ಶುಕ್ರವಾರ, ಫೆಬ್ರವರಿ 3, 2023
18 °C

ಹಿಮಾಚಲ ಪ್ರದೇಶ: ಹಿಮಪಾತ 265 ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಿಮ್ಲಾ : ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ, ಚಂಬಾ, ಕಿನ್ನೌರ್, ಶಿಮ್ಲಾ ಮತ್ತು ಕುಲ್ಲು ಜಿಲ್ಲೆಗಳಲ್ಲಿ ತೀವ್ರ ಹಿಮಪಾತದಿಂದಾಗಿ 265 ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದೇ ವೇಳೆ ರಾಜ್ಯದ ಕೆಲವೆಡೆ ಬುಧವಾರ ಭಾರಿ ಮಳೆಯೂ ಆಗಿದೆ.

ರಾಜ್ಯದಲ್ಲಿ ಕನಿಷ್ಠ ತಾಪಮಾನ 3ರಿಂದ 5ಕ್ಕೆ ಏರಿಕೆಯಾಗಿದೆ. ಕೀಲಾಂಗ್‌ ಪ್ರದೇಶದಲ್ಲಿ ರಾತ್ರಿ ಅತ್ಯಂತ ಕಡಿಮೆ ಅಂದರೆ –4.7 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.

ಲಾಹೌಲ್ ಮತ್ತು ಸ್ಪಿತಿಯಲ್ಲಿ 139 ರಸ್ತೆಗಳು, ಚಂಬಾದಲ್ಲಿ 92, ಶಿಮ್ಲಾ ಮತ್ತು ಕುಲ್ಲುದಲ್ಲಿ ತಲಾ 13, ಮಂಡಿಯಲ್ಲಿ ಮೂರು ಮತ್ತು ಕಂಗ್ರಾ ಜಿಲ್ಲೆಯಲ್ಲಿ ಎರಡು ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇವುಗಳಲ್ಲಿ ರೋಹ್ಟಾಂಗ್ ಪಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ– 3, ಜಲೋರಿ ಪಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ– 305 ಮತ್ತು ಗ್ರಾಂಫುನಿಂದ ಲೋಸ್ಸಾರ್‌ ವರೆಗಿನ ರಾಷ್ಟ್ರೀಯ ಹೆದ್ದಾರಿ– 505 ಸೇರಿವೆ.

ಮಳೆ ವಿವರ: ನಗ್ರೋಟಾ ಸೂರಿಯನ್‌ ಪ್ರದೇಶದಲ್ಲಿ 90 ಮಿ.ಮೀ ಮಳೆಯಾಗಿದೆ. ಹಾಗೆಯೇ ಚಂಬಾದಲ್ಲಿ 73 ಮಿ.ಮೀ, ಗುಲೇರ್ 69 ಮಿ.ಮೀ, ಧರ್ಮಶಾಲಾ 68 ಮಿ.ಮೀ, ಗುಲ್ಯಾನಿ 60 ಮಿ.ಮೀ, ಉನಾ 50 ಮಿ.ಮೀ, ಪಾಲಂಪುರ್ 40 ಮಿ.ಮೀ ಮತ್ತು ಹಮೀರ್‌ಪುರ 28 ಮಿ.ಮೀ ನಷ್ಟು ಮಳೆ ಸುರಿದಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಶ್ರೀನಗರ: ವಿಮಾನ ಸಂಚಾರಕ್ಕೆ ತೊಡಕು

ಶ್ರೀನಗರ: ಕಾಶ್ಮೀರದ ಹೆಚ್ಚಿನ ಪ್ರದೇಶಗಳಲ್ಲಿ ಹಿಮಪಾತ ಸಂಭವಿಸುತ್ತಿರುವ ಕಾರಣ ಇಲ್ಲಿನ ವಾಯು ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.

ಕಾಶ್ಮೀರದ ಬಹುತೇಕ ಕಡೆಗಳಲ್ಲಿ ಲಘು ಹಿಮಪಾತ ದಾಖಲಾಗಿದೆ. ಆದರೆ ಇಲ್ಲಿನ ಎತ್ತರದ ಪ್ರದೇಶಗಳಲ್ಲಿ ಭಾರೀ ಹಿಮಪಾತ ಸಂಭವಿಸಿದೆ. ದಿನ ಕಳೆದಂತೆ ಹಿಮಪಾತದ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಿಮಪಾತದ ಪರಿಣಾಮ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಸಂಚಾರ ವಿಳಂಬವಾಗಿದೆ. ವಿಮಾನ ನಿಲ್ದಾಣದಲ್ಲಿ ಹಿಮದ ಶೇಖರಣೆ ಹೆಚ್ಚು ಇಲ್ಲದಿದ್ದರೂ, ಕಡಿಮೆ ಗೋಚರತೆಯು ವಿಮಾನ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು