ಸೋಮವಾರ, ಆಗಸ್ಟ್ 8, 2022
24 °C

ಅಸ್ಸಾಂ ಪ್ರವಾಹ: ಮತ್ತೆ 10 ಮಂದಿ ಸಾವು, 45.34 ಲಕ್ಷ ಜನರಿಗೆ ಸಂಕಷ್ಟ

ಪಿಟಿಐ Updated:

ಅಕ್ಷರ ಗಾತ್ರ : | |

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿ ಭೀಕರವಾಗಿದ್ದು, ಶುಕ್ರವಾರ ಮತ್ತೆ 10 ಮಂದಿ ಮೃತಪಟ್ಟಿದ್ದಾರೆ. 45.34 ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾರಕ್ ಕಣಿವೆಯ ಹೆಬ್ಬಾಗಿಲು ಆಗಿರುವ ಸಿಲ್ಚಾರ್ ಪಟ್ಟಣವು ಕಳೆದ 5 ದಿನಗಳಿಂದ ಭಾರಿ ಪ್ರವಾಹಕ್ಕೆ ಸಿಲುಕಿದೆ. ಇದರಿಂದಾಗಿ ಈ ವ್ಯಾಪ್ತಿಯಲ್ಲಿರುವ ಜನರು ಆಹಾರ, ನೀರು ಸೇರಿದಂತೆ ಹಲವು ಕೊರತೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಹಲವಾರು ಪ್ರದೇಶಗಳು ಜಲಾವೃತವಾಗಿವೆ. 5.03 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಹೆದ್ದಾರಿ ಅಕ್ಕ–ಪಕ್ಕದ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.

ರಾಹಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 155 ಹಳ್ಳಿಗಳು ಜಲಾವೃತವಾಗಿದ್ದು, 1.42 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ.

ಶುಕ್ರವಾರ ಒಂದೇ ದಿನ 28 ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿದಿದ್ದು, ವಿವಿಧ ಗ್ರಾಮಗಳಲ್ಲಿ ಹತ್ತು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಪ್ರಕಟಣೆಯಲ್ಲಿ ತಿಳಿಸಿದೆ.

ಅಸ್ಸಾಂನಲ್ಲಿ ಮೇ ತಿಂಗಳಿಂದ ಈವರೆಗೆ ಪ್ರವಾಹ ಹಾಗೂ ಭೂಕುಸಿತದಂಥ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. 

ಬ್ಯಾರಕ್ ಮತ್ತು ಕುಶಿಯಾರ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಬ್ಯಾರಕ್ ಕಣಿವೆಯ ವ್ಯಾಪ್ತಿಯಲ್ಲಿರುವ ಕಚಾರ್, ಕರೀಂಗಂಜ್ ಮತ್ತು ಹೈಲಕಂಡಿ ಜಿಲ್ಲೆಗಳಲ್ಲಿ ನೆರೆ ಉಂಟಾಗಿದೆ. 

ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ವೈಮಾನಿಕ ಸಮೀಕ್ಷೆ ನಡೆಸಿ, ಕೆಲವು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತೀವ್ರ ಪ್ರವಾಹ ಪೀಡಿತ ಜಿಲ್ಲೆಗಳಾದ ಕಚಾರ್, ಬ್ಯಾರಕ್ ಜಿಲ್ಲೆಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಸಿಲ್ಚಾರ್‌ನ ಪ್ರವಾಹ ಪರಿಸ್ಥಿತಿಯನ್ನು ಸಮೀಕ್ಷೆ ನಡೆಸಲು ಮತ್ತು ಸಂತ್ರಸ್ತ ಜನರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಎರಡು ಡ್ರೋನ್‌ಗಳನ್ನು ನಿಯೋಜಿಸಲಾಗಿದೆ.

ಇಟಾನಗರ ಮತ್ತು ಭುವನೇಶ್ವರದಿಂದ ಎಂಟು ಎನ್‌ಡಿಆರ್‌ಎಫ್ ತಂಡಗಳು ಮತ್ತು ನಾಗಾಲ್ಯಾಂಡ್‌ನ ದಿಮಾಪುರದಿಂದ ಸೇನೆಯ ತಂಡವನ್ನು ಸಿಲ್ಚಾರ್‌ನಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು