ಶನಿವಾರ, ಜನವರಿ 29, 2022
22 °C
ಚೆನ್ನೈನ ರೇಲಾ ಆಸ್ಪತ್ರೆ ವೈದ್ಯರ ಸಾಧನೆ

ಚೆನ್ನೈ: ಬೆಂಗಳೂರಿನ 4 ವರ್ಷದ ಬಾಲಕನಿಗೆ ಕರುಳಿನ ಕಸಿ ಶಸ್ತ್ರಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಬೆಂಗಳೂರಿನ ಗುಹಾನ್‌ ಎಂಬ ನಾಲ್ಕು ವರ್ಷದ ಬಾಲಕನಿಗೆ ಇಲ್ಲಿನ ರೇಲಾ ಆಸ್ಪತ್ರೆಯ ವೈದ್ಯರು ಕರುಳಿನ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಅಪರೂಪದ ಈ ಶಸ್ತ್ರಚಿಕಿತ್ಸೆ ಏಷ್ಯಾ ಬುಕ್ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ ಎಂದು ಆಸ್ಪತ್ರೆ ತಿಳಿಸಿದೆ.

ರೇಲಾ ಆಸ್ಪತ್ರೆಯ ಚೇರಮನ್‌ ಹಾಗೂ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡ ಮುಖ್ಯಸ್ಥರೂ ಆಗಿರುವ ಡಾ.ಮೊಹಮ್ಮದ್ ರೇಲಾ ಅವರು ಬಾಲಕನಿಗೆ ನೆರವೇರಿಸಿದ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಬಾಲಕ ಗುಹಾನ್‌ಗೆ ಕಳೆದ ಸೆಪ್ಟೆಂಬರ್ 13ರಂದು ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ನಾಲ್ಕು ತಿಂಗಳ ಕಾಲ ಆತನ ಆರೋಗ್ಯದ ಮೇಲೆ ನಿಗಾ ಇಡಲಾಗಿತ್ತು. ಕಸಿ ಮಾಡಲಾದ ಸಣ್ಣ ಕರುಳು ಈಗ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ವಯಸ್ಸಿನವರಂತೆ ಎಲ್ಲ ಬಗೆಯ ಆಹಾರವನ್ನು ಬಾಲಕ ಸೇವಿಸಬಹುದಾಗಿದೆ’ ಎಂದು ಡಾ.ಮೊಹಮ್ಮದ್‌ ತಿಳಿಸಿದರು.

‘ಬಾಲಕನ ತಂದೆ ಸ್ವಾಮಿನಾಥನ್‌ ಅವರೇ ಸಣ್ಣ ಕರುಳನ್ನು ದಾನ ಮಾಡಿದ್ದಾರೆ. 150 ಸೆಂ.ಮೀ. ಉದ್ದದಷ್ಟು ಸಣ್ಣ ಕರುಳನ್ನು, ಏಳು ಗಂಟೆ ಕಾಲ ನಡೆದ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಬಾಲಕನಿಗೆ ಕಸಿ ಮಾಡಲಾಯಿತು. ಸ್ವಾಮಿನಾಥನ್‌ ಕೂಡ ಆರೋಗ್ಯದಿಂದಿದ್ದು, ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ವಿವರಿಸಿದರು.

ಬಾಲಕ ಗುಹಾನ್‌ಗೆ ವಿಪರೀತ ವಾಂತಿ ಕಾಣಿಸಿಕೊಂಡಿತು. ಉದರದ ಸೋಂಕಿನಿಂದ ಹೀಗಾಗಿರಬಹುದು ಎಂದು ಭಾವಿಸಿದ ಪಾಲಕರು, ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಬಾಲಕ ‘ವೊಲ್ವುಲಸ್’ ಎಂಬ ಕರುಳಿಗೆ ಸಂಬಂಧಿಸಿದ ಅಪರೂಪದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿದ ವೈದ್ಯರು, ಆತನನ್ನು ರೇಲಾ ಆಸ್ಪತ್ರೆಗೆ ಕಳಿಸಿದರು.

‘ವೊಲ್ವುಲಸ್’ ಸಮಸ್ಯೆ ಕಾಣಿಸಿಕೊಂಡಾಗ, ಸಣ್ಣಕರುಳು ತಿರುಚಿಕೊಳ್ಳುತ್ತದೆ. ಆಗ. ತಿರುಚಿದ ಭಾಗಕ್ಕೆ ರಕ್ತ ಪೂರೈಕೆ ಸ್ಥಗಿತಗೊಳ್ಳುವುದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತದೆ. ಸಣ್ಣ ಕರುಳಿನ ಕಸಿಯೇ ಈ ಸಮಸ್ಯೆಗೆ ಶಾಶ್ವತ ಪರಿಹಾರ’ ಎಂದು ಡಾ.ರೇಲಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು