್ಟೇಬಲ್ ರಮೇಶ್ ಕಡುಬಾ ಅಹೇರ್ ಅವರನ್ನು ಶೀಘ್ರದಲ್ಲೇ ಅಭಿನಂದಿಸಲಾಗುವುದು ಎಂದು ತಿಳಿಸಿದ್ದಾರೆ.

ಸಾಕಿನಾಕಾ ಪೊಲೀಸ್ ಠಾಣೆಯಲ್ಲಿ ರಾತ್ರಿ ಅಧಿಕಾರಿಯಾಗಿದ್ದ ಇನ್ಸ್‌ಪೆಕ್ಟರ್ ಕಿರಣ್ ಧೂಮೆ ಅವರನ್ನು ಕೂಡ ಸನ್ಮಾನಿಸಲಾಗುವುದು ಎಂದು ನಗರಾಲೆ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು