ಬುಧವಾರ, ಜೂನ್ 29, 2022
23 °C

ಕೋವಿಡ್‌: ಸಂಕಷ್ಟಕ್ಕೆ ಸಿಲುಕಿದ ಮಕ್ಕಳ ಪಾಲನೆಗೆ ಮಾರ್ಗಸೂಚಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19ನಿಂದಾಗಿ ತೊಂದರೆಗೆ ಒಳಗಾಗಿರುವ ಮಕ್ಕಳ ರಕ್ಷಣೆ ಹಾಗೂ ಪಾಲನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮಕ್ಕಳ ಪಾಲನೆ–ರಕ್ಷಣೆಗೆ ಸಂಬಂಧಿಸಿ ರಾಜ್ಯಗಳು, ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು, ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹೊಣೆಗಾರಿಕೆಯನ್ನು ನಿಗದಿ ಮಾಡಲಾಗಿದೆ. ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ಮಾರ್ಗಸೂಚಿಗಳಲ್ಲಿ ವಿವರಿಸಲಾಗಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ರಾಮಮೋಹನ್‌ ಮಿಶ್ರಾ ಅವರು ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.

ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳನ್ನು ರಾಜ್ಯಗಳು ಗುರುತಿಸಬೇಕು. ಪ್ರತಿ ಮಗುವಿನ ವಿವರಗಳನ್ನು ಒಳಗೊಂಡ ಡೇಟಾಬೇಸ್‌ ಸಿದ್ಧಪಡಿಸಬೇಕು. ಮಕ್ಕಳ ನಿರ್ದಿಷ್ಟ ಅಗತ್ಯಗಳನ್ನು ಪಟ್ಟಿ ಮಾಡಬೇಕು ಹಾಗೂ ಈ ವಿವರಗಳನ್ನು ‘ಟ್ರ್ಯಾಕ್‌ ಚೈಲ್ಡ್‌’ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.

ಇದನ್ನೂ ಓದಿ– ಪೋಷಕರನ್ನು ಕಳೆದುಕೊಂಡ ಮಕ್ಕಳ ಜೊತೆ ನಾವಿದ್ದೇವೆ: ಸಚಿವೆ ಶಶಿಕಲಾ ಜೊಲ್ಲೆ

ತಂದೆ ಅಥವಾ ತಾಯಿ ಇಲ್ಲವೇ ಇಬ್ಬರೂ ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ, ಆಸ್ಪತ್ರೆಗಳು ಆ ಕುಟುಂಬದ ನಂಬಿಕಸ್ಥ ವ್ಯಕ್ತಿಯೊಬ್ಬರ ವಿವರಗಳನ್ನು ರೋಗಿಗಳಿಂದ ಪಡೆದು, ಅದನ್ನು ದಾಖಲೆಗಳಲ್ಲಿ ನಮೂದಿಸಬೇಕು. ಮಕ್ಕಳನ್ನು ನೋಡಿಕೊಳ್ಳಬೇಕಾದ ಸಂದರ್ಭ ಎದುರಾದಾಗ, ಆ ವ್ಯಕ್ತಿಯನ್ನು ಸಂಪರ್ಕಿಸಲು ಇದರಿಂದ ಅನುಕೂಲವಾಗುವುದು ಎಂದು ಮಿಶ್ರಾ ತಿಳಿಸಿದರು.

ತೊಂದರೆಗೆ ಒಳಗಾದ ಮಕ್ಕಳಿಗಾಗಿ ‘ಮಕ್ಕಳ ಆರೈಕೆ ಕೇಂದ್ರ’ಗಳನ್ನು (ಸಿಸಿಐ) ಆರಂಭಿಸಬೇಕು. ಒಂದು ವೇಳೆ ಮಕ್ಕಳಿಗೂ ಕೋವಿಡ್‌–19 ತಗುಲಿದರೆ, ಅಂಥವರಿಗಾಗಿ ಸಿಸಿಐಗಳಲ್ಲೇ ಪ್ರತ್ಯೇಕ ವಾಸಕ್ಕೆ ಸೌಲಭ್ಯ ಒದಗಿಸಬೇಕು. ಮಕ್ಕಳ ಮನೋವೈದ್ಯರು ಅಥವಾ ಆಪ್ತಸಮಾಲೋಚಕರು ಈ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಮಕ್ಕಳೊಂದಿಗೆ ಸಂವಾದ ನಡೆಸಿ, ಅವರಲ್ಲಿ ಸ್ಥೈರ್ಯ ತುಂಬಬೇಕು ಎಂದೂ ಸೂಚಿಸಲಾಗಿದೆ.

ದೇಶದಲ್ಲಿ 9,346 ಮಕ್ಕಳು ತಮ್ಮ ಪಾಲಕರ ಪೈಕಿ ಒಬ್ಬರನ್ನು ಕೋವಿಡ್‌ನಿಂದಾಗಿ ಕಳೆದುಕೊಂಡಿದ್ದಾರೆ. 1,700 ಮಕ್ಕಳು ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು