ಮಂಗಳವಾರ, ಅಕ್ಟೋಬರ್ 27, 2020
24 °C
ಪಶ್ಚಿಮ ಬಂಗಾಳ ಸಿ.ಎಂ.ಗೆ ರಾಜ್ಯಪಾಲ ಧನಕರ್‌ ಪತ್ರ

ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್‌ ಧನಕರ್‌ ನಡುವೆ ವಾಕ್ಸಮರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್‌ ಧನಕರ್‌ ನಡುವಿನ ಜಟಾಪಟಿ ತೀವ್ರಗೊಂಡಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಪತ್ರಗಳ ಮೂಲಕವೇ ವಾಕ್ಸಮರ ಮುಂದುವರಿದಿದೆ.

ಪ್ರಧಾನ ಮಂತ್ರಿ ಕಿಸಾನ್‌ ನಿಧಿ (ಪಿಎಂ–ಕಿಸಾನ್‌ ನಿಧಿ) ಅಡಿ ರೈತರಿಗೆ ಹಣ ವರ್ಗಾವಣೆ ಮಾಡುವ ವಿಷಯ ಈಗ ಇಬ್ಬರ ನಡುವಿನ ಜಟಾಪಟಿಗೆ ಕಾರಣವಾಗಿರುವ ಹೊಸ ವಿಷಯ.

‘ಸಂವಿಧಾನದ ಚೌಕಟ್ಟಿನೊಳಗೇ ಕಾರ್ಯನಿರ್ವಹಿಸಿ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲರಿಗೆ ಶನಿವಾರ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ, ಮುಖ್ಯಮಂತ್ರಿಗೆ ಭಾನುವಾರ ಪತ್ರವೊಂದನ್ನು ರವಾನಿಸಿರುವ ರಾಜ್ಯಪಾಲರು, ‘ಪಿಎಂ ಕಿಸಾನ್‌ ಅಡಿ ರೈತರಿಗೆ ಕೇಂದ್ರ ನೀಡುವ ಹಣವನ್ನು ಅವರ ಖಾತೆಗೆ ವರ್ಗಾಯಿಸಲು ರಾಜ್ಯ ಸರ್ಕಾರವೇಕೆ ಮಧ್ಯವರ್ತಿಯಾಗಲು ಬಯಸುತ್ತದೆ’ ಎಂದು ಪ್ರಶ್ನಿಸಿದ್ದಾರೆ.

ವಾರದ ಹಿಂದೆ ಕೇಂದ್ರಕ್ಕೆ ಪತ್ರ ಬರೆದಿದ್ದ ಬ್ಯಾನರ್ಜಿ, ‘ಪಿಎಂ ಕಿಸಾನ್‌ ಮತ್ತು ಆಯುಷ್ಮಾನ್‌ ಭಾರತ್‌ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲು ಸಿದ್ಧ. ಆದರೆ, ಈ ಯೋಜನೆಗಳ ಹಣವನ್ನು ರಾಜ್ಯ ಸರ್ಕಾರದ ಮೂಲಕವೇ ಫಲಾನುಭವಿಗಳಿಗೆ ತಲುಪಿಸಲು ಅವಕಾಶ ನೀಡಿದರೆ ಮಾತ್ರ ಅನುಷ್ಠಾನ ಸಾಧ್ಯ’ ಎಂದು ತಿಳಿಸಿದ್ದರು.

ಬ್ಯಾನರ್ಜಿ ಮುಂದಿಟ್ಟಿದ್ದ ಈ ಮನವಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದ ರಾಜ್ಯಪಾಲ ಧನಕರ್‌, ‘ಇದು ಹಿಮ್ಮುಖ ನಡೆ’ ಎಂದಿದ್ದರು. ಇದಕ್ಕೆ ಅವಕಾಶ ಕೊಟ್ಟರೆ ಭಾರಿ ಭ್ರಷ್ಟಾಚಾರಕ್ಕೆ ದಾರಿ ಮಾಢಿಕೊಟ್ಟಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು