ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿಯಲ್ಲಿ ಪೂಜೆ ಅರ್ಜಿ ವಿಚಾರಣೆಗೆ ಅರ್ಹ: ಕೋರ್ಟ್

Last Updated 12 ಸೆಪ್ಟೆಂಬರ್ 2022, 18:26 IST
ಅಕ್ಷರ ಗಾತ್ರ

ಲಖನೌ: ಜ್ಞಾನವಾಪಿ ಮಸೀದಿಗೆ ಸಂಬಂಧಿಸಿ ಮಹತ್ವದ ಮತ್ತು ಸುದೀರ್ಘ ಕಾನೂನು ಸಮರಕ್ಕೆ ಕಾರಣವಾಗಬಹುದಾದ ತೀರ್ಪನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ಸೋಮವಾರ ನೀಡಿದೆ.ಜ್ಞಾನವಾಪಿ ಮಸೀದಿ ಆವರಣದಲ್ಲಿ ಇದೆ ಎಂದು ಹೇಳಲಾಗುವ ಶೃಂಗಾರ ಗೌರಿ ದೇಗುಲದಲ್ಲಿ ದಿನವೂ ಪೂಜೆ ಸಲ್ಲಿಸಲು ಅವಕಾಶ ಕೋರಿ ಸಲ್ಲಿಕೆಯಾಗಿರುವ ಅರ್ಜಿಯು ವಿಚಾರಣೆಗೆ ಅರ್ಹ ಎಂದು ಕೋರ್ಟ್ ತೀರ್ಪು ಕೊಟ್ಟಿದೆ.

ಜ್ಞಾನವಾಪಿ ಮಸೀದಿಯ ಆಡಳಿತಮಂಡಳಿ ಅಂಜುಮಾನ್‌ ಇಂತೆ ಜಾಮಿಯಾ ಮಸೀದಿ ಸಮಿತಿಯ ಆಕ್ಷೇಪಗಳನ್ನು ಜಿಲ್ಲಾ ನ್ಯಾಯಾಧೀಶ ಅಜಯ್‌ ಕೃಷ್ಣ ವಿಶೇಷ್‌ ತಳ್ಳಿ ಹಾಕಿದರು. ವಿಚಾರಣೆಯ ಬಳಿಕ ಆಗಸ್ಟ್‌ 24ರಂದು ತೀರ್ಪನ್ನು ಕಾಯ್ದಿರಿಸಲಾಗಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ಇದೇ 22ಕ್ಕೆ ನಿಗದಿ ಮಾಡಲಾಗಿದೆ.

ಜಿಲ್ಲಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಜ್ಞಾನವಾಪಿ ಮಸೀದಿ ಸಮಿತಿಯು ಹೇಳಿದೆ.

ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ 1991ರ ಪ್ರಕಾರ, ಇಂತಹ ಅರ್ಜಿ ಸಲ್ಲಿಕೆಗೆ ಅವಕಾಶವೇ ಇಲ್ಲ ಎಂಬ ಜ್ಞಾನವಾಪಿ ಮಸೀದಿ ಸಮಿತಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ಹಿಂದೂ ದೂರುದಾರರ ಪರ ವಕೀಲ ವಿಷ್ಣು ಶಂಕರ್ ಜೈನ್‌ ಹೇಳಿದ್ದಾರೆ.

‘ಈ ತೀರ್ಪು ದೂರಗಾಮಿ ಪರಿಣಾಮಗಳನ್ನು ಹೊಂದಿದೆ. ಮಸೀದಿ ಸಂಕೀರ್ಣದ ಒಳಭಾಗದಲ್ಲಿ ನಡೆಸಲಾದ ವಿಡಿಯೊ ಚಿತ್ರೀಕರಣವನ್ನು ಈಗ ನ್ಯಾಯಾಲಯವು ವೀಕ್ಷಿಸಬಹುದು’ ಎಂದು ಜೈನ್‌ ಅವರು ಹೇಳಿದ್ದಾರೆ. ಮಸೀದಿ ಸಂಕೀರ್ಣದ ಒಳಭಾಗದಲ್ಲಿ ವಿಡಿಯೊ ಚಿತ್ರೀಕರಣ ನಡೆಸುವಂತೆ ನ್ಯಾಯಾಲಯವೇ ಈ ಹಿಂದೆ ಆದೇಶ ನೀಡಿತ್ತು. ಈ ವಿಡಿಯೊ ಸಮೀಕ್ಷೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಮಸೀದಿಯಲ್ಲಿ ಇರುವ ನೀರಿನ ತೊಟ್ಟಿಯಲ್ಲಿ ‘ಶಿವಲಿಂಗ’ ಪತ್ತೆಯಾಗಿದೆ ಎಂದು ಹಿಂದೂ ದೂರುದಾರರ ಪರ ವಕೀಲರು ಈ ಹಿಂದೆ ಹೇಳಿದ್ದರು. ಅದಾದ ಬಳಿಕ, ಆ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಲು ಕೋರ್ಟ್‌ ಆದೇಶ ಕೊಟ್ಟಿತ್ತು. ಆದರೆ, ಶಿವಲಿಂಗ ಪತ್ತೆಯಾಗಿದೆ ಎಂಬುದನ್ನು ಮಸೀದಿಯ ಪರ ವಕೀಲರು ಅಲ್ಲಗಳೆದಿದ್ದಾರೆ. ಶಿವಲಿಂಗ ಎಂದು ಹೇಳಲಾಗುತ್ತಿರುವ ವಸ್ತುವು ಕಾರಂಜಿ ಎಂದು ಅವರು ಹೇಳಿದ್ದಾರೆ.

ದೂರುದಾರರು ‍‍ಪೂಜೆಯ ಹಕ್ಕನ್ನು ಮಾತ್ರ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಅವರು ಮಸೀದಿಯನ್ನು ದೇಗುಲವಾಗಿ ಪರಿವರ್ತಿಸಬೇಕು ಎಂದು ಕೇಳಿಲ್ಲ. 1993ರವರೆಗೆ ಈ ಮೂರ್ತಿಗೆ ನಿರಂತರವಾಗಿ ಪೂಜೆ ನಡೆಯುತ್ತಿತ್ತು. ಅದಾದ ಬಳಿಕ, ವರ್ಷಕ್ಕೆ ಒಮ್ಮೆ ಪೂಜೆ ನಡೆಯುತ್ತಿತ್ತು ಎಂದು ಕೋರ್ಟ್ ಹೇಳಿದೆ.

‘ಇದೊಂದು ಚಾರಿತ್ರಿಕ ದಿನ’ ಎಂದು ಹಿಂದೂ ದೂರುದಾರರು ಹೇಳಿದ್ದಾರೆ. ‘ಇಡೀ ದೇಶವೇ ಖುಷಿಗೊಂಡಿದೆ. ಪ್ರತಿ ಹಿಂದುವೂ ದೀಪ ಹಚ್ಚಿ ಹರ ಹರ ಮಹಾದೇವ ಎನ್ನಬೇಕು’ ಎಂದು ದೂರುದಾರರಲ್ಲಿ ಒಬ್ಬರಾದ ಮಂಜು ವ್ಯಾಸ್‌ ಹೇಳಿದ್ದಾರೆ. ಮಂಜು ಮತ್ತು ಇತರ ನಾಲ್ವರು ಮಹಿಳೆಯರು 2021ರ ಆಗಸ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಿದ್ದಾರೆ.

ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರು ತೀರ್ಪನ್ನು ಶ್ಲಾಘಿಸಿದ್ದಾರೆ. ಶ್ರೀಕೃಷ್ಣ ಜನ್ಮಭೂಮಿ–ಶಾಹಿ ಮಸೀದಿ ವಿವಾದವನ್ನೂ ಕೈಗೆತ್ತಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

ವಿವಾದ ಏನು?

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಜ್ಞಾನವಾಪಿ ಮಸೀದಿ ವಿಚಾರದಲ್ಲಿ ಹಲವು ದಶಕಗಳಿಂದ ವಿವಾದ ಇದೆ. ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹಿಂದೂಗಳ ಪರವಾಗಿ ತೀರ್ಪು ನೀಡಿದ ಬಳಿಕ, ಕಾಶಿ ವಿಶ್ವನಾಥ ಮಂದಿರದ ಸಮೀಪ ಇರುವ ಈ ಮಸೀದಿಯನ್ನು ‘ವಾಪಸ್‌ ಪಡೆಯಬೇಕು’ ಎಂಬ ಕೂಗು ಪ್ರಬಲವಾಯಿತು.

ಮೊಘಲ್‌ ದೊರೆ ಔರಂಗಜೇಬನು 17ನೇ ಶತಮಾನದಲ್ಲಿ ದೇವಾಲಯದ ಒಂದು ಭಾಗವನ್ನು ನಾಶ ಮಾಡಿ ಮಸೀದಿ ನಿರ್ಮಿಸಿದ್ದಾನೆ ಎಂದು ಹಿಂದೂಗಳು ಪ್ರತಿಪಾದಿಸುತ್ತಿದ್ದಾರೆ. ಆದರೆ, ಔರಂಗಜೇಬನ ಆಳ್ವಿಕೆಗೆ ಮುನ್ನವೇ ಈ ಮಸೀದಿ ಇತ್ತು. ಅದು ಭೂ ದಾಖಲೆಗಳಲ್ಲಿಯೂ ಇದೆ ಎಂಬುದು ಮುಸ್ಲಿಮರ ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT