ಸೋಮವಾರ, ಮೇ 23, 2022
30 °C

ಭೂವಿವಾದ: ಪರಿಶಿಷ್ಟ ಜಾತಿ ಕುಟುಂಬದ ನಾಲ್ವರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಭೂವಿವಾದ ಹಿನ್ನೆಲೆಯಲ್ಲಿ ಬಾಲಕಿ ಸೇರಿದಂತೆ ಪರಿಶಿಷ್ಟ ಜಾತಿಯ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ ಜಿಲ್ಲೆಯಲ್ಲಿ ನಡೆದಿದೆ. ಹತ್ಯೆಗೆ ಮುನ್ನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.

50 ವರ್ಷದ ವ್ಯಕ್ತಿ, ಆತನ ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಹತ್ಯೆ ಮಾಡಲಾಗಿದೆ. ಜಿಲ್ಲೆಯ ಫಂಫಮೌನಲ್ಲಿ ನಾಲ್ವರ ಶವಗಳೂ ಪತ್ತೆಯಾಗಿವೆ. ಒಂದು ಅಥವಾ ಎರಡು ದಿನದ ಹಿಂದೆ ಕೃತ್ಯ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯದ ಹಿಂದೆಯೇ ಕರ್ತವ್ಯಲೋಪ ಆರೋಪದಡಿ ಸ್ಥಳೀಯ ಠಾಣೆಯ ಇನ್‌ಸ್ಪೆಕ್ಟರ್‌ ಸೇರಿದಂತೆ ಇಬ್ಬರನ್ನು ಅಮಾನತುಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಮೃತರ ಸಂಬಂಧಿಕರೊಬ್ಬರ ಪ್ರಕಾರ, ಕೊಲೆಯಾದ ಕುಟುಂಬ ಮತ್ತು ಅದೇ ಗ್ರಾಮದ ಸವರ್ಣೀಯ ಕುಟುಂಬವೊಂದರ ನಡುವೆ ಭೂವಿವಾದ ಇತ್ತು. ಈ ಬಗ್ಗೆ ದೂರು ಸಲ್ಲಿಸಿದ್ದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿರಲಿಲ್ಲ.

ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಜನರು ಆರೋಪಿಗಳ ಬಂಧನ ಮತ್ತು ಮೃತರ ಕುಟುಂಬಗಳಿಗೆ ಪರಿಹಾರಕ್ಕೆ ಒತ್ತಾಯಿಸಿ ಕೆಲಹೊತ್ತು ರಸ್ತೆ ತಡೆ ನಡೆಸಿದರು. ಅಧಿಕಾರಿಗಳ ಭರವಸೆ ನಂತರ ಪ್ರತಿಭಟನೆ ಹಿಂಪಡೆದು ಶವಗಳ ಅಂತ್ಯಕ್ರಿಯೆ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರು, ‘ಪರಿಶಿಷ್ಟರು, ಹಿಂದುಳಿದವರಿಗೆ ರಕ್ಷಣೆಯನ್ನು ಒದಗಿಸಲು ಈ ಸರ್ಕಾರ ವಿಫಲವಾಗಿದೆ’ ಎಂದು ಹೇಳಿದ್ದಾರೆ.

ಕೊಲೆಗೀಡಾದ ಪರಿಶಿಷ್ಟರ ಕುಟುಂಬ ಸದಸ್ಯರನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಭೇಟಿಯಾಗುವ ಸಂಭವವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು