ಚೆನ್ನೈ: ಡಿಎಂಕೆ ಪಾಲಿಗೆ ಕ್ರಾಂತಿಕಾರಕ ಯೋಜನೆ ಎಂದೇ ಬಿಂಬಿತವಾಗಿರುವ ‘ಮಗಳಿರ್ ಉರಿಮೈ ತೊಗೈ’ (ನೆರವು ಮಹಿಳೆಯರ ಹಕ್ಕು) ಯೋಜನೆಯನ್ನು ಡಿಎಂಕೆ ಸೋಮವಾರ ಘೋಷಿಸಿದ್ದು ಅರ್ಹ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹1 ಸಾವಿರ ನೆರವು ನೀಡಲಾಗುತ್ತದೆ.
ರಾಜ್ಯ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು 2023–24ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿದರು. ಡಿಎಂಕೆ ಸ್ಥಾಪಕ, ದಿವಂಗತ ಸಿ.ಎನ್. ಅಣ್ಣಾದೊರೈ ಜನ್ಮ ದಿನವಾದ ಸೆ.15ರಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಈ ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
‘ಬಜೆಟ್‌ನಲ್ಲಿ ಈ ಯೋಜನೆಗಾಗಿ ₹ 7 ಸಾವಿರ ಕೋಟಿ ಮೀಸಲಿಡಲಾಗಿದೆ. ರಾಜ್ಯದ ಮಹಿಳೆಯರ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸಲು ಇದು ಸಹಕಾರಿಯಾಗಲಿದೆ’ ಎಂದು ಸಚಿವ ತ್ಯಾಗರಾಜನ್ ಅಭಿಪ್ರಾಯಪಟ್ಟರು.
2021ರ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಡಿಎಂಕೆ ಈ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿತ್ತು. ಡಿಎಂಕೆಯ ಈ ಭರವಸೆಯು ಭಾರಿ ಜನಪ್ರಿಯತೆ ಪಡೆದಿತ್ತು. 2024ರ ಲೋಕಸಭಾ ಚುನಾವಣೆಗೆ ಒಂದು ವರ್ಷ ಇರುವಾಗ ಡಿಎಂಕೆ ಈ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.