ಬುಧವಾರ, ಮಾರ್ಚ್ 29, 2023
30 °C
ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತ ಎಂದ ಜೆಡಿಎಸ್‌ ವರಿಷ್ಠ

ಕೇದಾರನಾಥದಲ್ಲಿ ಶಂಕರಾಚಾರ್ಯರ ಪ್ರತಿಮೆ: ಮೋದಿಗೆ ಪತ್ರ ಬರೆದು ದೇವೇಗೌಡ ಹರ್ಷ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ್ದನ್ನು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಕೊಂಡಾಡಿದ್ದಾರೆ.

ಇದನ್ನೂ ಓದಿ: ಕೇದಾರನಾಥದಲ್ಲಿ ಪ್ರಧಾನಿ ಮೋದಿ: ಶಂಕರಾಚಾರ್ಯರ 12 ಅಡಿ ಎತ್ತರದ ಪ್ರತಿಮೆ ಅನಾವರಣ

ಅಲ್ಲದೇ, ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶೃಂಗೇರಿ ಶಾರದಾ ಪೀಠದೊಂದಿಗಿನ ತಮ್ಮ ಒಡಾನಾಟವನ್ನು ಉಲ್ಲೇಖಿಸಿ ದೇವೇಗೌಡರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಏನಿದೆ ಗೌಡರ ಪತ್ರದಲ್ಲಿ?

ಕೇದಾರನಾಥದಲ್ಲಿ ನವೆಂಬರ್ 5 ರಂದು ನಿಮ್ಮಿಂದ ಅನಾವರಣಗೊಂಡ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ನೋಡಿ ನಾನು ಭಾವುಕನಾದೆ.

ಕರ್ನಾಟಕದ ಚಿಕ್ಕಮಗಳೂರಿನ ಶೃಂಗೇರಿಯ ಶಾರದಾ ಪೀಠದ ಅನುಯಾಯಿ ನಾನು. ನಿಮಗೆ ತಿಳಿದಿರುವಂತೆ, ಮಹಾನ್ ಸಂತ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ನಾಲ್ಕು ಶಕ್ತಿಕೇಂದ್ರಗಳಲ್ಲಿ ಇದೂ ಕೂಡ ಒಂದು.

ಇದನ್ನೂ ಓದಿ: ಚಳಿಗಾಲ ಆರಂಭ: ಕೇದಾರನಾಥ, ಯಮುನೋತ್ರಿ ದೇಗುಲಗಳು ಬಂದ್‌

ಶೃಂಗೇರಿ ಮಠ ನನ್ನನ್ನು ವಿಶೇಷವಾಗಿ ಆಕರ್ಷಿಸಿದ್ದು ಅದರ ಸಾಮರಸ್ಯದಿಂದ. ಇದು ಶತಮಾನಗಳಿಂದಲೂ ಅನೇಕ ರಾಜರು, ಆಡಳಿತಗಾರರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದೆ. ಒಡೆಯರು, ಪೇಶ್ವೆಗಳು, ಕೆಳದಿ ಮತ್ತು ತಿರುವಾಂಕೂರು ದೊರೆಗಳು ಮಠದಿಂದ ಪ್ರಯೋಜನ ಪಡೆದಿದ್ದಾರೆ. ಮೈಸೂರು ರಾಜರುಗಳಾದ ಹೈದರ್ ಅಲಿ, ಟಿಪ್ಪು ಸುಲ್ತಾನ್ ಹಾಗೂ ಹೈದರಾಬಾದ್‌ನ ನಿಜಾಮರು ಮಠಕ್ಕೆ ಭಕ್ತಿ ಪ್ರದರ್ಶಿಸಿದ್ದಾರೆ, ಮಾರ್ಗದರ್ಶನ ಪಡೆದಿದ್ದಾರೆ.

ಮಠದ ಮಾರ್ಗದರ್ಶನದ ಶ್ರೀಮಂತ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ. ನನಗೆ ವೈಯಕ್ತಿಕವಾಗಿ ಶೃಂಗೇರಿ ಮಠವು ಸರ್ವಧರ್ಮ ಸಮನ್ವಯದ ಸಂಕೇತವಾಗಿದೆ. ಅತ್ಯಂತ ಪವಿತ್ರವಾದ ದೇವರ ಪೀಠದಿಂದ ನಾನು ನನ್ನ ಜೀವನದುದ್ದಕ್ಕೂ ಪಡೆದ ಆಶೀರ್ವಾದಗಳಿಗೆ ಸದಾ ಋಣಿಯಾಗಿರುತ್ತೇನೆ.

ಮಹಾನ್ ಸಂತ ಶಂಕರಾಚಾರ್ಯರ ಪ್ರತಿಮೆಯನ್ನು ನೋಡಲು ನಾನು ಶೀಘ್ರದಲ್ಲೇ ಕೇದಾರನಾಥಕ್ಕೆ ಭೇಟಿ ನೀಡಲು ಬಯಸುತ್ತೇನೆ. ಈ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರೂಪಿಸಿರುವುದು ತುಂಬಾ ಸಂತೋಷದ ವಿಷಯ. ಕರ್ನಾಟಕದ ಮೈಸೂರು ಜಿಲ್ಲೆಯ ಹೆಚ್‌.ಡಿ ಕೋಟೆಯಿಂದ ಕಪ್ಪುಶಿಲೆಯನ್ನು ಪ್ರತಿಮೆಗಾಗಿ ಬಳಸಲಾಗಿದೆ ಎಂದು ನಾನು ಕೇಳಿಪಟ್ಟೆ. ಶಂಕರಾಚಾರ್ಯರ ಪ್ರತಿಮೆ ರೂಪುಗೊಳ್ಳುವಲ್ಲಿ ಕರ್ನಾಟಕದ ಪಾತ್ರ ತುಂಬಾ ಇದೆ. ಎಲ್ಲವೂ ದೈವಿಕವಾಗಿ ಕೂಡಿಬಂದಿದೆ. ಪರಮಾತ್ಮನ ಕೃಪೆ ನಿಮ್ಮ ಮೇಲಿರಲಿ.

ಹೀಗೆ, ಶೃಂಗೇರಿ ಶಾರದ ಪೀಠವನ್ನು, ಶಂಕರಾಚಾರ್ಯರನ್ನು ದೇವೇಗೌಡರು ಸ್ಮರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು