ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಸಂಪತ್ತು ವರ್ಷದಲ್ಲಿ ₹ 5.88 ಲಕ್ಷ ಕೋಟಿ ಏರಿಕೆ

ಪ್ರತಿದಿನ ₹1,600 ಕೋಟಿಯಷ್ಟು ಸಂಪತ್ತು ಹೆಚ್ಚಳ
Last Updated 21 ಸೆಪ್ಟೆಂಬರ್ 2022, 21:13 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಕುಟುಂಬದ ಸಂಪತ್ತಿನ ಮೌಲ್ಯವು ಕಳೆದ ಒಂದು ವರ್ಷದಲ್ಲಿ ಪ್ರತಿನಿತ್ಯ ₹ 1,600 ಕೋಟಿ ಯಷ್ಟು ಹೆಚ್ಚಾಗಿದೆ. ಒಂದು ವರ್ಷದಲ್ಲಿ ಅವರ ಸಂಪತ್ತು ₹ 5.88 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ಸಂಪತ್ತಿನ ಒಟ್ಟು ಮೌಲ್ಯವು ಕಳೆದ ಒಂದು ವರ್ಷ ದಲ್ಲಿ ಶೇಕಡ 116ರಷ್ಟು ಏರಿಕೆ ಕಂಡಿದೆ.

ಬುಧವಾರ ಬಿಡುಗಡೆ ಆಗಿರುವ ‘ಐಐಎಫ್‌ಎಲ್‌ ವೆಲ್ತ್‌ ಹುರೂನ್‌ ಇಂಡಿಯಾ ರಿಚ್‌ ಲಿಸ್ಟ್‌ 2022’ ವರದಿ ಯಲ್ಲಿ ಈ ವಿವರ ಇದೆ.

ವರದಿಯ ಪ್ರಕಾರ ಅದಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಅದಾನಿ ಅವರು ಈ ಹೆಗ್ಗಳಿಕೆಗೆ ಪಾತ್ರರಾಗಿರುವುದು ಇದೇ ಮೊದಲು. ಅವರ ಸಂಪತ್ತಿನ ಒಟ್ಟು ಮೌಲ್ಯ ₹ 10.94 ಲಕ್ಷ ಕೋಟಿ. 2018ರಲ್ಲಿ ಅವರ ಸಂಪತ್ತಿನ ಮೌಲ್ಯವು ₹71,200 ಕೋಟಿ ಆಗಿತ್ತು.

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ಭಾರತದ ಎರಡನೆಯ ಅತ್ಯಂತ ಶ್ರೀಮಂತ ವ್ಯಕ್ತಿ. 2021ರಲ್ಲಿ ಅಂಬಾನಿ ಅವರ ಸಂಪತ್ತಿನ ಮೌಲ್ಯವು ಅದಾನಿ ಅವರ ಸಂಪತ್ತಿನ ಮೌಲ್ಯಕ್ಕಿಂತ ₹ 2 ಲಕ್ಷ ಕೋಟಿಯಷ್ಟು ಹೆಚ್ಚಿತ್ತು. 2022ರಲ್ಲಿ ಅದಾನಿ ಅವರ ಸಂಪತ್ತಿನ ಮೌಲ್ಯವು ಅಂಬಾನಿ ಅವರ ಸಂಪತ್ತಿನ ಮೌಲ್ಯಕ್ಕಿಂತ ₹ 3 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ ಎಂದು ವರದಿಯು ತಿಳಿಸಿದೆ.

ಫೋಬ್ಸ್‌ ನಿಯತಕಾಲಿಕೆ ಸಿದ್ಧ ಪಡಿಸುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಅವರು ಈಗ ಮೂರನೆಯ ಸ್ಥಾನದಲ್ಲಿದ್ದಾರೆ. ಅವರು ಕಳೆದ ವಾರದಲ್ಲಿ ಜಗತ್ತಿನ ಎರಡನೆಯ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕಿರು ಅವಧಿಗೆ ಪಾತ್ರರಾಗಿದ್ದರು.

‘2012ರಲ್ಲಿ ಅದಾನಿ ಅವರ ಸಂಪತ್ತಿನ ಮೌಲ್ಯವು ಅಂಬಾನಿ ಅವರ ಸಂಪತ್ತಿನ ಮೌಲ್ಯದ ಆರನೆಯ ಒಂದರಷ್ಟು ಮಾತ್ರ ಇತ್ತು. 10 ವರ್ಷಗಳಲ್ಲಿ ಅಂಬಾನಿ ಅವರನ್ನು ಅದಾನಿ ಶ್ರೀಮಂತಿಕೆಯಲ್ಲಿ ಮೀರಿಸುತ್ತಾರೆ ಎಂದು ಆಗ ಯಾರೂ ಊಹಿಸಿರಲಿಕ್ಕಿಲ್ಲ. ಇದು ದೇಶದ ಅರ್ಥ ವ್ಯವಸ್ಥೆಯ ರಾಚನಿಕ ಬದಲಾವಣೆ ಹಾಗೂ ಚೈತನ್ಯವನ್ನು ತೋರಿಸುತ್ತಿದೆ’ ಎಂದು ಹುರೂನ್‌ ಇಂಡಿಯಾ ಸಂಸ್ಥೆಯ ಮುಖ್ಯ ಸಂಶೋಧಕ ಅನಸ್ ರಹ್ಮಾನ್ ಜುನೈದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT